ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ಮಕ್ಕಳಿಗೂ ಬೇಡ ತಾಯಿ! ಹಿರಿಯ ನಾಗರಿಕರ ಸಹಾಯವಾಣಿ ಕದ ತಟ್ಟಿದ ಸುಬ್ಬಲಕ್ಷ್ಮೀ

ಹಿರಿಯ ನಾಗರಿಕರ ಸಹಾಯವಾಣಿ ಕದ ತಟ್ಟಿದ ಸುಬ್ಬಲಕ್ಷ್ಮೀ
Last Updated 5 ಡಿಸೆಂಬರ್ 2021, 4:33 IST
ಅಕ್ಷರ ಗಾತ್ರ

ಉಳ್ಳಾಲ: 85 ವಯಸ್ಸಿನ ವೃದ್ಧೆಗೆ 9 ಮಂದಿ ಮಕ್ಕಳಿದ್ದಾರೆ. ಆದರೆ ತಾಯಿ ಎಲ್ಲರಿಗೂ ಭಾರ, ಯಾರಿಗೂ ಬೇಡವಾಗಿದ್ದಾಳೆ. ಮಕ್ಕಳ ಮನೆಯಲ್ಲಿ ಉಳಿಯಲು ತನಗೆ ಅವಕಾಶ ಕಲ್ಪಿಸಿ ಕೊಡುವಂತೆ ಪಾಂಡೇಶ್ವರ ಠಾಣೆ ಹಿರಿಯ ನಾಗರಿಕರ ಸಹಾಯವಾಣಿ ಕದ ತಟ್ಟಿದ್ದಾರೆ ಸುಬ್ಬಲಕ್ಷ್ಮೀ.

85 ವಯಸ್ಸಿನ ಸುಬ್ಬಲಕ್ಷ್ಮೀ ಅವರಿಗೆ ಐದು ಮಂದಿ ಪುತ್ರಿಯರು, 5 ಮಂದಿ ಪುತ್ರರು, ‌ಒಬ್ಬ ಮಗ ಮೃತಪಟ್ಟಿದ್ದಾರೆ. ತಿಂಗಳಿಗೆ ಒಬ್ಬರ ಮನೆಯಲ್ಲಿ ಉಳಿಬೇಕು ಎನ್ನುವ ಆಸೆ ಈ ತಾಯಿಯದ್ದು. ತೊಕ್ಕೊಟ್ಟು ಕಾಪಿಕಾಡಿನಲ್ಲಿ ಇರುವ ಪುತ್ರನ ಮನೆಯಲ್ಲಿದ್ದ ಸುಬ್ಬಲಕ್ಷ್ಮೀ ಅವರನ್ನು ಮೂರು ತಿಂಗಳ ಹಿಂದೆಯೆ ದೂರದ ಸಂಬಂಧಿ ಮನೆಗೆ ಕಳುಹಿಸಲಾಗಿದೆ. ಆದರ ನಂತರ ಯಾರೂ ಕೂಡ ಇಲ್ಲಿಂದ ಕರೆದುಕೊಂಡು ಹೋಗಿಲ್ಲ ಎಂದು 85 ವಯಸ್ಸಿನ ಸುಬ್ಬಲಕ್ಷ್ಮೀ ಸಂಕಟ ಪಟ್ಟರು.

ಅಕ್ಕರೆಯಿಂದ ಪಾಲನೆ ಮಾಡಿದ ಹೆಣ್ಣುಮಕ್ಕಳ ಮನೆಗೆ ಹೋಗುವುದಕ್ಕೆ ಸುಬ್ಬಲಕ್ಷ್ಮೀ ಅವರು ಮನಸ್ಸು ಒಪ್ಪುತ್ತಿಲ್ಲ. ಗಂಡು ಮಕ್ಕಳು ಬಂದು ಮನೆಗೆ ಕರೆದುಕೊಂಡು ಹೋಗುತ್ತಾರೆ ಎಂಬ ಆಸೆಯ ಕಣ್ಣುಗಳಿಂದ ದಾರಿ ನೋಡುತ್ತಿರುವ ಈ ತಾಯಿಗೆ ಯಾರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಒಂಬತ್ತು ಮಂದಿ ಮಕ್ಕಳಿದ್ದರೂ ಆಶ್ರಯ ಸಿಗದೇ ಸುಬ್ಬಲಕ್ಷ್ಮೀ ಅವರು ಕಂಗಾಲಾಗಿದ್ದಾರೆ. ನೊಂದು ದಿಕ್ಕು ಕಾಣದೆ ನ್ಯಾಯಕ್ಕಾಗಿ ಹಿರಿಯ ನಾಗರಿಕ ಸಹಾಯವಾಣಿಯ ಕದ ತಟ್ಟಿದ್ದಾರೆ.

ಸುಬ್ಬಲಕ್ಷ್ಮೀ ಅವರ ದೂರಿಗೆ ಸ್ಪಂದಿಸಿದ ಠಾಣಾ ನಿರೀಕ್ಷಕಿ ರೇವತಿ ಅವರು ಸಹಾಯವಾಣಿ ಸಂಯೋಜಕರ ತಂಡದ ಮೂಲಕ ಪುತ್ರರನ್ನು ಸಂಪರ್ಕಿಸಿ ಎರಡು ವಾರಗಳ ಸಮಯ ನೀಡಿದ್ದಾರೆ. ಆದರೆ, ಯಾರೂ ಕೂಡ ಹೆತ್ತ ತಾಯಿ ಸುಬ್ಬಲಕ್ಷ್ಮೀ ಅವರನ್ನು ಕರೆದುಕೊಂಡು ಹೋಗಲು ಮನಸ್ಸು ಮಾಡದ ಹಿನ್ನೆಲೆಯಲ್ಲಿ ಶನಿವಾರ ಸಹಾಯವಾಣಿ ಸಂಯೋಜಕಿ ಎಸ್.ರೇವತಿ , ಕೌನ್ಸಿಲರ್‌ಗಳಾದ ಮಹಿಮಾ, ರಂಜಿನಿ, ಉಷಾ , ಆಶಿತಾ ಅವರು ಪೊಲೀಸರ ಸಹಕಾರದೊಂದಿಗೆ ಸುಬ್ಬುಲಕ್ಷ್ಮಿ ಅವರನ್ನು ತೊಕ್ಕೊಟ್ಟು ಕಾಪಿಕಾಡು ಬಳಿ ಮಗನ ಮನೆಗೆ ಕರೆದುಕೊಂಡು ಬಂದಿದ್ದರು. ಆದರೆ ಮನೆಗೆ ಬೀಗ ಹಾಕಲಾಗಿತ್ತು.

ಅಧಿಕಾರಿಗಳಿಗೆ ನಿಂದನೆಯ ಬಹುಮಾನ

‘ದೂರವಾಣಿ ಮೂಲಕ ಸಂಪರ್ಕಿಸಿದಾಗ ಕರೆ ಸ್ವೀಕರಿಸಿದ ಸೊಸೆ, ಪೊಲೀಸರು ಹಾಗೂ ಸಹಾಯವಾಣಿ ಸಿಬ್ಬಂದಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆ. ಮತ್ತೆ ವೃದ್ದೆ ಸುಬ್ಬಲಕ್ಷ್ಮಿ ಅವರನ್ನು ವಾಪಸ್‌ ಕರೆತರಲಾಗಿದೆ. ನಾಲ್ವರು ಪುತ್ರರನ್ನು ಠಾಣೆಗೆ ಕರೆಸಿ ಮಾತುಕತೆ ನಡೆಸುವ ತೀರ್ಮಾನಕ್ಕೆ ಮುಂದಾಗಿದ್ದು, ಆಗ ಕೂಡ ಯಾರೂ ಕರೆದುಕೊಂಡು ಹೋಗದೆ ಇದ್ದಲ್ಲಿ ಕಾನೂನು ರೀತಿ ದೂರು ದಾಖಲಿಸಿ, ಉಪ ವಿಭಾಗಾಧಿಕಾರಿ ನೇತೃತ್ವದ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT