ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಸಂರಕ್ಷಣೆಗೆ ಮುನ್ನುಡಿ ಬರೆದ ಮುನ್ನೂರು

ಕೃಷಿ ಪ್ರಧಾನ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ: ಗ್ರಾಮಾಭಿವೃದ್ಧಿಗೆ ‘ನರೇಗಾ’ ಬಲ
Last Updated 9 ಮೇ 2022, 15:50 IST
ಅಕ್ಷರ ಗಾತ್ರ

ಉಳ್ಳಾಲ: ಕೃಷಿ ಕಾರ್ಯ ಹಾಗೂ ಜೀವನೋಪಾಯಕ್ಕೆ ಅನುಕೂಲವಾಗುವಂತೆ ಜಲ ಸಂರಕ್ಷಣೆ, ಕೆರೆಗಳ ಹೂಳೆತ್ತುವ ಜೊತೆಗೆ ಸಾಂಪ್ರದಾಯಿಕ ಜಲಸಂಪನ್ಮೂಲಗಳ ರಕ್ಷಣೆ, ನಿಂತ ನೀರು ಹರಿದುಹೋಗಲು ಚರಂಡಿ ವ್ಯವಸ್ಥೆ, ಗ್ರಾಮೀಣ ಸಂಪರ್ಕ, ಅಂಗನವಾಡಿ, ಮಹಿಳೆಯರ ಸಬಲೀಕರಣಕ್ಕಾಗಿ ಸಂಜೀವಿನಿ ಕಟ್ಟಡದ ನಿರ್ಮಾಣ ಹೀಗೆ ಹಲವು ಕೃಷಿ ಪ್ರಧಾನ ಕಾರ್ಯಕ್ರಮಗಳನ್ನು ಮುನ್ನೂರು ಗ್ರಾಮ ಪಂಚಾಯಿತಿ ನಡೆಸಿದೆ.

ದೀನ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ ಪುರಸ್ಕಾರವನ್ನು ಪಡೆದ ಮುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2021–22ನೇ ಸಾಲಿನಲ್ಲಿ ₹25 ಲಕ್ಷಕ್ಕಿಂತ ಹೆಚ್ಚು ಮೊತ್ತದ ಕೆಲಸಗಳಾಗಿವೆ. 720 ಜನರಿಗೆ ಉದ್ಯೋಗ ಕಾರ್ಡ್ ನೀಡಲಾಗಿದೆ.

ಸಣ್ಣ ಹಾಗೂ ಮಧ್ಯಮ ರೈತರೇ ಹೆಚ್ಚಿರುವ ಗ್ರಾಮದಲ್ಲಿ ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಗ್ರಾಮದ ಉದ್ದಕ್ಕೂ 90 ದ್ರವ ತ್ಯಾಜ್ಯ ಇಂಗುಗುಂಡಿಗಳು (ಸೋಕ್‌ಪಿಟ್) ರಚನೆಯಾಗಿವೆ. ವರ್ಷಾಂತ್ಯಕ್ಕೆ 150 ಪಿಟ್ ನಿರ್ಮಿಸುವ ಗುರಿಯನ್ನು ಗ್ರಾಮ ಪಂಚಾಯಿತಿ ಆಡಳಿತ ಹೊಂದಿದೆ. ಸೋಮನಾಥ ಉಳಿಯಸದಲ್ಲಿ ಮೂರು, ಬಟ್ಟೆದಡಿಯಲ್ಲಿ ಆರು ಕೃಷಿ ಬಾವಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ದನದ ಆರು ಹಟ್ಟಿಗಳನ್ನು ರಚಿಸುವ ಮೂಲಕ ಕೃಷಿಕರ ಆರ್ಥಿಕತೆಗೆ ಅನುಕೂಲ ಕಲ್ಪಿಸಲಾಗಿದೆ. ಸಾರ್ವಜನಿಕವಾಗಿ ಉಪಯೋಗವಾಗುವ ಮುನ್ನೂರು ಬಳಿ ಕುಡಿಯುವ ನೀರಿನ ಬಾವಿ, 4ನೇ ವಾರ್ಡಿನಲ್ಲಿ ಮಳೆ ನೀರು ಚರಂಡಿ, ಕಚ್ಚಾ ರಸ್ತೆಯ ಅಭಿವೃದ್ಧಿ, ತೋಡಿನ ಹೂಳೆತ್ತುವ ಕಾಮಗಾರಿ ಮಾಡಲಾಗಿದೆ.

ಕುತ್ತಾರುಗುತ್ತುವಿನಿಂದ ತೇವುಲ ಪ್ರದೇಶಕ್ಕೆ, ಹಾಗೆ ಬಟ್ಟೆದಡಿಯಿಂದ ತೇವುಲಕ್ಕೆ ರಸ್ತೆ ಇರಲಿಲ್ಲ. ಗ್ರಾಮೀಣ ಸಂಪರ್ಕವನ್ನು ಕಲ್ಪಿಸುವ ಉದ್ದೇಶದಿಂದ 30 ದಿನಗಳ ಕಾಲ ನಿತ್ಯ 100 ಜನರು ಸೇರಿ ರಸ್ತೆ ನಿರ್ಮಾಣಕ್ಕೆ ಶ್ರಮಿಸಿದರು. ಸಂತೋಷನಗರ, ಭಂಡಾರಬೈಲು, ಸುಭಾಷನಗರಕ್ಕೆ ಸುಸಜ್ಜಿತ ರಸ್ತೆಯ ನಿರ್ಮಾಣ ಮಾಡಲಾಗಿದೆ. ಮದನಿನಗರ ಗ್ರೌಂಡ್‌ನಲ್ಲಿ ಅಂಗನವಾಡಿ ಸ್ಥಾಪನೆಯಿಂದ ಈ ಭಾಗದ ಪೋಷಕರಿಗೆ ಬಹಳ ಅನುಕೂಲವಾಗಿದೆ.

ಸಮಗ್ರ ಕೆರೆ ಅಭಿವೃದ್ಧಿ: ಮದಕ ಬಳಿಯಿದ್ದ ಬೃಹತ್ ಕೆರೆ ಪಾಳುಬಿದ್ದಿತ್ತು. ಐದು ವರ್ಷಗಳ ಹಿಂದೆ 4ನೇ ವಾರ್ಡಿನಲ್ಲಿ ಸದಸ್ಯರಾಗಿದ್ದ ಗಣೇಶ್ ಟೈಲರ್ ಅವರು ಕೆರೆ ಅಭಿವೃದ್ಧಿಯತ್ತ ಹೆಚ್ಚಿನ ಒಲವು ತೋರಿಸಿ ಪಾಳುಬಿದ್ದಿದ್ದ ಕೆರೆಯನ್ನು ಸಂರಕ್ಷಿಸಿದರು. ಆ ಬಳಿಕ ಅನುದಾನ ಕೊರತೆಯಿಂದ ಅಭಿವೃದ್ಧಿ ಸಾಧ್ಯವಾಗಿರಲಿಲ್ಲ. ಈಗ ಅದೇ ವಾರ್ಡಿನ ಸದಸ್ಯ ಮಹಾಬಲ ಟಿ. ದೆಪ್ಪೆಲಿಮಾರ್ ಅವರು, ಉದ್ಯೋಗ ಖಾತ್ರಿ ಯೋಜನೆ ಮೂಲಕ ಕೆರೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಪರಿಣಾಮ, ಹಾಸುಕಲ್ಲು ಹಾಕಿದ 14 ಬೀಮ್‌ಗಳ ಜತೆಗೆ ಕೆರೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಕೆರೆಯಿಂದಾಗಿ ಮಿತ್ತಮದಕ, ಬೊಳ್ಯದಬೊಟ್ಟು, ಬಾಕಿಮಾರು, ಕಂಪದ ಮಜಲು ಹಾಗೂ ತೇವುಲ ಭಾಗಕ್ಕೆ ನೀರಿನ ಒರತೆ ಜಾಸ್ತಿಯಾಗಲಿದೆ. ಕೊಣಾಜೆಯಿಂದ ಮುನ್ನೂರು ಗ್ರಾಮಕ್ಕೆ ಮಳೆನೀರು ಹರಿದುಬರುವ ತೋಡನ್ನು 100 ದಿನಗೂಲಿ ನೌಕರರ ಮೂಲಕ ಅಭಿವೃದ್ಧಿಪಡಿಸಲಾಗಿದೆ. ಇದರಿಂದ ದೊರೆತ ಮಣ್ಣನ್ನು ಬಳಸಿ ಸಮೀಪದಲ್ಲೇ ಭಂಡಾರ ಹೋಗುವ ರಸ್ತೆ ನಿರ್ಮಿಸುವ ಮೂಲಕ ವಿಶೇಷ ಕಾಮಗಾರಿಯನ್ನು ನಡೆಸಲಾಗಿದೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು.

ಶೇ 65ರಷ್ಟು ಮಹಿಳೆಯರೇ ಉದ್ಯೋಗ ಕಾರ್ಡ್ ಪಡೆದುಕೊಂಡು ನಿತ್ಯ ಕೆಲಸದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸುಭಾಷನಗರದಲ್ಲಿರುವ ಸಮುದಾಯ ಭವನದ ಮೇಲೆ ಸಂಜೀವಿನಿ ಕಟ್ಟಡ ನಿರ್ಮಾಣ ಉದ್ಯೋಗ ಖಾತ್ರಿ ಮೂಲಕ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT