ಮಂಗಳೂರು: ಆಡಳಿತ ಪಕ್ಷ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ಪರಸ್ಪರ ದೂಷಣೆ, ಮಾತಿನ ಚಕಮಕಿ, ಗದ್ದಲಕ್ಕೆ ಸಾಕ್ಷಿಯಾದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯು, ಯಾವುದೇ ಇತ್ಯರ್ಥಕ್ಕೆ ಬರಲು ಸಾಧ್ಯವಾಗದೆ ಮೊಟಕುಗೊಂಡಿತು.
ಶನಿವಾರ ಬೆಳಿಗ್ಗೆ 11 ಗಂಟೆಗೆ ಸಭೆ ಆರಂಭವಾಗುತ್ತಿದ್ದಂತೆ ಹಿಂದಿನ ಸಭೆಯ ನಡಾವಳಿಗಳನ್ನು ಸ್ಥಿರೀಕರಿಸುವ ವೇಳೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ತಮ್ಮ ಅವಧಿಯಲ್ಲಿ ಆಗಿರುವ ಸಾಧನೆಗಳನ್ನೂ ಹೇಳಿಕೊಂಡರು. ಈ ನಡುವೆ ಪ್ರತಿಪಕ್ಷದ ನಾಯಕ ಪ್ರವೀಣ್‌ಚಂದ್ರ ಆಳ್ವ ಅವರು, ಅಭಿವೃದ್ಧಿ ವಿಚಾರವಾಗಿ ಮಾತನಾಡಲು ಅವಕಾಶ ನೀಡುವಂತೆ ವಿನಂತಿಸಿದಾಗ, ಮೇಯರ್, ಆಡಳಿತ ಪಕ್ಷದ ಸದಸ್ಯೆ ಸಂಗೀತಾ ನಾಯಕ್ ಅವರು ಮಹತ್ವದ ವಿಚಾರವೊಂದನ್ನು ಮಾತನಾಡಲಿದ್ದಾರೆ ಎಂದಿದ್ದು, ವಾಕ್ಸಮರಕ್ಕೆ ನಾಂದಿಯಾಯಿತು.
ಸಭೆಯ ನಿಯಮದಂತೆ ಮೇಯರ್ ಮಾತಿನ ನಂತರ ಪ್ರತಿಪಕ್ಷದ ನಾಯಕರ ಅಭಿಪ್ರಾಯ ಮಂಡನೆಗೆ ಅವಕಾಶ ನೀಡಬೇಕು ಎಂದು ಪಟ್ಟುಹಿಡಿದ ಕಾಂಗ್ರೆಸ್ ಸದಸ್ಯರು, ಸದನದ ಬಾವಿಗಿಳಿದು ಪ್ರತಿಭಟನೆಗೆ ಕುಳಿತರು. ಮೇಯರ್ ವಿರುದ್ಧ ಧಿಕ್ಕಾರ ಕೂಗಿದರು.
ಗದ್ದಲದ ನಡುವೆಯೇ ಮೈಕ್ ಹಿಡಿದ ಸಂಗೀತಾ ನಾಯಕ್, ‘ಮುಡಾ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದ ವೇಳೆ ಅಲ್ಪಸಂಖ್ಯಾತರಿಗೆ ಸೇರಿದ ಬಸ್ ಮೇಲೆ ಕಲ್ಲು ಎಸೆದಿದ್ದಾರೆ. ಬಸ್‌ನಲ್ಲಿದ್ದ ಅಲ್ಪಸಂಖ್ಯಾತ ಮಹಿಳೆ ಕಲ್ಲು ತಾಗಿ ಗಾಯಗೊಂಡಿದ್ದಾರೆ. ಈ ಪ್ರಕರಣದ ಆರೋಪಿಯಾಗಿರುವ ಮಹಾನಗರ ಪಾಲಿಕೆಯ ನಾಮ ನಿರ್ದೇಶಿತ ಸದಸ್ಯರೊಬ್ಬರು ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದಾರೆ. ಸಾರ್ವಜನಿಕ ಆಸ್ತಿ–ಪಾಸ್ತಿ ಹಾನಿ ಮಾಡಿರುವವರು ಪಾಲಿಕೆ ಸಭೆಯಲ್ಲಿ ಭಾಗವಹಿಸುವುದು ಸರಿಯಲ್ಲ, ಅವರನ್ನು ಹೊರಕ್ಕೆ ಕಳುಹಿಸಬೇಕು’ ಎಂದರು.
ಪ್ರತಿಪಕ್ಷದ ಸದಸ್ಯರು ತಮ್ಮ ಆಸನದಲ್ಲಿ ಕುಳಿತುಕೊಳ್ಳುವಂತೆ ಮೇಯರ್ ಹೇಳಿದರೂ, ಪ್ರತಿಭಟನೆ ಮುಂದುವರಿಯಿತು. ಈ ನಡುವೆ ಮೈಕ್ ತರಿಸಿಕೊಂಡ ಪ್ರತಿಭಟನಕಾರರು, ಅದು ಆನ್ ಆಗದಿದ್ದಾಗ, ಸದಸ್ಯರೊಬ್ಬರು ಅದನ್ನು ಕುಟ್ಟಿ ನೆಲಕ್ಕೆ ಎಸೆದರು.
ಆಗ ಆಡಳಿತ– ಪ್ರತಿಪಕ್ಷಗಳ ನಡುವಿನ ವಾಕ್ಸಮರ ತಾರಕಕ್ಕೇರಿತು. ‘ಮೈಕ್ ಕಿತ್ತೆಸೆಯುವ ಕೃತ್ಯ ಮೂಲಕ ಕಾಂಗ್ರೆಸ್‌ನವರು ಮತ್ತೆ ಗೂಂಡಾ ಪ್ರವೃತ್ತಿ ಪ್ರದರ್ಶಿಸಿದ್ದಾರೆ’ ಎಂದು ಸದಸ್ಯೆ ಶಕೀಲಾ ಕಾವ ಆರೋಪಿಸಿದರು. ‘ಪ್ರತಿಪಕ್ಷದ ಸದಸ್ಯರಿಗೆ ನೈತಿಕತೆ ಇಲ್ಲ, ಸದನದ ಘನತೆ ಹಾಳು ಮಾಡುತ್ತಿದ್ದಾರೆ’ ಎಂದು ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ದೂರಿದರು. ಗದ್ದಲ ಮುಂದುವರಿದಾಗ ಮೇಯರ್ ಸಭೆ ಮೊಟಕುಗೊಳಿಸಿ ಎದ್ದು ನಡೆದರು.
ಅರ್ಧ ಗಂಟೆಯ ನಂತರ ಪುನಃ ಸಭೆ ಆರಂಭವಾಯಿತು. ಪ್ರತಿಪಕ್ಷದ ಸದಸ್ಯರು ಮೇಯರ್ ಪೀಠದ ಎದುರು ಮತ್ತೆ ಧರಣಿ ನಡೆಸಿದರು. ಬಿಜೆಪಿ ಸದಸ್ಯರು, ಪತ್ರಿಕೆಯಲ್ಲಿ ಬಂದ ವರದಿ (ಬಸ್ಸಿಗೆ ಕಲ್ಲು ತೂರಿದವರ ವಿರುದ್ಧ ದಾಖಲಾದ ಪ್ರಕರಣ) ತುಣುಕನ್ನು ಪ್ರದರ್ಶಿಸಿ, ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗಿದರು. ಗದ್ದಲದ ನಡುವೆಯೇ 20ಕ್ಕೂ ಹೆಚ್ಚು ಕಾರ್ಯಸೂಚಿಗಳನ್ನು ಅಂಗೀಕರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.