ತಾಯಿ–ಮಗು ಪ್ರಯಾಣಕ್ಕೆ ಸಚಿವೆ ಶೋಭಾ ನೆರವು
ಮಂಗಳೂರು: ಮಗುವಿನ ಆರ್‌ಟಿಪಿಸಿಆರ್ ಪರೀಕ್ಷಾ ವರದಿ ಇಲ್ಲದೆ, ಕುವೈತ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಮಸ್ಯೆ ಎದುರಿಸಿದ ಮಂಗಳೂರಿನ ಮಹಿಳೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೆರವಾಗಿ, ತಾಯಿ–ಮಗುವಿನ ಸುಖ ಪ್ರಯಾಣಕ್ಕೆ ಅನುವು ಮಾಡಿಕೊಟ್ಟರು.
ಪತಿಯೊಂದಿಗೆ ಕುವೈತ್‌ನಲ್ಲಿ ಇರುವ ಮಂಗಳೂರು ಮೂಲದ ಅದಿತಿ ಸುರೇಶ್ ಕರೋಪಾಡಿ ಆರು ತಿಂಗಳ ಮಗು ಜೊತೆ ಶನಿವಾರ ಕುವೈತ್ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ವಿಮಾನ ಹತ್ತಲು ಹೊರಟಾಗ, ಮಗುವಿನ ಆರ್‌ಟಿಪಿಸಿಆರ್ ವರದಿ ಇಲ್ಲದ ಕಾರಣ ವಿಮಾನ ಹತ್ತದಂತೆ ಏರ್ ಇಂಡಿಯಾ ಅಧಿಕಾರಿಗಳು ತಡೆದಿದ್ದಾರೆ. ಇದರಿಂದ ವಿಚಲಿತರಾದ ಅದಿತಿ, ಕುವೈತ್‌ನಲ್ಲಿರುವ ಎನ್‌ಆರ್‌ಐ ಮೋಹನ್‌ದಾಸ್ ಕಾಮತ್ ಅವರನ್ನು ಸಂಪರ್ಕಿಸಿ, ಸಹಾಯ ಕೋರಿದ್ದಾರೆ.
ಮೋಹನ್‌ದಾಸ್ ಕಾಮತ್ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಮುರಳೀಧರನ್ ಮತ್ತು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಟ್ವಿಟರ್ ಖಾತೆಗಳನ್ನು ಟ್ಯಾಗ್ ಮಾಡಿ ಈ ವಿಷಯ ತಿಳಿಸಿದರು. ಜತೆಗೆ ಕೇಂದ್ರದ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರ ಆಪ್ತ ಸಹಾಯಕ ಅಭಿಷೇಕ್ ಅವರನ್ನು ಸಂಪರ್ಕಿಸಿದರು. ಕೇಂದ್ರ ವಿದೇಶಾಂಗ ಸಚಿವಾಲಯವನ್ನು ತಕ್ಷಣ ಸಂಪರ್ಕಿಸಿ ಸಮಸ್ಯೆಗೆ ಸ್ಪಂದಿಸುವಂತೆ ಶೋಭಾ, ಆಪ್ತ ಸಹಾಯಕರಿಗೆ ಸೂಚಿಸಿದರು. ಕೆಲವೇ ಹೊತ್ತಿನಲ್ಲಿ ಸಮಸ್ಯೆಗೆ ಪರಿಹಾರ ದೊರೆತು, ಅದಿತಿ ಮಗು ಜೊತೆ, ನಿಗದಿತ ವಿಮಾನದಲ್ಲೇ ಪ್ರಯಾಣಿಸಿ, ಮಂಗಳೂರು ತಲುಪಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.