ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಐಟಿ ಕಂಪನಿಗಳಿಗೆ ಸೌಲಭ್ಯ: ಕೋಟ್ಯಾನ್ ಭರವಸೆ

ಮೂಡುಬಿದಿರೆಯಲ್ಲಿ ‘ಆಳ್ವಾಸ್‌ ಪ್ರಗತಿ’ ಉದ್ಯೋಗ ಮೇಳ ಆರಂಭ; ಉದ್ಯಮಿಗಳಿಗೆ ಗೌರವಾರ್ಪಣೆ
Published 8 ಜೂನ್ 2024, 7:41 IST
Last Updated 8 ಜೂನ್ 2024, 7:41 IST
ಅಕ್ಷರ ಗಾತ್ರ

ಮೂಡುಬಿದಿರೆ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಶೈಕ್ಷಣಿಕವಾಗಿ ಹೆಸರು ಗಳಿಸಿವೆ. ಆದರೆ ಇಲ್ಲಿ ಐಟಿ ಕ್ಷೇತ್ರದ ಉದ್ಯೋಗ ಸೃಷ್ಟಿ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಆದ್ದರಿಂದ ಕಂಪನಿಗಳು ಬರುವಂಥ ವಾತಾವರಣ ಸೃಷ್ಟಿ ಆಗಬೇಕು ಎಂದು ಮೂಲ್ಕಿ–ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಆಶಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇಲ್ಲಿನ ವಿದ್ಯಾಗಿರಿಯಲ್ಲಿ ಆಯೋಜಿಸಿರುವ ‘ಆಳ್ವಾಸ್‌–ಪ್ರಗತಿ’ ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ಉಭಯ ಜಿಲ್ಲೆಗಳಲ್ಲಿ ಐಟಿ ಉದ್ಯಮ ಬೆಳೆಯಬೇಕು, ನನ್ನ ಕ್ಷೇತ್ರದಲ್ಲಿ ಉದ್ಯಮ ಸ್ಥಾಪಿಸಲು ಮುಂದೆ ಬರುವವರಿಗೆ ಜಾಗ ಮತ್ತಿತರ ವ್ಯವಸ್ಥೆ ಮಾಡಿಕೊಡಲಾಗುವುದು’ ಎಂದು ಭರವಸೆ ನೀಡಿದರು.

‘ಶಿಕ್ಷಣ ಹಬ್ ಎಂದು ಕರೆಸಿಕೊಂಡಿರುವ ಇಲ್ಲಿ ಉದ್ಯಮ ಸೃಷ್ಟಿಗೆ ಪೂರಕ ವಾತಾವರಣ ನಿರ್ಮಿಸುವಂತೆ ಸರ್ಕಾರವನ್ನು ಅನೇಕ ಬಾರಿ ಕೋರಲಾಗಿದೆ. ಇಲ್ಲಿ ಓದಿದವರಿಗೆ ಇಲ್ಲೇ ಕೆಲಸ ದೊರೆತರೆ ಪ್ರತಿಭಾ ಪಲಾಯನವನ್ನು ತಡೆಯಬಹುದು’ ಎಂದು ಅವರು ಅಭಿಪ್ರಾಯಪಟ್ಟರು.

ಮೇಳ ಉದ್ಘಾಟಿಸಿದ ಎಂಆರ್‌ಜಿ ಗ್ರೂಪ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಮಾತನಾಡಿ ಕೈಗೆ ಕೆಲಸ ಇದ್ದರೆ ಬಾಯಿಗೆ ತುತ್ತು ಸಿಗುತ್ತದೆ. ವರ್ಷಗಳ ಹಿಂದೆ ಉದ್ಯೋಗ ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿ ಇತ್ತು. ಈಗ ಇಂಥ ಮೇಳಗಳಿಂದಾಗಿ ಉದ್ಯೋಗವೇ ಅಭ್ಯರ್ಥಿಗಳನ್ನು ಹುಡುಕಿಕೊಂಡು ಬರುತ್ತದೆ. ಇದು ಉತ್ತಮ ಬೆಳವಣಿಗೆ. ಆದರೆ, ಉತ್ತಮ ಉದ್ಯೋಗಕ್ಕಾಗಿ ಮುನ್ನೋಟದ ಜೊತೆಯಲ್ಲಿ ಸರಿಯಾದ ಪ್ರಯುತ್ನವೂ ಅಗತ್ಯ ಎಂದರು.

‘ಅದೃಷ್ಟದ ಜೊತೆ ಪ್ರಯತ್ನವೂ ಸೇರಿದಾಗ ಮಾತ್ರ ಸಾಧನೆಯ ಹಾದಿ ತೆರೆದುಕೊಳ್ಳುತ್ತದೆ. ಗ್ರಾಮೀಣ ಪ್ರದೇಶದಿಂದ ಬಂದು ದೊಡ್ಡ ಹೆಸರು ಮಾಡಿರುವ ಮೋಹನ ಆಳ್ವ ಅವರು ಈ ಮಾತಿಗೆ ಅತ್ಯುತ್ತಮ ಉದಾಹರಣೆ’ ಎಂದ ಅವರು ‘ಉದ್ಯೋಗದಾತರಾಗುವುದರಲ್ಲೂ ಅಪಾರ ಖುಷಿ ಇದೆ. ಔದ್ಯೋಗಿಕ ಕ್ಷೇತ್ರದಲ್ಲಿ ಯೋಜನೆ, ಆಡಳಿತ ನಿರ್ವಹಣೆ ಮತ್ತು ಆರ್ಥಿಕ ನಿರ್ವಹಣೆ ಮುಖ್ಯ. ಏನೂ ಮಾಡದೆ ಸುಮ್ಮನೇ ಕೈಕಟ್ಟಿ ಕುಳಿತರೆ ಬೇರೆಯವರು ನಮ್ಮನ್ನು ಮೀರಿ ಮುಂದೆ ಸಾಗುತ್ತಾರೆ’ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕರಾವಳಿಯ ಉದ್ಯಮಿಗಳಿಗೆ ಗೌರವ

ಕರಾವಳಿಯಲ್ಲಿ ಉದ್ಯಮ ಬೆಳೆಸಿದ ಗ್ಲೋ ಟಚ್ ಟೆಕ್ನಾಲಜೀಸ್ ಅಧ್ಯಕ್ಷೆ ವಿದ್ಯಾ ರವಿಚಂದ್ರನ್, ನೀವಿಯಸ್ ಸೊಲ್ಯೂಷನ್ಸ್ ಸಹಸ್ಥಾಪಕ ಸುಯೋಗ್ ಶೆಟ್ಟಿ ಪರವಾಗಿ ಗೋಕುಲ್ ನಾಯಕ್, ನೈಂಟಿನೈನ್‌ ಗೇಮ್ಸ್ ರೋಬೊ ಸಾಫ್ಟ್ ಟೆಕ್ನಾಲಜೀಸ್‌ ನಿರ್ದೇಶಕ ರೋಹಿತ್ ಭಟ್, ಇಜಿ ಇಂಡಿಯಾ ಪ್ರೈವೆಟ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಫೆರ್ನಾಂಡಿಸ್, ಜಿಯೊಗೊ ಸ್ಟುಡಿಯೊಸ್ ಉಪಾಧ್ಯಕ್ಷ ಅಭಿಜಿತ್ ಶೆಟ್ಟಿ, ಇನ್ಫೋಸಿಸ್‌ನ ಬಿಪಿಎಂ ಆಪರೇಷನ್ಸ್ ವಿಭಾಗದ ಮುಖ್ಯಸ್ಥ ಲಲಿತ್ ರೈ ಅವರನ್ನು ಗೌರವಿಸಲಾಯಿತು. ಉದ್ಯಮಿ ಕೆ.ಶ್ರೀಪತಿ ಭಟ್ ಇದ್ದರು. ವೇಣುಗೋಪಾಲ್ ಶೆಟ್ಟಿ ನಿರೂಪಿಸಿದರು. ಪ್ರಿಯಾ ಸಿಕ್ವೇರಾ ಸನ್ಮಾನ ಪತ್ರ ವಾಚಿಸಿದರು.

ಉದ್ಯೋಗ ಮೇಳದತ್ತ ಹೆಜ್ಜೆ ಹಾಕಿದ ಆಕಾಂಕ್ಷಿಗಳು -ಪ್ರಜಾವಾಣಿ ಚಿತ್ರ / ಫಕ್ರುದ್ಧೀನ್ ಎಚ್
ಉದ್ಯೋಗ ಮೇಳದತ್ತ ಹೆಜ್ಜೆ ಹಾಕಿದ ಆಕಾಂಕ್ಷಿಗಳು -ಪ್ರಜಾವಾಣಿ ಚಿತ್ರ / ಫಕ್ರುದ್ಧೀನ್ ಎಚ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT