ಸೋಮವಾರ, ನವೆಂಬರ್ 28, 2022
20 °C
ಖಾಸಗಿ ಕಾರ್ಯಕ್ರಮಕ್ಕೆ ಶಿಕ್ಷಕರ ಬಳಕೆ: ರಮಾನಾಥ ರೈ

ಆಡಳಿತಯಂತ್ರ ದುರುಪಯೋಗ: ರಮಾನಾಥ ರೈ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಸರ್ಕಾರವು ಆಡಳಿತಯಂತ್ರವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ. ರಮಾನಾಥ ರೈ ಆರೋಪಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರು ನಗರಕ್ಕೆ ಬಂದಾಗ ಒತ್ತಾಯಪೂರ್ವಕವಾಗಿ ಪಂಚಾಯಿತಿ ಸದಸ್ಯರು, ಫಲಾನುಭವಿಗಳನ್ನು ಕರೆತರಲಾಗಿತ್ತು. ಇದೇ ರೀತಿಯಲ್ಲಿ ಈಗ ಕೇಶವ ಸ್ಮೃತಿ ಸಂವರ್ಧನಾ ಸಮಿತಿ ಹೆಸರಿನಲ್ಲಿ ಕನ್ನಡ ಶಾಲಾ ಮಕ್ಕಳ ಹಬ್ಬವನ್ನು ಸಂಘ ನಿಕೇತನದಲ್ಲಿ ಹಮ್ಮಿಕೊಂಡು, ಸರ್ಕಾರಿ ಶಾಲೆಗಳ ಶಿಕ್ಷಕರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆಸಕ್ತ ಮಕ್ಕಳನ್ನು ಕಳುಹಿಸುವಂತೆ ಮತ್ತು ಶಿಕ್ಷಕರು ಭಾಗವಹಿಸಿದರೆ ಅವರಿಗೆ ಕಾರ್ಯನಿಮಿತ್ತ ರಜೆ ನೀಡುವುದಾಗಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ. ಸರ್ಕಾರ ಈ ಕಾರ್ಯಕ್ರಮ ನಡೆಸಲು ಆಕ್ಷೇಪ ಇಲ್ಲ. ಆದರೆ, ಈ ಕಾರ್ಯಕ್ರಮದ ಸಮಿತಿಯ ಪ್ರಮುಖರು ಬಿಜೆಪಿ ಪದಾಧಿಕಾರಿಗಳು. ಈ ಸಂಬಂಧ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಲಾಗುವುದು’ ಎಂದರು.

ಪ್ರಸ್ತುತ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಬಿಎಲ್‌ಒಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಶಾಸಕರು, ಅಂಗನವಾಡಿ ಕಾರ್ಯಕರ್ತೆಯರನ್ನು ಮನೆಗೆ ಕರೆದು, ಸನ್ಮಾನಿಸಿ ಪ್ರಭಾವ ಬೀರುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅಂಗನವಾಡಿಯೊಂದಕ್ಕೆ ನಾವು ಅಕಸ್ಮಾತ್ ಭೇಟಿ ನೀಡಿದಾಗ ಅಲ್ಲಿ ಅಕ್ಕಿಯಲ್ಲಿ ಹುಳ ಕಂಡು ಬಂದಿತ್ತು. ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಲಾಗಿತ್ತು. ಇದಕ್ಕಾಗಿ ಸಂಬಂಧಪಟ್ಟ ಅಂಗನವಾಡಿಯವರನ್ನು ಕರೆದು ಬಿಜೆಪಿ ಆಡಳಿತ ಇರುವ ಪಂಚಾಯಿತಿ ಸದಸ್ಯರು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಹರಿನಾಥ್, ಶಶಿಧರ ಹೆಗ್ಡೆ, ಇಬ್ರಾಹಿಂ ಕೋಡಿಜಾಲ್, ಶಾಲೆಟ್ ಪಿಂಟೊ, ಲುಕ್ಮಾನ್ ಬಂಟ್ವಾಳ, ಶಾಹುಲ್ ಹಮೀದ್, ಬೇಬಿ ಕುಂದರ್, ಸಲೀಂ, ಸುಧೀರ್, ಉಮೇಶ್ ದಂಡೆಕೇರಿ, ಪದ್ಮಶೇಖರ್ ಜೈನ್, ಎಂ.ಎಸ್. ಮುಹಮ್ಮದ್, ಅಬ್ಬಾಸ್ ಅಲಿ, ಸುಭಾಶ್ಚಂದ್ರ ಶೆಟ್ಟಿ, ಚಿತ್ತರಂಜನ್ ಶೆಟ್ಟಿ, ಅಪ್ಪಿ, ರಮಾನಾಂದ ಪೂಜಾರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.