ಮಂಗಳವಾರ, ಫೆಬ್ರವರಿ 7, 2023
27 °C
ಕುಕ್ಕರ್‌ ಬಾಂಬ್‌ ಸ್ಫೋಟ: ಊಹಾಪೋಹದ ಸುದ್ದಿಗೆ ಕಿವಿಗೊಡಬೇಡಿ– ಪೊಲೀಸ್‌ ಕಮಿಷನರ್‌

ಮಂಗಳೂರು ಸ್ಫೋಟ | ಆರೋಪಿಯ ವಿಚಾರಣೆಯೇ ನಡೆದಿಲ್ಲ: ಪೊಲೀಸ್ ಕಮಿಷನರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ‘ನಗರದ ಗರೋಡಿಯಲ್ಲಿ ನ.19ರಂದು ಆಟೊರಿಕ್ಷಾದಲ್ಲಿ ಕುಕ್ಕರ್‌ ಬಾಂಬ್ ಸ್ಪೋಟಗೊಂಡ ಪ್ರಕರಣದ ಆರೋಪಿ ಮೊಹಮ್ಮದ್‌ ಶಾರಿಕ್‌ಗೆ ಚಿಕಿತ್ಸೆ ಮುಂದುವರಿದಿದ್ದು, ಇದುವರೆಗೂ ಆತನನ್ನು ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ’ ಎಂದು ನಗರ ಪೊಲೀಸ್ ಕಮಿಷನರ್‌ ಎನ್‌.ಶಶಿಕುಮಾರ್‌ ತಿಳಿಸಿದರು.

ಆರೋಪಿ ಮೊಹಮ್ಮದ್‌ ಶಾರಿಕ್‌ ಹಾಗೂ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಚಿಕಿತ್ಸೆ ಪಡೆಯುತ್ತಿರುವ ಫಾದರ್‌ಮುಲ್ಲರ್ಸ್‌ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿದ ಅವರು ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.

‘ಆರೋಪಿಯನ್ನು ಕಮಿಷನರ್‌ ವಿಚಾರಣೆ ನಡೆಸಿದರು, ತನಿಖಾಧಿಕಾರಿ ವಿಚಾರಣೆ ನಡೆಸಿದ್ದಾರೆ. ಆತ ಕೆಲವೊಂದು ಸ್ಥಳಗಳನ್ನು ಗುರಿಯಾಗಿಸಿಕೊಂಡಿದ್ದ ಎಂಬ ಸುದ್ದಿಗಳು ಕೆಲವು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ. ಇವೆಲ್ಲಾ ಕೇವಲ ಊಹಾಪೋಹ. ಇದು ಯಾವುದೂ ನಡೆದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಆರೋಪಿಯನ್ನು ಮಾತನಾಡಿಸಲು ನಮಗೆ ಇದುವರೆಗೆ ಸಾಧ್ಯವಾಗಿಲ್ಲ. ಆತನನ್ನು ಭೇಟಿ ಮಾಡಲು ನಮಗೆ ವೈದ್ಯರು ಇನ್ನೂ ಅವಕಾಶವನ್ನೇ ನೀಡಿಲ್ಲ. ಬೇರೆ ಅನಾರೋಗ್ಯ ಇದ್ದಾಗ ರೋಗಿಯನ್ನು ನೋಡಲು ಹಾಗೂ ಮಾತನಾಡಿಸಲು ಸಾಧ್ಯವಾಗುತ್ತದೆ. ಆದರೆ ಇದು ಸುಟ್ಟ ಗಾಯದ ಪ್ರಕರಣವಾಗಿದ್ದು, ರೋಗಿಗೆ ಸೊಂಕು ಹರಡುವ ಸಾಧ್ಯತೆ ಜಾಸ್ತಿ. ಸೋಂಕು ನಿವಾರಣೆಗೆ ಕ್ರಮಕೈಗೊಂಡ ಬಳಿಕ ವೈದ್ಯರು ಮಾತ್ರ ರೋಗಿಯನ್ನು ಭೇಟಿಯಾಗುತ್ತಾರೆ. ಅದು ಬಿಟ್ಟು ಬೇರೆಯಾರನ್ನೂ ಚಿಕಿತ್ಸ ಕೊಠಡಿಯ ಒಳಗೆ ಬಿಡುವುದಿಲ್ಲ’ ಎಂದು ತಿಳಿಸಿದರು.

‘ಕದ್ರಿ ಠಾಣೆಯನ್ನು ಗುರಿಯಾಗಿಸಿ ಕೃತ್ಯ ನಡೆಸಲು ಉದ್ದೇಶಿಸಲಾಗಿತ್ತು’ ಎಂದು ಇಸ್ಲಾಮಿಕ್‌ ರೆಸಿಸ್ಟನ್ಸ್‌ ಕೌನ್ಸಿಲ್‌ (ಐಆರ್‌ಸಿ) ಹೆಸರಿನ ಸಂಘಟನೆ ಬಿಡುಗಡೆ ಮಾಡಿದ್ದು ಎನ್ನಲಾದ  ಸಂದೇಶ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಈ ಸಂದರ್ಭದಲ್ಲಿ ಅದು ನಿಜವೋ ಸುಳ್ಳೋ ಎಂಬ ಪ್ರಶ್ನೆಯೇ ಉದ್ಭವವಾಗದು. ಈ ಕುರಿತು ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಸದ್ಯಕ್ಕೆ ಇದರ ಸತ್ಯಾಸತ್ಯತೆ ಪತ್ತೆ ಮಾಡುವ ಕೆಲಸ ಮಾಡುತ್ತಿಲ್ಲ’ ಎಂದು ಉತ್ತರಿಸಿದರು. 

ಬಿಗಿ ಭದ್ರತೆ: ‘ಇದೊಂದು ಗಂಭೀರ ಪ್ರಕರಣವಾಗಿರುವುದರಿಂದ ಆರೋಪಿಯ ಭದ್ರತೆಗೆ ಸಿಬ್ಬಂದಿ ನಿಯೋಜನೆ ಮಾಡಿದ್ದೇವೆ. ಯಾವುದೇ ಅಚಾತುರ್ಯ ಆಗಬಾರದು ಎಂದು ಭದ್ರತೆ ಒದಗಿಸಿದ್ದೇವೆ. ವೈದ್ಯರ ತಂಡವನ್ನು ಆಸ್ಪತ್ರೆ ವತಿಯಿಂದಲೇ ನಿಯೋಜಿಸಿದ್ದೇವೆ. ಅಲ್ಲದೇ ಚಿಕಿತ್ಸಾ ಕೊಠಡಿಗೆ ಪೊಲಿಸ್‌ ಭದ್ರತೆಯನ್ನೂ ಒದಗಿಸಿದ್ದು, ಅಧಿಕಾರಿಗಳು ಮೂರು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎಂದರು.

‘ಆರೋಪಿಯ ಗುರುತು ಪತ್ತೆ ಮಾಡಲು ಆತನ ಕುಟುಂಬದವರಿಗೆ ಒಮ್ಮೆ ಮಾತ್ರ ಅವಕಾಶ ನೀಡಲಾಗಿತ್ತು. ಅದು ಬಿಟ್ಟರೆ, ಆರೋಪಿಯ ಭೇಟಿಗೆ ವೈದ್ಯರನ್ನು ಹೊರತುಪಡಿಸಿ ಬೇರೆ ಯಾರಿಗೂ ಅವಕಾಶ ನೀಡುತ್ತಿಲ್ಲ. ಇಲಾಖೆಯ ಹಿರಿಯ ಅಧಿಕಾರಿಗಳು ಬಂದಾಗಲೂ ಅವರಿಗೂ ಆರೋಪಿಯನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ’ ಎಂದು ತಿಳಿಸಿದರು.

‘ಆರೋಪಿಯ ಆರೋಗ್ಯವಾಗಿದ್ದಾನೆ ಎಂದು ವೈದ್ಯರು ದೃಢೀಕರಿಸುವವರೆಗೆ ಆತನ ವಿಚಾರಣೆ ಸಾಧ್ಯವಿಲ್ಲ. ದೃಢಪಡಿಸದ ಸುದ್ದಿಯನ್ನು ಬಿತ್ತಿರಿಸುವ ಮೂಲಕ  ಯಾರೂ ಗೊಂದಲ ಮೂಡಿಸಬಾರದು’ ಎಂದು ಅವರು ಮನವಿ ಮಾಡಿದರು.

 ‘ಪುರುಷೋತ್ತಮ ಪೂಜಾರಿ ಆರೋಗ್ಯ ಸುಧಾರಿದೆ ಎಂದು ವೈದ್ಯರು ತಿಳಿಸಿದ್ದಾರೆ’ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು