ಬಯೋಮೆಟ್ರಿಕ್‌ನಿಂದ ₹580 ಕೋಟಿ ಉಳಿತಾಯ: ಸಚಿವ ಜಮೀರ್‌ ಅಹ್ಮದ್‌

7
ಮಾಪನ ಭವನಕ್ಕೆ ಶಿಲಾನ್ಯಾಸ

ಬಯೋಮೆಟ್ರಿಕ್‌ನಿಂದ ₹580 ಕೋಟಿ ಉಳಿತಾಯ: ಸಚಿವ ಜಮೀರ್‌ ಅಹ್ಮದ್‌

Published:
Updated:
Deccan Herald

ಮಂಗಳೂರು: ಪಡಿತರ ವಿತರಣೆಗೆ ಸಂಬಂಧಿಸಿದಂತೆ ಬಯೋಮೆಟ್ರಿಕ್‌ ವ್ಯವಸ್ಥೆಯನ್ನು ಜಾರಿಗೊಳಿಸಿದ ನಂತರ ಸರ್ಕಾರಕ್ಕೆ ₹580 ಕೋಟಿ ಉಳಿತಾಯವಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್‌ ಅಹ್ಮದ್‌ ಹೇಳಿದರು.

ನಗರದ ಕುಡುಪು ಹೌಸಿಂಗ್ ಬೋರ್ಡ್‌ ಜಾಗದಲ್ಲಿ ಕಾನೂನು ಮಾಪನ ಇಲಾಖೆಯ ಕಚೇರಿಗಳ ಸಂಕೀರ್ಣ ‘ಮಾಪನ ಭವನ’ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಈ ವ್ಯವಸ್ಥೆಯಲ್ಲಿ ಲೋಪವಿದ್ದರೂ, ಸಾಕಷ್ಟು ಸೋರಿಕೆಯನ್ನು ತಡೆಯಲಾಗಿದೆ. ಪಡಿತರ ಅಂಗಡಿಗಳನ್ನು ನಿರ್ವಹಿಸುವವರಿಗೆ ಹಿಂದೆ ಇದ್ದ ಗರಿಷ್ಠ ವಯೋಮಿತಿಯನ್ನು ತೆಗೆದುಹಾಕಲಾಗಿದೆ ಎಂದರು.

ಈವರೆಗೆ ಬಿಪಿಎಲ್‌ ಕಾರ್ಡ್‌ ಪಡೆಯಲು ಕುಟುಂಬದ ಸದಸ್ಯರೆಲ್ಲರೂ ಆದಾಯ ಪ್ರಮಾಣಪತ್ರ ಸಲ್ಲಿಸಬೇಕಾಗಿತ್ತು. ಇದೀಗ ನಿಯಮಾವಳಿ ಬದಲಿಸಿದ್ದು, ಬಿಪಿಎಲ್‌ ಕಾರ್ಡ್ ಪಡೆಯಲು ಕುಟುಂಬದ ಮುಖ್ಯಸ್ಥನ ಆದಾಯ ಪ್ರಮಾಣಪತ್ರ ಸಲ್ಲಿಸಿದರೆ ಸಾಕು ಎಂದು ತಿಳಿಸಿದರು.

ಸ್ಥಳದಲ್ಲೇ ₹5 ಕೋಟಿ ಮಂಜೂರು: ಶಾಸಕ ಡಿ.ವೇದವ್ಯಾಸ್‌ ಕಾಮತ್‌ ಅವರ ಮನವಿಯ ಮೇರೆಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾತರ ಅಭಿವೃದ್ಧಿಗೆ ₹5 ಕೋಟಿ ಮಂಜೂರು ಮಾಡಲಾಗುವುದು. ₹3 ಕೋಟಿಯನ್ನು ಒಂದು ವಾರದಲ್ಲಿ ಬಿಡುಗಡೆ ಮಾಡುವುದಾಗಿ ಸಚಿವ ಜಮೀರ್ ಅಹ್ಮದ್‌ ಸ್ಥಳದಲ್ಲಿಯೇ ಘೋಷಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ.ವೇದವ್ಯಾಸ್‌ ಕಾಮತ್‌ ಮಾತನಾಡಿ, ತಮ್ಮ ಕ್ಷೇತ್ರದ ಅಲ್ಪಸಂಖ್ಯಾತರ ಅಭಿವೃದ್ಧಿಗೆ ₹5 ಕೋಟಿ ಅನುದಾನ ನೀಡುವಂತೆ ಸಚಿವರ ಬಳಿ ಇಂದು ಲಿಖಿತ ಮನವಿ ಸಲ್ಲಿಸಿದ್ದೆ. ತಕ್ಷಣ ಮಂಜೂರು ಮಾಡಿದ್ದಲ್ಲದೇ, ₹3 ಕೋಟಿಯನ್ನು ವಾರದೊಳಗೆ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಕ್ಷಿಪ್ರಗತಿಯಲ್ಲಿ ಸ್ಪಂದಿಸಿದ ಸಚಿವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಈ ಭಾಗದಲ್ಲಿ ಉಳ್ಳಾಲ ಹೊರತುಪಡಿಸಿದರೆ, ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿಯೇ ಹೆಚ್ಚು ಅಲ್ಪಸಂಖ್ಯಾತರು ಇದ್ದಾರೆ. ಆ ಪ್ರದೇಶಗಳಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಅನುದಾನ ಒದಗಿಸುವಂತೆ ಸಚಿವರಿಗೆ ಮನವಿ ಮಾಡಿರುವುದಾಗಿ ಹೇಳಿದರು.

ಮೇಯರ್‌ ಭಾಸ್ಕರ್‌ ಕೆ., ಜಿಲ್ಲಾ ವಕ್ಫ್‌ ಮಂಡಳಿ ಅಧ್ಯಕ್ಷ ಕಣಚೂರು ಮೋನು, ಕೆಪಿಸಿಸಿ ಕಾರ್ಯದರ್ಶಿ ಶಾಹಿದ್‌, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್‌, ಕಾನೂನು ಮಾಪನ ಇಲಾಖೆಯ ನಿಯಂತ್ರಕಿ ಡಾ.ಕೆ.ಎನ್‌. ಅನುರಾಧಾ ವೇದಿಕೆಯಲ್ಲಿದ್ದರು.

ಕಾನೂನು ಮಾಪನ ಇಲಾಖೆಯ ಎಫ್‌.ಎಸ್‌. ಹೂಗಾರ ಸ್ವಾಗತಿಸಿದರು. ಸಹಾಯಕ ನಿಯಂತ್ರಕ ಗಜೇಂದ್ರ ವಿ.ಎಡಕೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !