ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಸ್ತುನಿಷ್ಠ ವರದಿಯೇ ಮಾಧ್ಯಮದ ಶಕ್ತಿ: ಕೆ.ಎನ್. ಶಾಂತಕುಮಾರ್

ಮಾಧ್ಯಮ ಸಂವಾದದಲ್ಲಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಅಧ್ಯಕ್ಷ ಕೆ.ಎನ್. ಶಾಂತಕುಮಾರ್
Published 29 ನವೆಂಬರ್ 2023, 7:32 IST
Last Updated 29 ನವೆಂಬರ್ 2023, 7:32 IST
ಅಕ್ಷರ ಗಾತ್ರ

ಮಂಗಳೂರು: ‘ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆಯ ಯುಗದಲ್ಲಿ ಮಾಧ್ಯಮಗಳು ಬಹುರೂಪಿ ಸವಾಲುಗಳನ್ನು ಎದುರಿಸುತ್ತಿವೆ’ ಎಂದು ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ, ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಅಧ್ಯಕ್ಷ ಕೆ.ಎನ್. ಶಾಂತಕುಮಾರ್ ಅಭಿಪ್ರಾಯಪಟ್ಟರು. 

ದೇರಳಕಟ್ಟೆ ಪನೀರ್‌ನಲ್ಲಿರುವ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ಮತ್ತು ಇನ್‌ಸ್ಟಿಟ್ಯೂಷನ್ ಇನ್ನೊವೇಷನ್ ಕೌನ್ಸಿಲ್ ಕ್ಯಾಂಪಸ್‌ನಲ್ಲಿ ಮಂಗಳವಾರ ನಡೆದ ‘ಮಾಧ್ಯಮದಲ್ಲಿ ನವೀನ ಚಿಂತನೆ ಮತ್ತು ಉದ್ಯಮಶೀಲತೆಯ ಅವಕಾಶಗಳು’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

ತಂತ್ರಜ್ಞಾನವೇ ಮಾಧ್ಯಮ ಕ್ಷೇತ್ರದ ಬಹುದೊಡ್ಡ ಸವಾಲಾಗಿದ್ದು, ಇದು ಸುದ್ದಿಮನೆಯ ಕಾರ್ಯ ಸ್ವರೂಪವನ್ನೇ ಬದಲಿಸಿದೆ. ಫೇಸ್‌ಬುಕ್, ಅಮೆಝಾನ್‌ನಂತಹ ಬಹುಮುಖಿ ತಾಣಗಳು ಸಾಂಪ್ರದಾಯಿಕ ಮಾಧ್ಯಮಗಳ ಅಸ್ತಿತ್ವವನ್ನು ಭದ್ರಪಡಿಸಿಕೊಳ್ಳುವ ಸವಾಲನ್ನು ತಂದೊಡ್ಡಿವೆ. ಡೀಪ್‌ ಫೇಕ್, ಸುಳ್ಳು ಸುದ್ದಿಗಳು ಓದುಗರು ಮಾಧ್ಯಮವನ್ನೇ ಅನುಮಾನಿಸುವ ಸಂದರ್ಭವನ್ನು ಸೃಷ್ಟಿಸಿವೆ. ಈ ನಾಗಾಲೋಟದಲ್ಲಿ ಯಾವುದೇ ಮಾಧ್ಯಮವಾಗಲಿ, ಕ್ಷಣಿಕ ಪ್ರಚಾರದ ಬಲೆಗೆ ಬೀಳದೆ, ಸತ್ಯದ ಪ್ರತಿಪಾದನೆ, ವಸ್ತುನಿಷ್ಠತೆ ಮತ್ತು ಗುಣಮಟ್ಟದ ಸುದ್ದಿಗಳಿಂದ ಮಾತ್ರ ದೀರ್ಘಾವಧಿಯಲ್ಲಿ ಅಸ್ತಿತ್ವ ಹಾಗೂ ಅನನ್ಯತೆ ಉಳಿಸಿಕೊಳ್ಳಲು ಸಾಧ್ಯ ಎಂದರು.

ಭಾರತ ಮಾತ್ರವಲ್ಲ, ಪ್ರಪಂಚದಾದ್ಯಂತ ಆಡಳಿತ ನಡೆಸುವ ಸರ್ಕಾರಗಳು ಮಾಧ್ಯಮಸ್ನೇಹಿಯಾಗಿ ಇರುವುದಿಲ್ಲ. ತಪ್ಪುಗಳನ್ನು ಸದಾ ಪ್ರಶ್ನಿಸುವ, ಹಾದಿ ತಪ್ಪಿದಾಗ ಎಚ್ಚರಿಸುವ ಮಾಧ್ಯಮಗಳ ಮೇಲೆ ಸರ್ಕಾರಗಳು ಹೆಚ್ಚು ನಿಬಂಧನೆಗಳನ್ನು ಹೇರಲು ಯತ್ನಿಸುತ್ತವೆ. ಇವುಗಳ ನಡುವೆ ಕೆಲಸ ಮಾಡುವುದು ಮಾಧ್ಯಮ ಕ್ಷೇತ್ರದ ಇನ್ನೊಂದು ಸವಾಲು ಎಂದು ವಿವರಿಸಿದರು.

1990ರ ದಶಕದಲ್ಲಿ ಅಂತರ್ಜಾಲ ಭಾರತದಲ್ಲಿ ಸಂಚಲನ ಸೃಷ್ಟಿಸಿತು. ಮಾಧ್ಯಮಗಳು ಯಾವುದೇ ಶುಲ್ಕವಿಲ್ಲದೆ ಮಾಹಿತಿಯನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳಲು ಪ್ರಾರಂಭಿಸಿದವು. ಆದರೆ, ಜಗತ್ತಿನ ಕೆಲವು ಭಾಗಗಳಲ್ಲಿ ವಿಶೇಷವಾಗಿ ಜಪಾನ್‌ನಲ್ಲಿ ಅಂತರ್ಜಾಲದಲ್ಲಿ ಮಾಹಿತಿ ಹಂಚಿಕೊಳ್ಳಲು ಶುಲ್ಕ ನೀಡಬೇಕು. ಆ ದೇಶದಲ್ಲಿ ಈಗಲೂ ಈ ಕ್ರಮ ಜಾರಿಯಲ್ಲಿದೆ ಎಂದು ತಿಳಿಸಿದರು. 

ಮಾಧ್ಯಮ ಕ್ಷೇತ್ರದ ಉದ್ಯಮ ಶೀಲತೆ ಬಗ್ಗೆ ವಿವರಿಸಿದ ಅವರು, ‘ಓದುಗರ ಅಂತರಾಳವನ್ನು ಅರಿತು ಅವರಿಗೆ ಬೇಕಾದ ಹೂರಣವನ್ನು ನೀಡುವ ಜತೆಗೆ, ಮಾಧ್ಯಮ ಸಂಸ್ಥೆಗೆ ಆರ್ಥಿಕ ದೃಢತೆಯೂ ಮುಖ್ಯವಾಗುತ್ತದೆ. ಅದಕ್ಕಾಗಿ ನೀತಿಯಲ್ಲಿ ಹೊಂದಾಣಿಕೆ ಮಾಡಿಕೊಂಡಿರುವ ಮಾಧ್ಯಮಗಳು, ಬಹು ಆಯಾಮದಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ, ಸಮಾಜ, ಸಾಮಾಜಿಕ ವ್ಯಕ್ತಿಗಳ ನಡುವೆ ಕೆಲಸ ಮಾಡುತ್ತಿವೆ’ ಎಂದರು. 

ಹಿಂದೆ ಪತ್ರಿಕೋದ್ಯಮವನ್ನು ನೆಚ್ಚಿಕೊಂಡವರು, ಆಸಕ್ತ ಬರಹಗಾರರು ಪತ್ರಕರ್ತರಾಗಿ, ಮಾಧ್ಯಮ ಜಗತ್ತಿನಲ್ಲೇ ತಮ್ಮ ಭವಿಷ್ಯ ರೂಪಿಸಿಕೊಳ್ಳುತ್ತಿದ್ದರು. ಬದಲಾದ ಸಂದರ್ಭದಲ್ಲಿ ಶೈಕ್ಷಣಿಕ, ಪ್ರಾಯೋಗಿಕ ಜ್ಞಾನದ ಜೊತೆಗೆ ಬದಲಾಗುವ ತಂತ್ರಜ್ಞಾನ, ಬಹುಮುಖಿ ಕೌಶಲ ‍ಗಳಿಸಿಕೊಂಡವರು ಮಾತ್ರ ಯಶಸ್ವಿ ಪತ್ರಕರ್ತರಾಗಲು ಸಾಧ್ಯ. ಇದು ಪತ್ರಿಕೋದ್ಯಮ ವಿದ್ಯಾರ್ಥಿಗಳ ಎದುರಿನ ಬಹುದೊಡ್ಡ ಸವಾಲಾಗಿದೆ ಎಂದು ಶಾಂತಕುಮಾರ್ ಹೇಳಿದರು.

ಪತ್ರಕರ್ತ ಮನೋಹರ ಪ್ರಸಾದ್ ಮಾತನಾಡಿ, ದೃಶ್ಯ ಮಾಧ್ಯಮಗಳ ಭರಾಟೆಯಲ್ಲೂ ಮುದ್ರಣ ಮಾಧ್ಯಮವು ಓದುಗರ ವಿಶ್ವಾಸವನ್ನು ಉಳಿಸಿಕೊಂಡಿದೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ಮಾಹಿತಿಯನ್ನು ಜನರು ಹೆಚ್ಚು ನಂಬುತ್ತಾರೆ. ಹಾಗಾಗಿ ಪತ್ರಿಕೆಗಳು ಸದಾ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್‌ನ ವಿಭಾಗ ಮುಖ್ಯಸ್ಥ ರವಿರಾಜ್ ಸ್ವಾಗತಿಸಿದರು. ಪ್ರೊ. ಅನಿಷಾ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT