ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಎನ್‌ಯು: ರೋಗಗ್ರಸ್ತ ಕೈಗಾರಿಕೆ

ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ಸಂಸದ ತೇಜಸ್ವಿ ಸೂರ್ಯ
Last Updated 30 ನವೆಂಬರ್ 2019, 15:27 IST
ಅಕ್ಷರ ಗಾತ್ರ

ಮಂಗಳೂರು: ‘ರೋಗಗ್ರಸ್ತ ಕೈಗಾರಿಕೆಯ ಮಾದರಿಯಲ್ಲಿ ದೆಹಲಿಯ ಜವಾಹರಲಾಲ ವಿಶ್ವವಿದ್ಯಾಲಯ (ಜೆಎನ್‌ಯು)ವನ್ನು ಪುನರ್‌ರಚಿಸುವುದು ಸೂಕ್ತ’ ಎಂದು ಸಂಸದ ತೇಜಸ್ವಿ ಸೂರ್ಯ ಸಲಹೆ ನೀಡಿದರು.

ಇಲ್ಲಿ ನಡೆದ ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ಶನಿವಾರ ಮಾತನಾಡಿದ ಅವರು, ‘ಜೆಎನ್‌ಯುನಲ್ಲಿ ವಿದ್ಯಾರ್ಥಿ ಚಳವಳಿ ಬದಲಾಗಿ ರಾಜಕೀಯ ಪೋಷಿತ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿ ವಿದ್ಯಾರ್ಥಿಗೆ ಸರ್ಕಾರವು ಸುಮಾರು ₹6.9 ಲಕ್ಷ ವಾರ್ಷಿಕ ಖರ್ಚು ಮಾಡುತ್ತಿದೆ. ಈಗ ಕೇವಲ ₹300 ಶುಲ್ಕ ಏರಿಸಿರುವುದನ್ನು ಪ್ರತಿಭಟಿಸುತ್ತಿದ್ದಾರೆ’ ಎಂದರು.

‘ಪ್ರತಿಭಟನೆಗೆ ವಿಶ್ವವಿದ್ಯಾಲಯದ ಕೆಲವು ಪ್ರಾಧ್ಯಾಪಕರೂ ಪ್ರೇರಣೆಯಾಗಿದ್ದಾರೆ. ಕಾನೂನು ಉಲ್ಲಂಘಿಸುವ ವಿದ್ಯಾರ್ಥಿಗಳನ್ನು ಈ ಹಿಂದೆಯೇ ಶಿಕ್ಷಿಸುತ್ತಿದ್ದರೆ, ಇಂದು ಇಂಥ ಸ್ಥಿತಿ ಬರುತ್ತಿರಲಿಲ್ಲ’ ಎಂದರು.

‘ಆಧುನಿಕ ಸ್ಥಿತಿಗೆ ತಕ್ಕಂತೆ ಸಾವರ್ಕರ್‌ ಹಿಂದುತ್ವವೂ ಸ್ವಲ್ಪಬದಲಾವಣೆಗೊಳ್ಳಬೇಕಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇನ್ನೊಂದು ವಿಚಾರಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್‌, ‘ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ವ್ಯಾಪಾರೀಕರಣವೇ ದೇಶಕ್ಕೆ ಅಪಾಯವಾಗಿ ಪರಿಣಮಿಸಿದೆ’ ಎಂದು ಅಭಿಪ್ರಾಯ ಪಟ್ಟರು.

‘ಆಕಾಂಕ್ಷೆ, ಕೌಶಲ ಹಾಗೂ ಅವಕಾಶಗಳ ನಡುವೆ ಸಮತೋಲನ ಇದ್ದರೆ, ಮಾನವ ಸಂಪನ್ಮೂಲ ದೇಶಕ್ಕೆ ಲಾಭವಾಗುತ್ತದೆ. ಉದ್ಯೋಗ ಸೃಷ್ಟಿಯಾದರೆ ಸಾಲದು. ಅದು ಸ್ಥಳೀಯವಾಗಿರಬೇಕು’ ಎಂದರು.

‘ದಕ್ಷಿಣಕ್ಕಿಂತ ಉತ್ತರಭಾರತದಲ್ಲಿ ಜನಸಂಖ್ಯಾ ಏರಿಕೆ ಪ್ರಮಾಣವು ಹೆಚ್ಚಿದ್ದು, ಭಾಷಾ ಅಥವಾ ಇತರ ಪರಿಣಾಮಗಳ ಬಗ್ಗೆ ಆತಂಕ ಪಡಬೇಕಾಗಿಲ್ಲ. ಅಸ್ಸಾಂನಲ್ಲಿ ಈಗಾಗಲೇ 2 ಮಕ್ಕಳಿಗೆ ಮಾತ್ರ ಸೌಲಭ್ಯ ಎಂಬ ಕಾಯಿದೆ ಜಾರಿಗೆ ತಂದಿದ್ದಾರೆ. ಇಂತಹ ಕ್ರಮಗಳನ್ನು ಇತರ ರಾಜ್ಯ ಸರ್ಕಾರಗಳೂ ಕೈಗೊಳ್ಳಲಿವೆ. ಅಲ್ಲದೇ, ಶಿಕ್ಷಣ–ಆರ್ಥಿಕ ಬದಲಾವಣೆಯಿಂದಲೂ ಜನಸಂಖ್ಯೆ ನಿಯಂತ್ರಣಕ್ಕೆ ಬರುತ್ತದೆ’ ಎಂದರು.

‘ಒಂದು ಪ್ರದೇಶದಲ್ಲಿ ಒಂದೇ ಸಮುದಾಯ ಅಥವಾ ಧರ್ಮದ ಜನಸಂಖ್ಯೆಯ ಸಾಂದ್ರತೆ ಹೆಚ್ಚಳವು ದೇಶಕ್ಕೆ ಅಪಾಯ. ಇದನ್ನು ನೀವು ಕೇರಳದ ಮಲಬಾರ್, ತಮಿಳುನಾಡಿನ ಕನ್ಯಾಕುಮಾರಿ, ನಾಗಪಟ್ನಂ ಹಾಗೂ ಈಶಾನ್ಯ ಭಾರತದ ರಾಜ್ಯಗಳಲ್ಲಿ ಕಾಣಬಹುದು’ ಎಂದರು.

‘ಭಾರತೀಯ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಾನವೀಯತೆ ಹಾಗೂ ದೇಶದ ಹಿತದೃಷ್ಟಿಯಿಂದ ತರಲಾಗುತ್ತಿದೆ. ಇದಕ್ಕೆ ಧಾರ್ಮಿಕ ಲೇಪ ಬೇಡ. ಮುಂದೊಂದು ದಿನ ಪಾಕಿಸ್ತಾನವೂ ಭಾರತದ ಭಾಗವಾಗಲಿದೆ’ ಎಂದು ಮಾರ್ಮಿಕವಾಗಿ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT