ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ನಿರ್ಬಂಧ ಸಡಿಲ: ರಸ್ತೆಗೆ ಇಳಿಯದ ಖಾಸಗಿ ಬಸ್‌ಗಳು

ಬಾಗಿಲು ತೆರೆದ ಅಂಗಡಿ, ಹೋಟೆಲ್‌ಗಳು
Last Updated 24 ಜೂನ್ 2021, 5:07 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರದಿಂದ ನಿರ್ಬಂಧ ಸಡಿಲಿಕೆ ಮಾಡಲಾಗಿದ್ದು, ಬೆಳಿಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಎಲ್ಲ ಅಂಗಡಿಗಳನ್ನು ತೆರೆಯಲು ಜಿಲ್ಲಾಡಳಿತ ಅವಕಾಶ ನೀಡಿತ್ತು. ಲಾಕ್‌ಡೌನ್‌ನಿಂದಾಗಿ ಭಾಗಶಃ ಸ್ತಬ್ಧಗೊಂಡಿದ್ದ ಜಿಲ್ಲೆಯ ವಾಣಿಜ್ಯ ಚಟುವಟಿಕೆಗಳು ಎರಡು ತಿಂಗಳ ಬಳಿಕ ಪುನಾರಂಭಗೊಂಡವು.

ಈ ನಡುವೆ ಬಸ್‌ಗಳ ಓಡಾಟಕ್ಕೂ ಅವಕಾಶ ಕಲ್ಪಿಸಿದ್ದರಿಂದ ಸರ್ಕಾರಿ ಬಸ್‌ಗಳು ಬೆಳಿಗ್ಗೆಯಿಂದ ಸಂಚಾರ ಆರಂಭಿಸಿದವು. ಬಸ್‌ನ ಒಟ್ಟು ಸಾಮರ್ಥ್ಯದ ಶೇ 50ರಷ್ಟು ಪ್ರಯಾಣಿಕರು ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ಬೆರಳೆಣಿಕೆಯಷ್ಟು ಪ್ರಯಾಣಿಕರು ಬಸ್‌ನಲ್ಲಿ ಪ್ರಯಾಣಿಸುತ್ತಿರುವುದು ಕಂಡು ಬಂತು.

ಪ್ರಯಾಣಿಕರ ಅಗತ್ಯಕ್ಕೆ ಅನುಗುಣವಾಗಿ ಕೆಎಸ್ಆರ್‌ಟಿಸಿ ಬಸ್‌ಗಳ ಓಡಾಟ ಆರಂಭವಾಗಿತ್ತು. ಮಂಗಳೂರು ನಗರದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿತ್ತು. ಬೆಳಿಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಆಯಾ ಮಾರ್ಗ ತಲುಪುವ ಹಾಗೆ ಜಿಲ್ಲೆಯೊಳಗೆ ಸೀಮಿತ ಸಂಖ್ಯೆಯಲ್ಲಿ ಬಸ್ ಸಂಚಾರ ಆರಂಭಿಸಲಾಗಿತ್ತು. ದೂರದ ಊರಿಗೆ ರಾತ್ರಿವರೆಗೂ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಿಡುವ ಸಾಧ್ಯತೆ ಇದೆ ಎಂದು ಕೆಎಸ್‌ಆರ್‌ಟಿಸಿ ಮೂಲಗಳು ತಿಳಿಸಿವೆ.

ಅಂಗಡಿಗಳಲ್ಲಿ ದಟ್ಟಣೆ: ಬಟ್ಟೆ, ಪಾದರಕ್ಷೆ, ಕ್ಷೌರದ ಅಂಗಡಿಗಳು ಬೆಳಿಗ್ಗೆಯೇ ತೆರೆದುಕೊಂಡಿದ್ದು, ಸಾಮಗ್ರಿಗಳನ್ನು ಜೋಡಿಸಿಡುವ ಕಾರ್ಯದಲ್ಲಿ ಸಿಬ್ಬಂದಿ ನಿರತರಾಗಿರುವುದು ಕಾಣುತ್ತಿತ್ತು. ಇನ್ನು ತರಕಾರಿ ಅಂಗಡಿಗಳಲ್ಲೂ ಜನರ ದಟ್ಟಣೆ ಹೆಚ್ಚಾಗಿತ್ತು.

ಮಧ್ಯಾಹ್ನ 2 ಗಂಟೆಯವರೆಗೆ ಎಲ್ಲ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದರೂ ಕೆಲವೊಂದು ನಿರ್ಬಂಧಗಳನ್ನು ಜಿಲ್ಲಾಡಳಿತ ವಿಧಿಸಿದೆ. ಹವಾನಿಯಂತ್ರಿತ ಅಂಗಡಿಗಳು ಹಾಗೂ ಎಸಿ ಹೊಂದಿರುವ ಮಳಿಗೆಗಳು, ಶಾಪಿಂಗ್ ಕಾಂಪ್ಲೆಕ್ಸ್‌ಗಳು ಮತ್ತು ಮಾಲ್‌ಗಳನ್ನು ತೆರೆಯಲು ಅವಕಾಶ ನೀಡಲಾಗಿಲ್ಲ.

ತೆರೆದ ಹೋಟೆಲ್‌ಗಳು: ಜಿಲ್ಲೆಯ ಪ್ರಮುಖ ಉದ್ಯಮವಾದ ಹೋಟೆಲ್‌ಗಳು ಬುಧವಾರ ಬಾಗಿಲು ತೆರೆದಿದ್ದು, ಮೊದಲ ದಿನ ಕೆಲವೇ ಜನರು ತಿಂಡಿ ಸೇವಿಸಿದರು. ಬಹುತೇಕ ಜನರು ಪಾರ್ಸಲ್‌ಗಳಿಗೆ ಒತ್ತು ನೀಡಿದರು.

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಹೋಟೆಲ್‌ಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ ಕೆಲವೊಂದು ಹೋಟೆಲ್‌ಗಳು ತೆರೆದಿದ್ದವು. ಒಟ್ಟು ಸಾಮರ್ಥ್ಯದ ಶೇ 50ರಷ್ಟು ಗ್ರಾಹಕರಿಗೆ ಮಾತ್ರ ಅವಕಾಶ ನೀಡಲಾಗಿತ್ತು.

ಖಾಸಗಿ ಬಸ್‌ ಸಂಚಾರ ಸ್ತಬ್ಧ: ಜಿಲ್ಲಾಡಳಿತದ ಅನುಮತಿಯ ಮಧ್ಯೆಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳು ಬುಧವಾರ ರಸ್ತೆಗಿಳಿದಿಲ್ಲ.

ಬುಧವಾರದಿಂದ 7 ದಿನ ಬಸ್ ಓಡಿಸಿದರೆ, 1 ತಿಂಗಳ ತೆರಿಗೆ ಕಟ್ಟಬೇಕು. ಇದು ಕಷ್ಟ ಸಾಧ್ಯ. ಈಗಿನ ಡೀಸೆಲ್ ಬೆಲೆಯಲ್ಲಿ ಶೇ 50 ರಷ್ಟು ಪ್ರಯಾಣಿಕರನ್ನು ಕರೆದೊಯ್ಯುವುದು ನಷ್ಟ ಉಂಟಾಗಲಿದೆ. ಅಲ್ಲದೇ ನಗರದಾದ್ಯಂತ ಕಾಮಗಾರಿಗಾಗಿ ರಸ್ತೆ ಅಗೆದು ಹಾಕಲಾಗಿದೆ. 2 ತಿಂಗಳಿನಿಂದ ನಿಂತಿದ್ದ ಬಸ್‌ಗಳನ್ನು ಗ್ಯಾರೇಜ್‌ಗೆ ತೆಗೆದುಕೊಂಡು ಹೋಗಿ ದುರಸ್ತಿ ಮಾಡಿಸಬೇಕಿದೆ ಎಂದು ಬಸ್‌ ಮಾಲೀಕರು ತಿಳಿಸಿದ್ದಾರೆ.

ಜಿಲ್ಲೆಯ ಸಾರ್ವಜನಿಕ ಸಾರಿಗೆಯ ಜೀವನಾಡಿ ಆಗಿರುವ ಖಾಸಗಿ ಬಸ್ ಸಂಚಾರ ಆರಂಭಗೊಳ್ಳದ ಕಾರಣ ನಗರಗಳಲ್ಲಿ ಜನ ಸಂಚಾರ ವಿರಳವಾಗಿದೆ.

ಉದ್ಯಾನ: ವಾಯುವಿಹಾರಕ್ಕೆ ಅವಕಾಶ
ಬೆಳಿಗ್ಗೆ 7 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ ನಡಿಗೆ ಮತ್ತು ಜಾಗಿಂಗ್ ಉದ್ದೇಶಕ್ಕೆ ಮಾತ್ರ ಉದ್ಯಾನಗಳನ್ನು ತೆರೆಯಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಡಳಿತ ಬುಧವಾರ ತಿಳಿಸಿದೆ.

ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ನಡಿಗೆ, ಜಾಗಿಂಗ್‌ ಮಾಡಬಹುದು. ಆದರೆ ಯಾವುದೇ ಗುಂಪು ಚಟುವಟಿಕೆಗಳಿಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಹೆಚ್ಚಿದ ವಾಹನ ದಟ್ಟಣೆ
ಬೆಳಿಗ್ಗೆಯಿಂದಲೇ ಎಲ್ಲ ಅಂಗಡಿಗಳು ಬಾಗಿಲು ತೆರೆದಿದ್ದರಿಂದ ಖರೀದಿಗೆ ಜನರ ಸಂಖ್ಯೆಯೂ ಹೆಚ್ಚಾಗಿತ್ತು. ನಗರದ ರಸ್ತೆಗಳಲ್ಲಿ ಎಲ್ಲಿ ನೋಡಿದರೂ ವಾಹನಗಳ ಸಾಲೇ ಕಾಣುತ್ತಿತ್ತು.

ನಗರದ ಕ್ಲಾಕ್‌ ಟವರ್‌, ಮಲ್ಲಿಕಟ್ಟೆ, ರಥಬೀದಿ, ಉರ್ವ ಸೇರಿದಂತೆ ಹಲವೆಡೆ ದಿನಕ್ಕಿಂತ ಹೆಚ್ಚಿನ ವಾಹನಗಳು ಕಂಡು ಬಂದವು. ಕೆಲವೆಡೆ ವಾಹನಗಳ ಪಾರ್ಕಿಂಗ್‌ಗೂ ಸಮಸ್ಯೆ ಎದುರಾಗಿತ್ತು.

‘ಸಂಪೂರ್ಣ ಅನ್‌ಲಾಕ್ ಘೋಷಿಸಿ’
ಜಿಲ್ಲೆಯಲ್ಲಿ ಕೋವಿಡ್‌–19 ಪ್ರಕರಣಗಳು ಕಡಿಮೆಯಾಗುತ್ತಿದ್ದು, ಉಡುಪಿ ಜಿಲ್ಲೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅನ್‌ಲಾಕ್ ಘೋಷಿಸಿ, ಎಲ್ಲ ವರ್ಗದ ಜನರಿಗೂ ತಮ್ಮ ಕೆಲಸಗಳನ್ನು ಮಾಡಲು ಅವಕಾಶ ಒದಗಿಸಬೇಕು ಎಂದು ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಮನವಿ ಮಾಡಿದ್ದಾರೆ.

ಸರ್ಕಾರ ಕೂಡಲೇ ಲಸಿಕೆ ನೀಡಿ, ಪ್ರತಿಯೊಬ್ಬರು ತಮ್ಮ ಕಸುಬು ಮಾಡಲು ಪ್ರೋತ್ಸಾಹಿಸಬೇಕು. ಜೊತೆಗೆ ಆರ್ಥಿಕವಾಗಿ ಹಿಂದುಳಿದವರಿಗೆ ನೆರವು ನೀಡಬೇಕು. ವಿದ್ಯುತ್ ಬಿಲ್ ಮತ್ತು ನೀರಿನ ಬಿಲ್‌ ಮನ್ನಾ ಮಾಡಲು ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT