ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಂಕ್ಷನ್‌ ರೈಲು ನಿಲ್ದಾಣಕ್ಕೆ ಜಾರ್ಜ್‌ ಹೆಸರು ಶೀಘ್ರ ಪ್ರಸ್ತಾವ: ಸುಧೀರ್ ಶೆಟ್ಟಿ

‘ಜಾರ್ಜ್‌ ಫೆರ್ನಾಂಡಿಸ್‌ ರಸ್ತೆ’ ನಾಮಕರಣ ಸಮಾರಂಭದಲ್ಲಿ ಮೇಯರ್‌ ಹೇಳಿಕೆ
Published 7 ಜುಲೈ 2024, 5:09 IST
Last Updated 7 ಜುಲೈ 2024, 5:09 IST
ಅಕ್ಷರ ಗಾತ್ರ

ಮಂಗಳೂರು: ‘ಕಂಕನಾಡಿಯ ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣಕ್ಕೆ ಕೇಂದ್ರದ ಮಾಜಿ ಸಚಿವ ದಿ.ಜಾರ್ಜ್‌ ಫರ್ನಾಂಡಿಸ್ ಹೆಸರಿಡುವ ಬಗ್ಗೆ ಪಾಲಿಕೆಯಲ್ಲಿ ಶೀಘ್ರವೇ ನಿರ್ಣಯಕೈಗೊಂಡು ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಕಳುಹಿಸಲಿದ್ದೇವೆ. ಈ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಮೂಲಕವೇ ನಾಮಕರಣ ಮಾಡುತ್ತೇವೆ’ ಎಂದು ಮೇಯರ್‌ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದರು.

ನಗರದ ಸರ್ಕೀಟ್‌ ಹೌಸ್‌ ಬಳಿಯಿಂದ ಬಿಜೈ ವೃತ್ತದವರೆಗಿನ ರಸ್ತೆಗೆ ‘ಜಾರ್ಜ್‌ ಫರ್ನಾಂಡಿಸ್‌ ರಸ್ತೆ’ ಎಂದು ನಾಮಕರಣ ಮಾಡಿದ ಬಳಿಕ ನಡೆದ ಸಮಾರಂಭದಲ್ಲಿ ಅವರು ಶನಿವಾರ ಮಾತನಾಡಿದರು.  ‘ಬಿಜೈ ವೃತ್ತದಲ್ಲಿ ಶೀಘ್ರವೇ ಪಾಲಿಕೆ ವತಿಯಿಂದಲೇ ದಿ.ಜಾರ್ಜ್ ಫರ್ನಾಂಡಿಸ್ ಪುತ್ಥಳಿ ಸ್ಥಾಪಿಸಲಿದ್ದೇವೆ’ ಎಂದರು.

‘ನಾನು ಮೇಯರ್‌ ಆಗಿರುವಾಗಲೇ ಈ ರಸ್ತೆಗೆ ದಿ.ಜಾರ್ಜ್‌ ಫರ್ನಾಂಡಿಸ್‌ ಹೆಸರಿಡುವ ಅವಕಾಶ ಸಿಕ್ಕಿದ್ದು ಭಾಗ್ಯ. ಈ ನಿರ್ಣಯ ತ್ವರಿತವಾಗಿ ಜಾರಿಯಾಗಲು ನೆರವಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಜಾರ್ಜ್ ಅವರಂತೆ ಶುದ್ಧ ಹಸ್ತದ ರಾಜಕಾರಾಣಿಯಾಗಲು ಪ್ರಯತ್ನಿಸೋಣ’ ಎಂದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ, ‘ತಮ್ಮ ನಡೆ- ನುಡಿ, ವ್ಯಕ್ತಿತ್ವ, ಆದರ್ಶಗಳಿಂದಾಗಿ ಜನರಿಗೆ ಹತ್ತಿರವಾದವರು ಜಾರ್ಜ್‌. ಕಾರ್ಗಿಲ್ ಯುದ್ದದ ಸಂದರ್ಭದಲ್ಲಿ ಪಾಕಿಸ್ತಾನದ ಸಂಚನ್ನು ಜಗತ್ತಿನೆದುರು ಬಯಲುಗೊಳಿಸಿದ್ದರು.  ಎನ್‌ಸಿಸಿ ಕೆಡೆಟ್‌ ಆಗಿ ಗಣರಾಜ್ಯೊತ್ಸವ ಪರೇಡ್‌ನಲ್ಲಿ ಭಾಗವಹಿಸಿದ್ದಾಗ ಅವರನ್ನು ಭೇಟಿಯಾಗಿದ್ದ ನಾನು ಅವರ ವ್ಯಕ್ತಿತ್ವದಿಂದ ಪ್ರಭಾವಿತನಾಗಿದ್ದೇನೆ. ಅವರ ಪುತ್ಥಳಿ ನಿರ್ಮಾಣಕ್ಕೆ ಹಾಗೂ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಅವರ ಹೆಸರು ಇಡಲು ನನ್ನಿಂದಾದ ಪ್ರಯತ್ನ ಮಾಡುತ್ತೇನೆ’ ಎಂದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ‘ಕಾರ್ಮಿಕರ, ಶೋಷಿತರ ಧ್ವನಿಯಾಗಿದ್ದ ಜಾರ್ಜ್ ಸಿದ್ದಾಂತಗಳ ಜೊತೆ ಎಂದೂ ರಾಜಿಯಾಗಲಿಲ್ಲ. ಅವರ ಹೋರಾಟದ ಬದುಕು ಶಾಲಾ ವಿದ್ಯಾರ್ಥಿಗಳಿಗೆ ಪಠ್ಯವಾಗಬೇಕು’ ಎಂದರು.

ಶಾಸಕ ವೇದವ್ಯಾಸ್ ಕಾಮತ್, ‘ತುರ್ತು ಪರಿಸ್ಥಿತಿ ವೇಳೆ ಜಾರ್ಜ್‌ ಅವರಿಗೆ ಕಷ್ಟ ನೀಡಿದಾಗ, ಇಲ್ಲಸಲ್ಲದ ಆರೋಪ ಹೊರಿಸಿ ಸಚಿವ ಸ್ಥಾನದಿಂದ ಕೆಳಗಿಳಿಸಿದಾಗ ಕರಾವಳಿಯ ಜನ ಅವರ ಪರ ನಿಲ್ಲಬೇಕಿತ್ತು’ ಎಂದರು.

ಜಾರ್ಜ್ ಫರ್ನಾಂಡಿಸ್ ಅವರ ಸೋದರ ಮೈಕೆಲ್ ಫರ್ನಾಂಡಿಸ್ ಅವರು ಬಿಜೈ ವೃತ್ತದಲ್ಲಿ ರಸ್ತೆಯ ನಾಮಫಲಕವನ್ನು ಅನಾವರಣಗೊಳಿಸಿದರು.  

ರಸ್ತೆಗೆ ಜಾರ್ಜ್‌ ಫರ್ನಾಂಡಿಸ್ ಹೆಸರಿಡಲು ಹೋರಾಟ ನಡೆಸಿದ್ದ ರಿಚರ್ಡ್ ಮೊರಾಸ್ ಅವರನ್ನು ಅಭಿನಂದಿಸಲಾಯಿತು. 

ಫಾ. ಜಾನ್ಸನ್ ಸಿಕ್ವೇರಾ, ಶಾಸಕ ಡಾ.ವೈ.ಭರತ್ ಶೆಟ್ಟಿ, ಉಪಮೇಯರ್ ಸುನೀತಾ, ಪಾಲಿಕೆಯ ಪ್ರತಿಪಕ್ಷ ನಾಯಕ ಪ್ರವೀಣಚಂದ್ರ ಆಳ್ವ, ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಶಶಿಧರ್ ಹೆಗ್ಡೆ, ಭಾಸ್ಕರ್ ಮೊಯಿಲಿ, ಭರತ್ ಕುಮಾರ್, ಗಣೇಶ್ ಕುಲಾಲ್, ವರುಣ್ ಚೌಟ, ಲ್ಯಾನ್ಸಿಲಾಟ್ ಪಿಂಟೊ, ಶಕೀಲಾ ಕಾವ, ಅಶೋಕ್ ಪಿಂಟೊ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT