ಬುಧವಾರ, ಜೂನ್ 16, 2021
21 °C
ಇಂದಿನಿಂದ ಕಠಿಣ ಕ್ರಮ ಜಾರಿ: ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಆದೇಶ

ಮದುವೆ ಸಮಾರಂಭ: 25 ಜನರಿಗೆ ಅನುಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಜಿಲ್ಲೆಯಲ್ಲಿ ಮೇ 10ರಂದು ಬೆಳಿಗ್ಗೆ 6ರಿಂದ 24ರ ಬೆಳಿಗ್ಗೆ 6 ಗಂಟೆಯವರೆಗೆ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿ ಆದೇಶಿಸಿರುವ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಪೂರ್ವನಿಗದಿತ ಮದುವೆಗಳನ್ನು ಗರಿಷ್ಠ 25 ಜನರ ಪರಿಮಿತಿಗೆ ಒಳಪಟ್ಟು ಆಯಾ ಮನೆಯಲ್ಲಿ ಸರಳವಾಗಿ ಆಯೋಜಿಸಬೇಕು ಎಂದು ತಿಳಿಸಿದ್ದಾರೆ.

ಮದುವೆಗೆ ಸಂಬಂಧಿಸಿದಂತೆ ಹಿಂದಿನ ಆದೇಶದಂತೆ ಸ್ಥಳೀಯ ಸಂಸ್ಥೆಯಿಂದ ಅನುಮತಿ ಪಡೆದುಕೊಳ್ಳಬೇಕು. ಪಾಸ್ ಪಡೆದವರು ಮಾತ್ರ ಮದುವೆಯಲ್ಲಿ ಭಾಗವಹಿಸಬೇಕು. ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಈಗಾಗಲೇ ಹೊರಡಿಸಿದ ಆದೇಶಕ್ಕೆ ಅನುಗುಣವಾಗಿ ಈ ಮಾರ್ಗಸೂಚಿ ಬಿಡುಗಡೆಗೊಳಿಸಲಾಗಿದೆ. ಸರ್ಕಾರದ ಆದೇಶದ ಎಲ್ಲ ಮಾರ್ಗಸೂಚಿಗಳು ಪಾಲನೆಯಾಗಲಿವೆ. ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಮೀನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ಹೈನುಗಾರಿಕೆ ಸಂಬಂಧಿಸಿದ ಅಂಗಡಿಗಳು ಬೆಳಿಗ್ಗೆ 6 ರಿಂದ 9ರವರೆಗೆ ತೆರೆಯಬಹುದು.

ಆಹಾರ, ದಿನಸಿ, ಹಣ್ಣು, ತರಕಾರಿ, ಮಾಂಸ, ಮೀನು, ಪ್ರಾಣಿಗಳ ಮೇವು ವ್ಯಾಪಾರ ನಡೆಸುವ ಅಂಗಡಿಗಳು ಬೆಳಿಗ್ಗೆ 6ರಿಂದ 9ರವರೆಗೆ ತೆರೆದಿಡಬಹುದು. 9ಕ್ಕೆ ಅಂಗಡಿ ಮುಚ್ಚಿ, 10ಗಂಟೆಯೊಳಗೆ ಮಾರಾಟಗಾರರು ಹಾಗೂ ಖರೀದಿದಾರರು ಮನೆ ತಲುಪಬೇಕು. ಬಳಿಕ ಸಂಚಾರ ಕಂಡುಬಂದರೆ ವಾಹನ ಮುಟ್ಟುಗೋಲು ಹಾಕಲಾಗುವುದು. ಹಾಲಿನ ಬೂತ್, ಹಾಪ್‌ಕಾಮ್ಸ್, ತರಕಾರಿ, ಹಣ್ಣಿನ ತಳ್ಳುಗಾಡಿಗೆ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಅವಕಾಶವಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಕೈಗಾರಿಕಾ ಸಂಸ್ಥೆಗಳು ತಮ್ಮ ಸಿಬ್ಬಂದಿಯನ್ನು ವಾಹನಗಳ ಮೂಲಕ ಕೆಲಸದ ಸ್ಥಳಕ್ಕೆ ಕರೆದೊಯ್ಯಬೇಕು. ಪ್ರತಿ ಸಿಬ್ಬಂದಿಗೆ ಪ್ರತ್ಯೇಕ ಪಾಸ್ ನೀಡುವುದು ಕಷ್ಟವಿದೆ. ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಗೊಂದಲ ಉಂಟಾಗುವುದನ್ನು ತಡೆಯಲು ಮತ್ತು ವಾಹನ ದಟ್ಟಣೆ ಕಡಿಮೆ ಮಾಡಲು ಕೈಗಾರಿಕಾ ಸಂಸ್ಥೆಗಳು ವಾಹನ ವ್ಯವಸ್ಥೆ ಕಲ್ಪಿಸಿ ಕೋವಿಡ್ ನಿಯಮ ಪಾಲಿಸಿ ಕರೆದೊಯ್ಯಬೇಕು. ಇದು ಸಲಹೆ ಮಾತ್ರ, ಕಡ್ಡಾಯವಲ್ಲ ಎಂದು ತಿಳಿಸಿದ್ದಾರೆ.

233 ವಾಹನ ವಶ

ಜಿಲ್ಲೆಯಲ್ಲಿ ಭಾನುವಾರ ಕರ್ಫ್ಯೂ ನಿಯಮ ಉಲ್ಲಂಘಿಸಿದ 233 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ನಗರ ಪೊಲೀಸ್ ಕಮಿಷನರೇಟ್‌ ವ್ಯಾಪ್ತಿಯಲ್ಲಿ 174 ದ್ವಿಚಕ್ರ ವಾಹನ, 16 ಚತುಷ್ಚಕ್ರ ವಾಹನ ಸೇರಿದಂತೆ 190 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಪತ್ತು ನಿರ್ವಹಣಾ ಕಾಯ್ದೆಯಡಿ 13, ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯಡಿ 7 ಹಾಗೂ ಮಾಸ್ಕ್‌ ನಿಯಮ ಉಲ್ಲಂಘನೆಯ 286 ಪ್ರಕರಣ ದಾಖಲಾಗಿವೆ.

ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 43 ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯ 4 ಹಾಗೂ ಮಾಸ್ಕ್‌ ನಿಯಮ ಉಲ್ಲಂಘನೆಯ 228 ಪ್ರಕರಣ ದಾಖಲಾಗಿವೆ.

ದ.ಕ: 1,694 ಮಂದಿಗೆ ಕೋವಿಡ್‌

ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್–19 ಸೋಂಕು ಹೆಚ್ಚಳವಾಗುತ್ತಿದ್ದು, ಭಾನುವಾರವೂ 1,694 ಮಂದಿಗೆ ಕೋವಿಡ್ ದೃಢಪಟ್ಟಿದೆ. ಮೃತಪಟ್ಟ ಇಬ್ಬರಿಗೆ ಕೋವಿಡ್ ಇರುವುದು ಭಾನುವಾರ ಖಚಿತವಾಗಿದೆ. ಈ ಮಧ್ಯೆ 854 ಮಂದಿ ಗುಣಮುಖರಾಗಿದ್ದಾರೆ.

ಉಡುಪಿ: ಜಿಲ್ಲೆಯಲ್ಲಿ 962 ಮಂದಿಗೆ ಕೋವಿಡ್–19 ದೃಢವಾಗಿದ್ದು, ಮೃತಪಟ್ಟ ಐವರಿಗೆ ಕೋವಿಡ್‌–19 ಖಚಿತವಾಗಿದೆ. 543 ಜನರು ಗುಣಮುಖರಾಗಿದ್ದಾರೆ.

ಕಾಸರಗೋಡು: ಜಿಲ್ಲೆಯಲ್ಲಿ ಭಾನುವಾರ 766 ಮಂದಿಗೆ ಕೋವಿಡ್–19 ದೃಢಪಟ್ಟಿದ್ದು, 944 ಗುಣಮುಖರಾಗಿದ್ದಾರೆ.
ಸದ್ಯ 15,366 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 56,698 ಮಂದಿಗೆ ಸೋಂಕು ದೃಢಪಟ್ಟಿದ್ದು, 40,919 ಮಂದಿ ಗುಣಮುಖರಾಗಿದ್ದಾರೆ.

ಕೋಟ್‌:

ಅಗತ್ಯ ವಸ್ತುಗಳ ಖರೀದಿಗೆ ಸಾಧ್ಯವಾದಷ್ಟು ನಡೆದುಕೊಂಡೇ ಹೋಗಿ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ವಾಹನಗಳನ್ನು ಬಳಕೆ ಮಾಡಿ. ಆಹಾರ ಪಾರ್ಸಲ್ ತರಲು ವಾಹನ ಬಳಸಬಾರದು.
ಎನ್‌. ಶಶಿಕುಮಾರ್
ಪೊಲೀಸ್ ಕಮಿಷನರ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು