ಬುಧವಾರ, ಆಗಸ್ಟ್ 4, 2021
25 °C
ಪ್ರಗತಿ ಪರಿಶೀಲನಾ ಸಭೆ

ಕಡಲ್ಕೊರೆತ ತಡೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಸಚಿವ ಎಸ್. ಅಂಗಾರ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಚಂಡಮಾರುತ ಹಾಗೂ ಮಳೆಯ ಪ್ರಭಾವದಿಂದ ತೀವ್ರ ಸಮುದ್ರ ಕೊರೆತ ಸಂಭವಿಸಿದೆ. ತಡೆಗೋಡೆ ಕಾಮಗಾರಿಗಳನ್ನು ಆದ್ಯತೆಯ ಮೇಲೆ ವೈಜ್ಞಾನಿಕವಾಗಿ ಕೈಗೊಂಡು ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕು’ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ರಾಜ್ಯ ಕರಾವಳಿ ಪ್ರದೇಶದಲ್ಲಿ ಸಮುದ್ರ ಕೊರೆತ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ನೀಡಿರುವ ಅನುದಾನ ಹಾಗೂ ಬಂದರುಗಳ ಅಭಿವೃದ್ಧಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಪ್ರಸ್ತುತ ಸಾಲಿನ ಸಮುದ್ರ ಕೊರೆತ ತಡೆ ಕಾಮಗಾರಿಗಳನ್ನು ಕೈಗೊಳ್ಳಲು ಕರಾವಳಿಯ ಮೂರು ಜಿಲ್ಲೆಗಳಿಗೆ ₹35 ಕೋಟಿ ಅನುದಾನ ಒದಗಿಸಲಾಗಿದೆ. ಇತರ ಕಾಮಗಾರಿಗಳಿಗೆ ಅವಶ್ಯವಿರುವ ₹70 ಕೋಟಿಯ ಹೆಚ್ಚುವರಿ ಅನುದಾನದ ಪ್ರಸ್ತಾವವನ್ನು ಆರ್ಥಿಕ ಇಲಾಖೆಗೆ ಕಳುಹಿಸಿದ್ದು, ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ಕಡಲ ಕೊರೆತಕ್ಕೆ ಸಂಬಂಧಿಸಿದಂತೆ 3ವರ್ಷಗಳಿಂದ ಬಾಕಿಯಿರುವ ಕಾಮಗಾರಿಗಳನ್ನು ಈ ವರ್ಷದಲ್ಲಿ ಬಂದರು ಇಲಾಖೆಯ ಕ್ರಿಯಾ ಯೋಜ ನೆಗೆ ಸೇರಿಸಿ, ಅದಕ್ಕೆ ಅಗತ್ಯವಿರುವ ಅನುದಾನವನ್ನು ಒದಗಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಎಂದು ಸೂಚನೆ ನೀಡಿದರು.

ಏಷ್ಯಾ ಡೆವಲೆಪ್‍ಮೆಂಟ್ ಬ್ಯಾಂಕ್‍ ಆರ್ಥಿಕ ಸಹಕಾರದೊಂದಿಗೆ ಈಗಾಗಲೇ ಪೂರ್ಣಗೊಂಡಿರುವ ಶಾಶ್ವತ ಸಮುದ್ರ ಕೊರೆತ ಕಾಮಗಾರಿಗಳ ನಿರ್ವಹಣೆಗೆ ಅಗತ್ಯವಿರುವ ಕ್ರಿಯಾ ಯೋಜನೆಗಳನ್ನು ರೂಪಿಸಿ, ಇದಕ್ಕೆ ಅಗತ್ಯವಿರುವ ಅನುದಾನದ ಬೇಡಿಕೆ, ಸಮಗ್ರ ತಾಂತ್ರಿಕ ಅಧ್ಯಯನ ನಡೆಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

10 ವಿವಿಧ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿರುವ ಕಾರ್ಯಕ್ಕೆ ಗುತ್ತಿಗೆದಾರರು ಹೈಕೋರ್ಟ್‌ ನಿಂದ ತಡೆಯಾಜ್ಞೆ ತಂದಿದ್ದಾರೆ. ಮೇಲ್ಮನವಿ ಸಲ್ಲಿಸಿ ತೆರವುಗೊಳಿಸಲು ಮುಂದಾಗಬೇಕು ಎಂದು ತಿಳಿಸಿದರು.

ಸಾಗರಮಾಲಾ ಯೋಜನೆಯಡಿ ಮಂಗಳೂರಿನ ಮರೀನಾ ಯೋಜನೆ ಯನ್ನು ₹340 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ನೀಲಿ ನಕಾಶೆ ಹಾಗೂ ಪಕ್ಷಿನೋಟಕ್ಕೆ ಅನುಮೋ ದನೆಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಸೂಚನೆ ನೀಡಿದರು.

ಕಡಲ ತೀರದಲ್ಲಿರುವ ಮೀನು ಗಾರರ ಮನೆಗಳಿಗೆ ನೆರೆ ಸೇರಿದಂತೆ ಕಡಲ ಕೊರೆತದಿಂದ ಹಾನಿ ಉಂಟಾ ದಲ್ಲಿ ಅಧಿಕೃತ ದಾಖಲೆಗಳನ್ನು ಪಡೆದು ಅವರಿಗೆ ಮತ್ಸ್ಯಾಶ್ರಯ ಯೋಜನೆಯಡಿ ಕಾನೂಬದ್ಧ ಪರಿಹಾರ ನೀಡಬೇಕು ಎಂದರು.

ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಶಾಸಕರಾದ ಉಮಾನಾಥ್ ಕೋಟ್ಯಾನ್, ವೇದವ್ಯಾಸ್ ಕಾಮತ್, ಯು.ಟಿ.ಖಾದರ್, ಡಾ.ಭರತ್ ಶೆಟ್ಟಿ, ರಾಜೇಶ್ ನಾಯ್ಕ್ ಹಾಗೂ ಅಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು