ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಮದರ್‌ ಥೆರೆಸಾ ವಿಚಾರ ಸಂಕಿರಣ 9ರಂದು

Last Updated 6 ಸೆಪ್ಟೆಂಬರ್ 2022, 14:17 IST
ಅಕ್ಷರ ಗಾತ್ರ

ಮಂಗಳೂರು: ‘ಮದರ್ ಥೆರೆಸಾ ಅವರ 25ನೇ ಸಂಸ್ಮರಣೆ ದಿನಾಚರಣೆ ಅಂಗವಾಗಿ ‘ಬಹುತ್ವದ ಭಾರತದಲ್ಲಿ ಮಾನವೀಯ ಸೇವೆಗಳು’ ಕುರಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ವಿಚಾರ ಸಂಕಿರಣವನ್ನು ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಇದೇ 9ರಂದು ಮಧ್ಯಾಹ್ನ 3ರಿಂದ ಏರ್ಪಡಿಸಲಾಗಿದೆ’ ಎಂದು ಸಂತ ಮದರ್‌ ಥೆರೆಸಾ ವಿಚಾರ ವೇದಿಕೆ ಅಧ್ಯಕ್ಷ ರಾಯ್‌ ಕ್ಯಾಸ್ಟಲಿನೊ ತಿಳಿಸಿದರು.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಬರಹಗಾರ್ತಿ ಪಲ್ಲವಿ ಇಡೂರು ವಿಚಾರ ಮಂಡಿಸಲಿದ್ದಾರೆ. ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಫಾ.ಜೆ.ಬಿ.ಸಲ್ಡಾನ ಹಾಗೂ ಯುವಜನ ಚಳವಳಿಯ ಪ್ರಮುಖರಾದ ಮುನೀರ್‌ ಕಾಟಿಪಳ್ಳ ಪ್ರತಿಕ್ರಿಯೆ ನೀಡಲಿದ್ದಾರೆ. ಪ್ರೀತಿಯ ಸಿಂಚನ ಗಾಯನ ಕಾರ್ಯಕ್ರಮದಲ್ಲಿ ನಾದ ಮಣಿನಾಲ್ಕೂರು ಬಳಗ, ಮೈಮ್‌ ರಾಮದಾಸ್‌, ಮೇಘನಾ ಕುಂದಾಪುರ, ಜಾಸ್ಮಿನ್‌ ಡಿಸೋಜಾ ಹಾಗೂ ಮಹಮ್ಮದ್‌ ಇಸ್ಮಾಯಿಲ್‌ ಅವರು ಸೌಹಾರ್ದ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ’ ಎಂದರು.

ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್‌ ಕುಮಾರ್‌ ಬಜಾಲ್‌, ‘ಥೆರೆಸಾ ಕುರಿತು ಜಿಲ್ಲಾ ಮಟ್ಟದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಿದ್ದೆವು. ಅದರಲ್ಲಿ ವಿದ್ಯಾರ್ಥಿಗಳು ಸೇರಿ 520ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಇಷ್ಟೊಂದು ಸ್ಪಂದನೆ ಸಿಕ್ಕಿದ್ದು ಜಿಲ್ಲೆಯಲ್ಲಿ ಸೌಹಾರ್ದದ ಕೊಂಡಿ ಬೆಸೆಯುವ ಪ್ರಯತ್ನಕ್ಕೆ ಮತ್ತಷ್ಟು ಹುಮ್ಮಸ್ಸು ತುಂಬಿದೆ. ಈ ಸ್ಪರ್ಧೆಗಳ ವಿಜೇತರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಿದ್ದೇವೆ’ ಎಂದರು.

ವೇದಿಕೆಯ ಎಂ.ಜಿ.ಹೆಗಡೆ, ‘ವಿದ್ಯಾರ್ಥಿಗಳು ಬರೆದ 10 ಪ್ರಬಂಧಗಳು ಉತ್ಕೃಷ್ಟವಾಗಿದ್ದವು. ಅವರ ಚಿಂತನೆಗಳು ದ್ವೇಷದ ಕಡೆಗೆ ಸಾಗುತ್ತಿರುವ ಯುವಮನಸುಗಳನ್ನು ಮತ್ತೆ ಪ್ರೀತಿಯೆಡೆಗೆ ಸೆಳೆಯುವ ಹೊಸ ಭರವಸೆ ಮೂಡಿಸಿವೆ‌’ ಎಂದರು.

ಕಾರ್ಯಕ್ರಮ ಸಂಯೋಜಕ ಫಾ.ರೂಪೇಶ್‌ ಮಾಡ್ತಾ, ‘ಪ್ರೀತಿ ಹರಡಲಿ ಎಲ್ಲೆಡೆ ಎಂಬುದು ಈ ವೇದಿಕೆಯ ಧ್ಯೇಯವಾಕ್ಯ. 120 ಸಕ್ರಿಯ ಸದಸ್ಯರು ಈ ವೇದಿಕೆಯಲ್ಲಿದ್ದಾರೆ. ಕರಾವಳಿಯಲ್ಲಿ ಸಾಮರಸ್ಯ ಬಯಸುವ ಮನಸುಗಳನ್ನು ಒಗ್ಗೂಡಿಸಿ, ಮಾರ್ಗದರ್ಶನ ನೀಡಿದರೆ ಸೌಹಾರ್ದದ ಬುನಾದಿ ಮತ್ತಷ್ಟು ಗಟ್ಟಿಯಾಗಲಿದೆ. ಈ ನಿಟ್ಟಿನಲ್ಲಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ’ ಎಂದರು.

ವೇದಿಕೆಯ ಸುಶೀಲ್‌ ನೊರೊನ್ಹಾ, ಯಶವಂತ ಮರೋಳಿ, ಕೆ.ಅಶ್ರಫ್‌, ಎಂ.ದೇವದಾಸ ಹಾಗೂ ಕಥೋಲಿಕ್‌ ಸಭಾದ ಅಧ್ಯಕ್ಷ ಸ್ಟ್ಯಾನಿ ಲೋಬೊ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT