ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನ ಚೌಕಟ್ಟಿಗೆ ಬೇಕು ಪಠ್ಯ

ಯಕ್ಷಧ್ರುವ ಪಟ್ಲ ಫೌಂಡೇಷನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ
Published 1 ಮೇ 2024, 5:40 IST
Last Updated 1 ಮೇ 2024, 5:40 IST
ಅಕ್ಷರ ಗಾತ್ರ

ಮಂಗಳೂರು: ಸಂಗೀತ, ಭರತನಾಟ್ಯದ ಮಾದರಿಯಲ್ಲಿ ಯಕ್ಷಗಾನಕ್ಕೂ ನಿರ್ದಿಷ್ಟ ಚೌಕಟ್ಟಿನಲ್ಲಿ ಪಠ್ಯ ರಚಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದರು.

ಮಂಗಳೂರು ಪ್ರೆಸ್‌ಕ್ಲಬ್ ವತಿಯಿಂದ ಮಂಗಳವಾರ ಇಲ್ಲಿ ನಡೆದ ‘ಪ್ರೆಸ್‌ಕ್ಲಬ್ ಗೌರವ ಅತಿಥಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಕ್ಷಗಾನದಲ್ಲಿ ಪ್ರತಿಯೊಬ್ಬ ಗುರು ತಮ್ಮದೇ ಆದ ಶೈಲಿಯಲ್ಲಿ ನಾಟ್ಯವನ್ನು ಕಲಿಸುತ್ತಾರೆ. ಯಕ್ಷಗಾನ ಕಲಿಕೆಗೆ ಒಂದು ಚೌಕಟ್ಟು ರೂಪಿಸುವ ಮೂಲಕ ಏಕರೂಪತೆ ತರಬೇಕಾಗಿದೆ. ಯಕ್ಷಧ್ರುವ ಪಟ್ಲ ಫೌಂಡೇಷನ್‌ನ ಯಕ್ಷ ಶಿಕ್ಷಣ ಯೋಜನೆಯು ಪಠ್ಯ ರೂಪಿಸಿದ್ದು, ಫೌಂಡೇಷನ್‌ನ ಶಿಕ್ಷಕರು ಇದರ ಪ್ರಕಾರವೇ ನಾಟ್ಯ ಕಲಿಸುತ್ತಾರೆ. ಈ ಯೋಜನೆಯನ್ನು ಇನ್ನಷ್ಟು ಸರ್ಕಾರಿ ಶಾಲೆಗಳಿಗೆ ವಿಸ್ತರಿಸುವ ಯೋಜನೆ ಇದೆ ಎಂದರು.

‘ಯಕ್ಷಗಾನ ಮೇಳ ಕಟ್ಟುವುದು ಒಂದು ಕಂಪನಿ ಕಟ್ಟುವುದಕ್ಕಿಂತ ಕಷ್ಟದ ಕೆಲಸ. ಮೇಳದ ವ್ಯವಸ್ಥೆ, ಕಲಾವಿದರ ಕೂಡಿಸುವಿಕೆ ಹೀಗೆ ಹಲವಾರು ಸವಾಲುಗಳು ಎದುರಾಗುತ್ತವೆ. ಆದರೆ, ದೇವರ ಕೃಪೆಯಿಂದ ಪಾವಂಜೆ ಮೇಳವು ಸವಾಲುಗಳಿಲ್ಲದೆ ಸುಲಲಿತವಾಗಿ ನಡೆಯುತ್ತಿದೆ. ಮೇಳ ಕಟ್ಟಿದಾಗಿನಿಂದ ಆರು ತಿಂಗಳ ಆಟ ಮುಂಗಡ ಬುಕ್ಕಿಂಗ್ ಆಗುತ್ತದೆ. ಎರಡನೇ ಮೇಳ ಕಟ್ಟಲು ಒತ್ತಡ ಇದೆ. ಆದರೆ, ಎಲ್ಲ ಕಡೆಗಳಲ್ಲಿ ಯಕ್ಷಗಾನ ಆಯೋಜಿಸುವಾಗ ನನ್ನ ಉಪಸ್ಥಿತಿಯನ್ನು ಬಯಸುತ್ತಾರೆ. ಎರಡು ಮೇಳ ಇದ್ದಾಗ ಎರಡೂ ಕಡೆಗಳಲ್ಲಿ ಭಾಗವಹಿಸಲು ಸಾಧ್ಯವಾಗದು. ಹೀಗಾಗಿ, ಸದ್ಯಕ್ಕೆ ಎರಡನೇ ಮೇಳದ ಯೋಚನೆ ಇಲ್ಲ’ ಎಂದು ಹೇಳಿದರು.

ತೆಂಕುತಿಟ್ಟು ಯಕ್ಷಗಾನದಲ್ಲಿ ಬಲಿಪ ನಾರಾಯಣ ಭಾಗವತರು, ಕಂಠ, ವಿದ್ವತ್ತಿನಿಂದ ಎಲ್ಲ ವಿಭಾಗಗಳಲ್ಲಿ ಹೆಮ್ಮೆಯ ಕಲಾವಿದರಾಗಿ ಗುರುತಿಸಿಕೊಂಡವರು. ಯಕ್ಷಗಾನ ಕಲಾವಿದರಲ್ಲಿ ಈಗಲೂ ಅನೇಕರಿಗೆ ಓದಲು, ಬರೆಯಲು ಬಾರದು. ಆದರೆ, ಅವರು ಪುರಾಣ ಜ್ಞಾನದೊಂದಿಗೆ ಶುದ್ಧ ವ್ಯಾಕರಣ, ಸ್ಪಷ್ಟ ಕನ್ನಡದಲ್ಲಿ ಅದ್ಭುತವಾಗಿ ಮಾತನಾಡಬಲ್ಲರು. ಇದನ್ನು ವ್ಯಕ್ತಿಗಿಂತ ಕಲೆಗಿರುವ ಶಕ್ತಿ ಎನ್ನಬಹುದು ಎಂದು ಪಟ್ಲ ಅಭಿಪ್ರಾಯಪಟ್ಟರು. 

ಅನೇಕ ಯಕ್ಷಗಾನ ಕಲಾವಿದರು ಯಾವುದೇ ಗಳಿಕೆ ಇಲ್ಲದೆ ಬಡತನದಲ್ಲಿ ಇದ್ದಾರೆ. ಕಲಾವಿದರ ಕಷ್ಟಕ್ಕೆ ಹೆಗಲಾಗಬೇಕೆಂದು ಅಭಿಮಾನಿಗಳ ಸಹಕಾರದೊಂದಿಗೆ ಯಕ್ಷಧ್ರುವ ಪಟ್ಲ ಫೌಂಡೇಷನ್ ಸ್ಥಾಪಿಸಿದೆ. ಎಂಟು ವರ್ಷಗಳಲ್ಲಿ ಕಲಾವಿದರಿಗೆ ₹12 ಕೋಟಿಯಷ್ಟು ನೆರವು ನೀಡಲಾಗಿದೆ. ಕಲಾವಿದ ಎಂ.ಎಲ್. ಸಾಮಗ ಅವರು ಮಲ್ಪೆಯಲ್ಲಿ ನೀಡಿದ ಅರ್ಧ ಎಕರೆ ಜಾಗದಲ್ಲಿ, ಅಭಿಮಾನಿಯೊಬ್ಬರು ₹2 ಕೋಟಿ ವೆಚ್ಚದಲ್ಲಿ ಬಡ ಕಲಾವಿದರಿಗಾಗಿ 20 ಮನೆಗಳನ್ನು ನಿರ್ಮಿಸುತ್ತಿದ್ದಾರೆ. 4,000 ಮಕ್ಕಳಿಗೆ ಯಕ್ಷ ಶಿಕ್ಷಣ ತರಬೇತಿ ನೀಡಲಾಗಿದೆ ಎಂದು ವಿವರಿಸಿದರು.

ಪತ್ರಕರ್ತ ಯು.ಕೆ.ಕುಮಾರನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಸ್ವಾಗತಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್. ಇದ್ದರು. ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು.

ಪಟ್ಲ ಸತೀಶ್ ಶಟ್ಟಿ – ಪ್ರಜಾವಾಣಿ ಚಿತ್ರ
ಪಟ್ಲ ಸತೀಶ್ ಶಟ್ಟಿ – ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT