ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ: 5 ಕಿಂಡಿ ಅಣೆಕಟ್ಟೆ ನಿರ್ಮಾಣ

ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡ ಪಡುಪಣಂಬೂರು ಗ್ರಾ.ಪಂ
Last Updated 7 ಮೇ 2022, 16:05 IST
ಅಕ್ಷರ ಗಾತ್ರ

ಮೂಲ್ಕಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಭಾಗಕ್ಕೆ ಸಂಜೀವಿನಿಯಾಗಿದೆ. ಕೃಷಿಕರು, ಕೂಲಿ ಕಾರ್ಮಿಕರಿಗೆ ವರ್ಷಕ್ಕೆ ನೂರು ದಿನ ಕೂಲಿ ಸಹಿತ ನಗದು ಸಿಕ್ಕರೆ, ಹಳ್ಳಿಗಳಲ್ಲಿ ಒಂದಿಷ್ಟು ಮೂಲ ಸೌಕರ್ಯಕ್ಕೆ ಆಸರೆಯಾಗಿದೆ.

ಮೂಲ್ಕಿ ತಾಲ್ಲೂಕಿನ ಕೆಮ್ರಾಲ್ ಗ್ರಾಮ ಪಂಚಾಯಿತಿ ಯೋಜನೆಯ ಸದ್ಬಳಕೆ ಮಾಡಿಕೊಂಡು, ಕಳೆದ ಸಾಲಿನಲ್ಲಿ ಸುಮಾರು ₹ 52 ಲಕ್ಷ ವೆಚ್ಚದ ಕಾಮಗಾರಿ ನಡೆಸಿದೆ. ಇದರಲ್ಲಿ ಕೆಮ್ರಾಲ್‌ನ ಪಂಜದ ಗುತ್ತು ಶಾಂತರಾಮ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾಂಪೌಂಡ್ ನಿರ್ಮಿಸಿದ್ದು ವಿಶೇಷವಾಗಿದೆ.

ಕಿಲ್ಪಾಡಿ ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಠ ಕಾಮಗಾರಿಗಳು ನಡೆದಿವೆ. ಕಳೆದ ವರ್ಷದಲ್ಲಿ ₹ 1.90 ಲಕ್ಷ ವೆಚ್ಚದ ಕಾಮಗಾರಿಗಳು ನಡೆದಿದ್ದು, ಅದರಲ್ಲಿ ಹೆಚ್ಚಿನವು ತೋಡಿನ ಹೂಳೆತ್ತುವ ಕೆಲಸಗಳಾಗಿವೆ. ಐಕಳ ಗ್ರಾಮ ಪಂಚಾಯಿತಿಯಲ್ಲಿ ₹ 5 ಲಕ್ಷ ವೆಚ್ಚದಲ್ಲಿ ಕಾಮಗಾರಿಯನ್ನು ನಿರ್ವಹಿಸಲಾಗಿದೆ. ಇದರಲ್ಲಿ ಮುಖ್ಯವಾಗಿ ಅಂಗನವಾಡಿ ಕೇಂದ್ರಗಳಲ್ಲಿ ಮಳೆ ನೀರು ಕೊಯ್ಲು ರಚಿಸಲಾಗಿದೆ. ವೈಯಕ್ತಿಕ ಕಾಮಗಾರಿಗಳಲ್ಲಿ ಹೆಚ್ಚಾಗಿ ಕುಡಿಯುವ ನೀರಿನ ಬಾವಿಗಳನ್ನು ನಿರ್ಮಿಸಲಾಗಿದೆ.

ತಾಲ್ಲೂಕಿನ ಪಡುಪಣಂಬೂರು ಗ್ರಾಮ ಪಂಚಾಯಿತಿಯು ಈಗಾಗಲೇ ಹಲವಾರು ಯೋಜನೆಗಳ ಅನುಷ್ಠಾನದ ಮೂಲಕ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಗ್ರಾಮೀಣ ಭಾಗದ ಪ್ರಗತಿಗೆ ಅನುಕೂಲವಾಗುವ ಕಾಮಗಾರಿಗಳನ್ನು ಇಲ್ಲಿ ನರೇಗಾದ ಅಡಿಯಲ್ಲಿ ನಡೆಸಲಾಗಿದೆ. ಸಣ್ಣ ಗ್ರಾಮ ಪಂಚಾಯಿತಿ ಆದರೂ ನರೇಗಾ ಯೋಜನೆಯಲ್ಲಿ ಅತಿ ಹೆಚ್ಚಿನ ಅನುಕೂಲ ಪಡೆದುಕೊಂಡಿದೆ.

ಕುಡಿಯುವ ನೀರಿಗಾಗಿ ವಿಶೇಷ ಆದ್ಯತೆ ನೀಡಿ 10ನೇ ತೋಕೂರು ಗ್ರಾಮದಲ್ಲಿಯೇ 5 ಕಿಂಡಿ ಅಣೆಕಟ್ಟೆಗಳನ್ನು ನಿರ್ಮಿಸಲಾಗಿದೆ. ಇದರ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಸ್ಥಳೀಯ ಸಂಘ –ಸಂಸ್ಥೆಗಳು ನಡೆಸುತ್ತಿವೆ. ಕೆರೆ ಹೂಳೆತ್ತುವಿಕೆ, ವೈಯಕ್ತಿಕ ಶೌಚಾಲಯ, ಕುಡಿಯುವ ನೀರಿನ ಬಾವಿಗಳು, ತ್ಯಾಜ್ಯ ನಿರ್ವಹಣೆ, ಸ್ವಚ್ಛತಾ ಕಾರ್ಯ, ತೋಡು-ಚರಂಡಿಗಳ ಹೂಳೆತ್ತುವಿಕೆ ಸಹಿತ ಹಲವು ಯೋಜನೆ ರೂಪಿಸಿದ್ದರಿಂದ, ಅನೇಕ ಕಡೆಗಳಲ್ಲಿ ಕಾಂಕ್ರೀಟ್ ರಸ್ತೆಗಳು ಕೂಡ ಪಂಚಾಯಿತಿಗೆ ದೊರೆತಿದೆ. ಕಳೆದ ವರ್ಷ ₹ 16 ಲಕ್ಷ ವೆಚ್ಚದ ಯೋಜನೆಗಳು ಕಾರ್ಯರೂಪಕ್ಕೆ ಬಂದಿವೆ. ಈ ವರ್ಷವೂ ಸಹ ಕ್ರಿಯಾ ಯೋಜನೆಯಲ್ಲಿ ಹಲವು ಕೆರೆಗಳ ಅಭಿವೃದ್ಧಿಗೆ ಮುಂದಾಗಿದೆ ಎನ್ನುತ್ತಾರೆ ಪಂಚಾಯಿತಿ ಪ್ರಮುಖರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT