ಸರ್ವೆ ಅಧಿಕಾರಿಗೆ ಶಾಸಕರ ತರಾಟೆ

ಪುತ್ತೂರು: ‘ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಗುರುತಿಸಿರುವ ಜಾಗದ ಅಳತೆ ವಿಚಾರದಲ್ಲಿ 5 ತಿಂಗಳು ಕಳೆದರೂ ವರದಿ ನೀಡದ ಸರ್ವೆ ಇಲಾಖೆಯ ಅಧಿಕಾರಿಯನ್ನು ಶಾಸಕ ಸಂಜೀವ ಮಠಂದೂರು ಮಂಗಳವಾರ ಇಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.
‘ಒಂದು ನಿವೇಶನದ ಸರ್ವೆ ನಂಬರ್ ಪಟ್ಟಾ ಸ್ಥಳದಲ್ಲಿದೆ. ಹಾಗಾಗಿ ಅಳತೆ ಮಾಡಲು ಆಗುವುದಿಲ್ಲ’ ಎಂದು ಸರ್ವೆ ಅಧಿಕಾರಿ ಸಮರ್ಥನೆ ಕೊಡಲು ಮುಂದಾದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕ, ’ಇದನ್ನು ತಿಳಿಸಲು 5 ತಿಂಗಳು ಬೇಕಾಯಿತೇ? ಕರೆ ಮಾಡಿ ಇದನ್ನು ಮೊದಲೇ ತಿಳಿಸಿದ್ದರೆ, ಬೇರೆ ಸ್ಥಳವಾದರೂ ನೋಡಬಹುದಿತ್ತಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಈಗ 5 ಡಯಾಲಿಸಿಸ್ ಯಂತ್ರಗಳಿದ್ದು 51 ಮಂದಿ ರೋಗಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. 41 ಮಂದಿ ಕಾಯುವವರ ಪಟ್ಟಿಯಲ್ಲಿದ್ದಾರೆ. ರೋಗಿಗಳಿಗೆ ಸಕಾಲದಲ್ಲಿ ಡಯಾಲಿಸಿಸ್ ಸೌಲಭ್ಯ ಸಿಗುವಂತಾಗಲು ಆಸ್ಪತ್ರೆಯಲ್ಲಿ ಇನ್ನೂ 4 ಡಯಾಲಿಸಿಸ್ ಯಂತ್ರಗಳನ್ನು ಸ್ಥಾಪನೆಗೆ ಆದ್ಯತೆ ನೀಡಲಾಗುವುದು. ಉಪ್ಪಿನಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಥಳವಕಾಶವಿದ್ದರೂ ತಜ್ಞ ವೈದ್ಯರು ಇಲ್ಲದ ಕಾರಣ ಡಯಾಲಿಸಿಸ್ ಯಂತ್ರಗಳ ಅಳವಡಿಕೆ ಸಾಧ್ಯವಾಗಿಲ್ಲ’ ಎಂದರು.
‘ಪುತ್ತೂರು ತಾಲ್ಲೂಕಿನಲ್ಲಿ 4 ದಿನಗಳಿಂದ ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿಲ್ಲ. ಸದ್ಯ 3 ಸಕ್ರಿಯ ಪ್ರಕರಣಗಳಿವೆ.ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಶೇ 100ರಷ್ಟು ಲಸಿಕೆ ನೀಡಲಾಗುತ್ತಿದೆ’ ಎಂದು ಪುತ್ತೂರು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯ ಸಭೆಗೆ ಮಾಹಿತಿ ನೀಡಿದರು.
‘ಪುತ್ತೂರು ನಗರ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಸಮಸ್ಯೆಗೆ ಎರಡು ತಿಂಗಳ ಒಳಗಾಗಿ ಪರಿಹಾರ ಕಂಡುಕೊಳ್ಳಬೇಕು’ ಎಂದು ಡಿವೈಎಸ್ಪಿ ಡಾ. ಗಾನಾ ಪಿ. ಕುಮಾರ್ ಅವರಿಗೆ ಶಾಸಕರು ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ತಹಶೀಲ್ದಾರ್ ಟಿ. ರಮೇಶ್ ಬಾಬು, ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಸಂಧ್ಯಾ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.