ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಂದು ವರ್ಷದಲ್ಲಿ ಮೇಯರ್ ಸಾಧನೆ ಶೂನ್ಯ: ಕಾಂಗ್ರೆಸ್ ಕಿಡಿ

ಸುಧೀರ್‌ ಶೆಟ್ಟಿ ಕಣ್ಣೂರು ಆಡಳಿತ ವೈಖರಿಗೆ ಕಾಂಗ್ರೆಸ್ ಕಿಡಿ
Published : 3 ಸೆಪ್ಟೆಂಬರ್ 2024, 2:51 IST
Last Updated : 3 ಸೆಪ್ಟೆಂಬರ್ 2024, 2:51 IST
ಫಾಲೋ ಮಾಡಿ
Comments

ಮಂಗಳೂರು: ‘ಸುಧೀರ್ ಶೆಟ್ಟಿ ಕಣ್ಣೂರು ಅವರು ಮೇಯರ್‌ ಅವಧಿಯಲ್ಲಿ ಯಾವುದೇ ಸಾಧನೆಯನ್ನು ಮಾಡಿಲ್ಲ. ಅವರ ವೈಫಲ್ಯವನ್ನು ಪ್ರತಿಪಕ್ಷವು ಬಯಲುಗೊಳಿಸುತ್ತದೆ ಎಂಬ ಭೀತಿಯಿಂದ ತಮ್ಮ ಕೊನೆಯ ಕೌನ್ಸಿಲ್ ಸಭೆಯನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದಾರೆ’ ಎಂದು ಪಾಲಿಕೆಯ ಪ್ರತಿಪಕ್ಷದ ನಾಯಕ ಪ್ರವೀಣಚಂದ್ರ ಆಳ್ವ ಆರೋಪಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಪಾಲಿಕೆ ಸಭೆಯಲ್ಲಿ ಪ್ರತಿಪಕ್ಷದವರು ಧರಣಿ ನಡೆಸಿದಾಗ ಸಭೆಯನ್ನು ಮುಂದೂಡಿ, ಪ್ರತಿಪಕ್ಷ ನಾಯಕನನ್ನು ಕರೆದು ಮಾತನಾಡಿಸುವುದು ವಾಡಿಕೆ. ಮೇಯರ್‌ ಅವರು ಬೆಲ್ ಬಾರಿಸಿ ಸಭೆ ಮುಂದೂಡದೆಯೇ, ಹೊರನಡೆದು ಸರ್ವಾಧಿಕಾರಿಯಂತೆ ವರ್ತಿಸಿದ್ದಾರೆ’ ಎಂದರು.

‘ನೀರಿನ ಬಿಲ್ ಸಮಸ್ಯೆ ನೀಗಿಸಲು 11 ಅದಾಲತ್‌ ನಡೆಸಿದ್ದೇವೆ ಎಂದು ಮೇಯರ್‌ ಹೇಳಿಕೊಳ್ಳುತ್ತಾರೆ. ಗ್ರಾಹಕರ ದೂರು ಕಸದ ಬುಟ್ಟಿ ಸೇರುತ್ತಿವೆ. ನೀರಿಗೆ ದುಬಾರಿ ಬಿಲ್‌ ವಿಧಿಸಿರುವ ಅಹವಾಲು ಹೊತ್ತ ನೂರಾರು ಮಂದಿ ಪಾಲಿಕೆ ಸದಸ್ಯರ ಮನೆ ಬಾಗಿಲಿಗೆ ಬರುತ್ತಿದ್ದಾರೆ. ನಮ್ಮ ಅವಧಿಯಲ್ಲಿ ನೀರಿನ ದರ ಹೆಚ್ಚಿಸಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಾಗ ನೀರಿನ ಶುಲ್ಕ, ಆಸ್ತಿ ತೆರಿಗೆ, ಉದ್ದಿಮೆ ಪರವಾನಗಿ ಎಲ್ಲದರ ದರವನ್ನೂ ಹೆಚ್ಚಿಸಲಾಗಿದೆ’ ಎಂದರು. 

‘5 ಸಾವಿರ ಅರ್ಜಿ ಬಾಕಿ ಇದ್ದರೂ ಬಿಜೆಪಿ ಆಡಳಿತಾವಧಿಯಲ್ಲಿ ಬಡವರಿಗೆ ಒಂದೂ ಮನೆ ನಿವೇಶನ ನೀಡಿಲ್ಲ. ಒಳಚರಂಡಿ ವ್ಯವಸ್ಥೆ ಅಧ್ವಾನವಾಗಿದ್ದು, ಶೌಚ ತ್ಯಾಜ್ಯವು ರಸ್ತೆ ಮತ್ತು ತೋಡುಗಳಲ್ಲಿ ಹರಿಯುತ್ತಿದೆ. ಸಂಚಾರ ದಟ್ಟಣೆ ಜನರನ್ನು ಹೈರಾಣಾಗಿಸಿದೆ. ನಗರದಲ್ಲಿ 2 ಕಿ.ಮೀ.‌ ದೂರವನ್ನು ಪ್ರಯಾಣಿಸಲು ಮುಕ್ಕಾಲು ಗಂಟೆ ಬೇಕು’ ಎಂದರು.

‘ರಸ್ತೆ ಬದಿ ಕಸದ ರಾಶಿಗಳು ಮತ್ತೆ ಕಾಣಿಸಿಕೊಂಡಿವೆ. ಜೆಪ್ಪು–ಮಹಾಕಾಳಿಪಡ್ಪು  ರಸ್ತೆ ಕಾಮಗಾರಿ ಆರಂಭವಾಗಿ ಮೂರುವರೆ ವರ್ಷಗಳಾದರೂ ಪೂರ್ಣಗೊಂಡಿಲ್ಲ. ಪಂಪ್‌ವೆಲ್‌- ಪಡೀಲ್ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ರಿವರ್ ಫ್ರಂಟ್‌ ಕಾಮಗಾರಿ 1 ಮೀಟರ್‌ನಷ್ಟೂ ನಡೆದಿಲ್ಲ. ಮೇಯರ್ ವಿವೇಚನಾ ನಿಧಿಯ ಅನುದಾನವನ್ನೂ ಅಭಿವೃದ್ಧಿಗೆ ಬಳಸಿಲ್ಲ’ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಲ್ಯಾನ್ಸ್‌ ಲಾಟ್ ಪಿಂಟೊ, ಶಶಿಧರ ಹೆಗ್ಡೆ, ನವೀನ್ ಡಿಸೋಜ, ಎ.ಸಿ.ವಿನಯರಾಜ್‌, ಜೆಸಿಂತಾ, ಅನಿಲ್ ಕುಮಾರ್, ಅಬ್ದುಲ್ ರವೂಫ್‌ ಮತ್ತಿತರರು ಭಾಗವಹಿಸಿದ್ದರು.  

‘ಬಿಜೆಪಿ ಸರ್ಕಾರವಿದ್ದರೆ ಎಫ್‌ಐಆರ್‌ ದಾಖಲಿಸುತ್ತಿತ್ತೇ?’

‘ಪ್ರತಿಭಟನೆ ವೇಳೆ ಬಸ್‌ಗೆ ಕಲ್ಲು ತೂರಾಟ ನಡೆದ ಪ್ರಕರಣದಲ್ಲಿ ನಮ್ಮ ಪಕ್ಷದ ಪಾಲಿಕೆ ಸದಸ್ಯನ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.  ಕಾಂಗ್ರೆಸ್‌ ನೇತೃತ್ವದ ಸರ್ಕಾರವೇ ಇದ್ದರೂ ಒತ್ತಡ ಹೇರಿಲ್ಲ. ಕಲ್ಲು ತೂರಿದ್ದನ್ನು ನಾವೇ ಖಂಡಿಸಿದ್ದೇವೆ.  ಇದು ನಿಷ್ಪಕ್ಷಪಾತ ಧೋರಣೆಗೆ ಸಾಕ್ಷಿ. ಒಂದು ವೇಳೆ ಬಿಜೆಪಿ ಸರ್ಕಾರವಿದ್ದು ಅವರ ಪಕ್ಷದ ಸದಸ್ಯರು ಈ ರೀತಿ ವರ್ತಿಸಿದ್ದರೆ ಎಫ್‌ಐಆರ್‌ ದಾಖಲಾಗುತ್ತಿತ್ತೇ’ ಎಂದು ಪ್ರವೀಣ್ ಆಳ್ವ ಪ್ರಶ್ನಿಸಿದರು. ‘ಆರೋಪ ಸಾಬೀತಾದರೆ ಕಾರ್ಪೊರೇಟರ್ ವಿರುದ್ಧ ಕ್ರಮಕೈಗೊಳ್ಳಲಿ‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT