ಮಂಗಳವಾರ, ಸೆಪ್ಟೆಂಬರ್ 28, 2021
23 °C
ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಮೇಯರ್ ಸಭೆ

ಹೆದ್ದಾರಿ ಸಮಸ್ಯೆ ಪರಿಹಾರಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮಹಾನಗರಪಾಲಿಕೆ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಮತ್ತು ಪ್ರಗತಿ ಪರಿಶೀಲನೆ ಸಭೆ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ ಅಧ್ಯ ಕ್ಷತೆಯಲ್ಲಿ ಬುಧವಾರ ಜರುಗಿತು.

ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಸಮಸ್ಯೆಗಳು ಎದುರಾಗುತ್ತಿರುವ ಬಗ್ಗೆ ಪಾಲಿಕೆಯ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇಲಾಖೆಯವರು ನಿರ್ವಹಿಸುವ ಕಾಮಗಾರಿಗಳು ತೃಪ್ತಿಕರವಾಗಿಲ್ಲ. ಕುಂಟಿಕಾನ ಸರ್ವಿಸ್‌ ರಸ್ತೆಯ ಪೈಪ್‌ಲೈನ್ ಕಾಮಗಾರಿ ಸರಿಯಾಗಿಲ್ಲ ಎಂದರು. ಇದಕ್ಕೆ ಉತ್ತರಿಸಿದ ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರದ ಅಧಿಕಾರಿಗಳು ಪೈಪ್‌ಲೈನ್‌ ಕಾಮಗಾರಿಯನ್ನು ಪಾಲಿಕೆ
ಯಿಂದ ಕೈಗೊಳ್ಳಬೇಕಾಗಿದ್ದು, ಈ ಬಗ್ಗೆ ಪತ್ರದ ಬರೆಯಲಾಗಿದೆ ಎಂದರು.

ಕರಾವಳಿ ಕಾಲೇಜು ಬಳಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ವಿಳಂಬವಾಗುತ್ತಿದೆ. ಈ ಕುರಿತು ಪಾಲಿಕೆಯ ಕಾರ್ಯಪಾಲಕ ಎಂಜಿನಿಯರ್‌ ಪರಿಶೀಲಿಸಿ ಮಾಹಿತಿ ನೀಡುವಂತೆ ಮೇಯರ್‌ ಪ್ರೇಮಾನಂದ ಶೆಟ್ಟಿ ಸೂಚಿಸಿದರು.

ಪಂಪ್‌ವೆಲ್ ಗೋರಿಗುಡ್ಡೆ ಬಳಿಯಲ್ಲಿ ತುರ್ತಾಗಿ ಸರ್ವಿಸ್‌ ರಸ್ತೆ ನಿಮಾ೯ಣ ಮಾಡದಿದ್ದಲ್ಲಿ ಸಾರ್ವಜನಿಕರು ಪ್ರತಿಭಟನೆ ಮಾಡುವ ಪರಿಸ್ಥಿತಿ ಎದುರಾಗಬಹುದು ಎಂದು ಆ ವಾರ್ಡ್‌ನ ಸದಸ್ಯರು ತಿಳಿಸಿದರು. ಅಲ್ಲದೇ ಪಡೀಲ್‌ನಿಂದ ಬಿ.ಸಿ ರೋಡ್‌ವರೆಗಿನ ರಸ್ತೆಯು ಹದಗೆಟ್ಟಿದ್ದು, ಸಾರ್ವಜನಿಕರಿಂದ ಆಕ್ಷೇಪಣೆ ಕೇಳಿ ಬರುತ್ತಿರುವುದನ್ನು ಸಭೆಯಲ್ಲಿ ಚರ್ಚಿಸಲಾಯಿತು.

ಪಾಲಿಕೆ ವ್ಯಾಪ್ತಿಯಲ್ಲಿ ಹೊಸ ಕಲ್ವರ್ಟ್‌ ನಿರ್ಮಿಸುವ ಸಂದರ್ಭದಲ್ಲಿ ಪಾಲಿಕೆಯ ಎಂಜಿನಿಯರ್‌ ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿಯನ್ನು ನಿರ್ವಹಿಸುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮೇಯರ್ ಸೂಚಿಸಿದರು.

ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಂದೀಪ್, ಶೋಭಾ ರಾಜೇಶ್ ಮತ್ತು ಲೀಲಾವತಿ ಪ್ರಕಾಶ್, ಪಾಲಿಕೆಯ ಸದಸ್ಯರು, ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಯೋಜನಾ ನಿರ್ದೇಶಕ ಶಿಶು ಮೋಹನ್ ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.

ಕುಂದು ಕೊರತೆ ಸಭೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದವರ ಕುಂದು ಕೊರತೆ ಸಭೆ ಮೇಯರ್ ಪ್ರೇಮಾನಂದ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಡಿಸಿ ಮನ್ನಾ ಜಮೀನನನ್ನು ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಿರಿಸುವಂತೆ ಕ್ರಮಕೈಗೊಳ್ಳಲು ಮೇಯರ್ ಸೂಚಿಸಿದರು. ಪೌರ ಕಾರ್ಮಿಕರಿಗಾಗಿ ಪಚ್ಚನಾಡಿಯಲ್ಲಿ ಕಾಯ್ದಿರಿಸಲಾದ ಜಾಗಗಳನ್ನು ಅವರಿಗೆ ನೀಡುವಂತೆ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ಪಾಲಿಕೆಯಲ್ಲಿ ಕಾಮಗಾರಿಗಳ ಪೈಕಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರಿಗಾಗಿ ಮೀಸಲಿರಿಸಿದ ಗುತ್ತಿಗೆಯನ್ನು ಬೇರೆಯವರಿಗೆ ನೀಡದಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.

ಉಪ ಮೇಯರ್ ಸುಮಂಗಳಾ ರಾವ್, ಸದಸ್ಯರಾದ ಭರತ್ ಕುಮಾರ್, ಮನೋಜ್, ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್ ಮತ್ತು ಉಪ ಆಯುಕ್ತರಾದ ಅಜಿತ್ ಎಂ., ಬಿನೋಯ್, ಪಾಲಿಕೆಯ ಅಧಿಕಾರಿಗಳು ಹಾಗೂ ಪರಿಶಿಷ್ಟ ಜಾತಿ, ಪಂಗಡದ ಮುಖಂಡರು ಇದ್ದರು.

ತುಂಬೆ ಅಣೆಕಟ್ಟೆಗೆ ಭೇಟಿ

ನಗರಕ್ಕೆ ನೀರು ಪೂರೈಸುವ ತುಂಬೆ ಅಣೆಕಟ್ಟೆಗೆ ಮೇಯರ್ ಪ್ರೇಮಾನಂದ ಶೆಟ್ಟಿ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

ತುಂಬೆ ಅಣೆಕಟ್ಟೆಯ ಕೆಳಭಾಗದ ಎಡ ಮತ್ತು ಬಲ ಬದಿಯಲ್ಲಿ ಉಂಟಾಗುತ್ತಿರುವ ಭೂ ಕುಸಿತ ಮತ್ತು ಮಣ್ಣಿನ ಕೊರೆತವನ್ನು ಪರಿಶೀಲಿಸಿ, ಇದನ್ನು ತಡೆಗಟ್ಟಲು ತುರ್ತು ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕಿಂಡಿ ಅಣೆಕಟ್ಟೆಯ ಗೇಟ್ ಮತ್ತು ಯಂತ್ರೋಪಕರಣಗಳನ್ನು ಸುಸ್ಥಿತಿಯಲ್ಲಿಡಲು ಸೂಚಿಸಿದರು. ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್ ಮತ್ತು ಅಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.