ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕರಾವಳಿ– ಬಿಜೆಪಿಯ ಬಾಂಧವ್ಯ ಬಲಿಷ್ಠ: ಮೋದಿ

‘ಎಕ್ಸ್‌’ ಮಾಧ್ಯಮದಲ್ಲಿ ಜನರಿಗೆ ಕೃತಜ್ಞತೆ ಸಲ್ಲಿಸಿದ ಮೋದಿ
Published 17 ಏಪ್ರಿಲ್ 2024, 5:18 IST
Last Updated 17 ಏಪ್ರಿಲ್ 2024, 5:18 IST
ಅಕ್ಷರ ಗಾತ್ರ

ಮಂಗಳೂರು: ‘ಕರ್ನಾಟಕದ ಕರಾವಳಿಯ ಜನರು ಹಾಗೂ ನಮ್ಮ ಪಕ್ಷದ ನಡುವೆ ಬಲಿಷ್ಠ ಬಾಂಧವ್ಯವಿದೆ. ಉತ್ತಮ ಆಡಳಿತದ ಸಿದ್ಧಾಂತ ಮತ್ತು ಪ್ರಾಚೀನ ಸಂಸ್ಕೃತಿಯನ್ನು ಸಂರಕ್ಷಿಸುವ ಹಾಗೂ ಆಚರಿಸುವ ನಮ್ಮ ಪ್ರಯತ್ನಗಳಿಗೆ ಜನತೆ ನಮ್ಮನ್ನು ಹಲವು ವರ್ಷಗಳಿಂದ ಆಶೀರ್ವದಿಸಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್‌’ ಮಾಧ್ಯಮದ ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ನಗರದಲ್ಲಿ ಭಾನುವಾರ ರೋಡ್‌ ಶೋನಲ್ಲಿ ಭಾಗವಹಿಸಿದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಿರುವ ಅವರು, ‘ಜಿಲ್ಲೆಯಲ್ಲಿ ಉದ್ಯಮಶೀಲತೆಗೆ ಹೆಸರಾಗಿರುವ ಅನೇಕ ಜನರಿಗೆ ನಮ್ಮ ಆರ್ಥಿಕ ಸುಧಾರಣೆಗಳಿಂದ ಪ್ರಯೋಜನವಾಗಿದೆ. ಕಳೆದ ದಶಕದಲ್ಲಿ ಬಂದರು ಅಭಿವೃದ್ಧಿ, ಮೀನುಗಾರಿಕೆ ಮತ್ತು ಮಹಿಳಾ ಮೀನುಗಾರರ ಸಬಲೀಕರಣ, ಇಂಧನ, ಆರೋಗ್ಯ ಮತ್ತು ಇತರೆ ವಲಯಗಳನ್ನು ಕೇಂದ್ರೀಕರಿಸಿ ಕೆಲಸ ಮಾಡಲಾಗಿದೆ. ಬಿಜೆಪಿಯ ಪ್ರಣಾಳಿಕೆ ʻಸಂಕಲ್ಪ ಪತ್ರʼದಲ್ಲಿ ಹೇಳಿರುವಂತೆ ನಗರಾಭಿವೃದ್ಧಿ ಮೂಲಕ ‘ಸುಗಮ ಜೀವನ’ ಕಲ್ಪಿಸಲಾಗುವುದು. ಮೀನುಗಾರಿಕೆಯಂತಹ ಕ್ಷೇತ್ರಗಳ ಕುರಿತ ನಮ್ಮ ದೃಷ್ಟಿಕೋನ ಕರಾವಳಿ ಆರ್ಥಿಕತೆಯನ್ನು ಪರಿವರ್ತಿಸುತ್ತದೆ. ಮಂಗಳೂರು ಅಭಿವೃದ್ಧಿಗೂ ನೆರವಾಗಲಿದೆ’ ಎಂದು ತಿಳಿಸಿದ್ದಾರೆ.

‘ಇತ್ತೀಚೆಗೆ ನಾನು ಉದ್ಘಾಟಿಸಿದ ಮತ್ತು ಶಿಲಾನ್ಯಾಸ ನೆರವೇರಿಸಿದ ಕಾಮಗಾರಿಗಳಿಂದ ಇಲ್ಲಿನ ಜನರ ಜೀವನಮಟ್ಟ ಸುಧಾರಣೆಗೆ ಪುಷ್ಟಿ ದೊರೆಯಲಿದೆ. ಕೊಚ್ಚಿ – ಮಂಗಳೂರು ಪೈಪ್‌ ಲೈನ್‌ ಯೋಜನೆಯೂ ಇದರಲ್ಲಿ ಸೇರಿದೆ. ಮುಂಬರುವ ದಿನಗಳಲ್ಲಿ ಇಲ್ಲಿನ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಂದರು ವಲಯಕ್ಕೆ ಸಂಬಂಧಿಸಿದಂತೆ ಮೂಲ ಸೌಕರ್ಯವನ್ನು ಆಧುನೀಕರಣಗೊಳಿಸಲಾಗುವುದು’ ಎಂದು ಹೇಳಿದ್ದಾರೆ.

‘ಮೂರನೇ ಅವಧಿಯಲ್ಲಿ ಭವಿಷ್ಯದ ಶಿಕ್ಷಣಕ್ಕೆ ಸಂಬಂಧಿಸಿದ ಅಂಶಗಳನ್ನು ಸುಧಾರಿಸುವಲ್ಲಿ ಮತ್ತು ಈ ಪ್ರದೇಶದಲ್ಲಿ ಆರೋಗ್ಯ ವಲಯದ ರಕ್ಷಣೆಗೆ ಇನ್ನೂ ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕಾಗಿದೆ. ನೀಲಿ ಕ್ರಾಂತಿಯಲ್ಲಿ ಕೆಲಸ ಮಾಡಲು ನಾವು ಬಯಸುತ್ತೇವೆ. ಇದರಿಂದ ಮೀನುಗಾರರಿಗೆ ಉತ್ತೇಜನ ಸಿಗಲಿದೆ. ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವುದರಿಂದ ಹೆಚ್ಚಿನ ಜನ ಕರ್ನಾಟಕದ ಈ ಭಾಗವನ್ನು ನೋಡಲು ಸಹಕಾರಿಯಾಗಲಿದೆ‘ ಎಂದೂ ತಿಳಿಸಿದ್ದಾರೆ.

‘ದಕ್ಷಿಣ ಕನ್ನಡದವರು ಮತಬ್ಯಾಂಕ್‌ ರಾಜಕಾರಣದಲ್ಲಿ ಮುಳುಗಿ ಜನರನ್ನು ವಿಭಜಿಸುವ ಕಾಂಗ್ರೆಸ್‌ಗೆ ಮತ ಹಾಕಲು ಸಾಧ್ಯವಿಲ್ಲ. ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಗುಂಪುಗಾರಿಕೆಯಲ್ಲಿ ನಿರತವಾಗಿದ್ದು, ಸಾರ್ವಜನಿಕರ ಹಣವನ್ನು ಲೂಟಿ ಮಾಡಿ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿದೆ. ಅವರಿಗೆ ಕರ್ನಾಟಕದ ಸಂಸ್ಕೃತಿಯ ಬಗ್ಗೆ ತಿಳಿವಳಿಕೆ ಇಲ್ಲ’ ಎಂದು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT