ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುಸಂಕ ದಾಟಿ ಸೇವೆ ಒದಗಿಸಿದ ಆರೋಗ್ಯ ಕಾರ್ಯಕರ್ತರು

ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರ ಶ್ರಮಕ್ಕೆ ಸಚಿವ ಶ್ರೀರಾಮುಲು ಶ್ಲಾಘನೆ
Last Updated 7 ಜುಲೈ 2020, 16:41 IST
ಅಕ್ಷರ ಗಾತ್ರ

ಬೆಳ್ತಂಗಡಿ: ಕೊರೊನಾ ಸಂಕಷ್ಟದ ಕಾಲದಲ್ಲೂ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ನಕ್ಸಲ್ ಬಾಧಿತ ಪ್ರದೇಶ ಬೆಳ್ತಂಗಡಿ ತಾಲ್ಲೂಕಿನ ಸುಲ್ಕೇರಿಯ ಕೊರಗ ಕಾಲೊನಿಗೆ ಭೇಟಿ ನೀಡಿ ಜನರ ಆರೋಗ್ಯ ಸೇವೆ ಮಾಡುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಈ ಕಾಲೊನಿಯಲ್ಲಿ 40ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಇಲ್ಲಿನ ಕೆಲ ಜನರಲ್ಲಿ ಡೆಂಗಿ ಲಕ್ಷಣಗಳೂ ಕಾಣಿಸಿಕೊಂಡಿವೆ. ಮಳೆಯ ನಡುವೆ ರಭಸದಿಂದ ಹರಿಯುವ ಮೃತ್ಯುಂಜಯ ನದಿಯನ್ನು ಕಾಲುಸಂಕದ ಮೂಲಕ ದಾಟಿ ಚಿಕಿತ್ಸೆಗೆ ಹೋಗುವುದು ಸುಲಭವಲ್ಲ. ಆದರೆ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ನಿತ್ಯ ಆ ಪ್ರದೇಶಕ್ಕೆ ತೆರಳಿ ಚಿಕಿತ್ಸೆ ನೀಡುತ್ತಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಆರೋಗ್ಯ ಸಚಿವ ಶ್ರೀರಾಮುಲು, ‘ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಸುರಿಯುವ ಮಳೆಯಲ್ಲಿ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ ಪ್ರತಿ ಹಳ್ಳಿಹಳ್ಳಿಗಳಿಗೆ ತೆರಳಿ ಅವಿರತವಾಗಿ ಕಾರ್ಯನಿರ್ವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ’ ಎಂದಿದ್ದಾರೆ.

ರಭಸವಾಗಿ ಹರಿಯುವ ನದಿಯನ್ನು ಕಿರಿದಾದ ಕಾಲುಸಂಕದ ಮೂಲಕ ಜೀವ ಕೈಯಲ್ಲಿ ಹಿಡಿದುಕೊಂಡು ದಾಟಿ ಅವರಿಗೆ ಚಿಕಿತ್ಸೆ ನೀಡಿದ್ದಾರೆ. ರೋಗಗಳ ಕುರಿತು ಮುಂಜಾಗ್ರತೆ ವಹಿಸುವಂತೆ ಅರಿವು ಮೂಡಿಸಿ ಬಂದಿದ್ದಾರೆ. ಅವರ ಕರ್ತವ್ಯ ನಿಷ್ಠೆ, ನಿಸ್ವಾರ್ಥ ಸೇವೆ ನಿಜಕ್ಕೂ ಮೆಚ್ಚುವಂಥದ್ದು ಎಂದು ಸಚಿವ ಶ್ರೀರಾಮುಲು ಗೌರವ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT