ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ್ಕಿ ತಾಲ್ಲೂಕು ಕೇಂದ್ರ ಅಭಿವೃದ್ಧಿಗೆ ಯೋಜನೆ

ಕಾರ್ನಾಡು: ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ
Last Updated 29 ಸೆಪ್ಟೆಂಬರ್ 2022, 6:56 IST
ಅಕ್ಷರ ಗಾತ್ರ

ಮೂಲ್ಕಿ: ‘ಮುಂದಿನ 30 ವರ್ಷಗಳ ದೂರದೃಷ್ಟಿಯ ಚಿಂತನೆಯೊಂದಿಗೆ ಮೂಲ್ಕಿ ತಾಲ್ಲೂಕು ಕೇಂದ್ರವನ್ನು ಅಭಿವೃದ್ಧಿಪಡಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಹೇಳಿದರು.

ಮೂಲ್ಕಿ ಕಾರ್ನಾಡು ನಾಡಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ‘ಪ್ರತಿ ಮಂಗಳವಾರ ತಾಲ್ಲೂಕು ಕೇಂದ್ರಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡಲು ಪ್ರಯತ್ನಿಸಲಾಗುವುದು’ ಎಂದರು.

‘ಮೂಲ್ಕಿ ಪಡಿತರ ವಿತರಣಾ ಕೇಂದ್ರದಲ್ಲಿ ಸರ್ವರ್ ಸಮಸ್ಯೆಯಿಂದ ಜನರಿಗೆ ಪಡಿತರ ಪಡೆಯಲು ಸಮಸ್ಯೆಯಾಗಿದೆ’ ಎಂದು ಸಮಾಜ ಸೇವಕ ಹಸನ್ ಬಶೀರ್ ಕುಲಾಯಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದರು.

‘ಜಾಗ ಮಾರಾಟಕ್ಕೆ ಅಗತ್ಯವಿರುವ 11 ಇ ನಕ್ಷೆ ವಿಳಂಬವಾಗುವುದರಿಂದ ಸಮಸ್ಯೆಯಾಗಿದೆ ಎಂದು ಕೊಲ್ಲೂರು ನಿವಾಸಿ ಮಾರ್ಕ್‌ ಮಾರ್ಟಿಸ್‌ ದೂರಿದರು. ಖಾಸಗಿ ಜಮೀನಿನಲ್ಲಿ ವಿದ್ಯುತ್ ಕಂಬಗಳನ್ನು ಹಾಕಿದ ಮೆಸ್ಕಾಂ ಬಗ್ಗೆ ಹಾಗೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭ ಆರ್‌ಟಿಸಿಯಲ್ಲಿ ಹೆಸರು ಬದಲಾಯಿಸಿದ ಬಗ್ಗೆ ಅತಿಕಾರಿ ಬೆಟ್ಟು ಗ್ರಾಮದ ದಿನೇಶ್ಚಂದ್ರ ಆಜಿಲ ದೂರು ನೀಡಿದರು. ಈ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

‘ಮೂಲ್ಕಿ ತಾಲ್ಲೂಕು ವ್ಯಾಪ್ತಿಯಲ್ಲಿ 30 ಗ್ರಾಮಗಳು ಹಾಗೂ 17 ವೃತ್ತಗಳನ್ನಾಗಿ ವಿಂಗಡಿಸಲಾಗಿದ್ದು ಅದರಲ್ಲಿ ಕೇವಲ 3 ಗ್ರಾಮ ಲೆಕ್ಕಾಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 88 ಗ್ರಾಮ ಲೆಕ್ಕಾಧಿಕಾರಿಗಳ ಕೊರತೆ ಇದೆ. ಪರಿಕ್ಷಾಂಗ ಇಲಾಖೆ ಮೂಲಕ ಪರೀಕ್ಷೆ ನಡೆಸಿ ವಿಎ ಹುದ್ದೆಗೆ ನೇಮಕಾತಿ ನಡೆಸಲು ಸರ್ಕಾರ ಚಿಂತನೆ ನಡೆಸಿದೆ’ ಎಂದರು.

ಮೂಲ್ಕಿಯ ಶಾಂಭವಿ ನದಿ ಪಾತ್ರದಲ್ಲಿ ಸಿಆರ್‌ಜೆಡ್‌ ಹಝಾರ್ಡ್(ಅಪಾಯ ಮಟ್ಟ) ಲೈನ್ ಒಳಗೆ ಮನೆ ಕಟ್ಟಲು ಬಯಸುವ ಸಾರ್ವಜನಿಕರಿಗೆ ಪರಿಷ್ಕೃತ ಯೋಜನಾ ಪಟ್ಟಿ ಬಿಡುಗಡೆಯಾಗಿದ್ದು ಸ್ವಲ್ಪ ಮಟ್ಟಿಗೆ ನಿಯಮಾವಳಿ ಸಡಿಲಿಸಲಾಗಿದೆ’ ಎಂದರು.

ಮೂಲ್ಕಿ ಹಾಗೂ ಕಿನ್ನಿಗೋಳಿ ನಗರದ ತ್ಯಾಜ್ಯ ಸಂಸ್ಕರಣೆಗಾಗಿ ಎಳತ್ತೂರು ಪ್ರದೇಶದಲ್ಲಿ ನಿವೇಶನ ಪರಿಶೀಲಿಸಿ ಶಾಸಕರೊಂದಿಗೆ ಪರಾಮರ್ಶೆ ನಡೆಸಿ ಮುಂದಿನ ಯೋಜನೆ ರೂಪಿಸಲಾಗುವುದು ಎಂದರು. ಮೂಲ್ಕಿ ಬಸ್‌ ನಿಲ್ದಾಣಕ್ಕಾಗಿ ಖಾಸಗಿ ಭೂಮಿಯ ಮೊತ್ತವನ್ನು ಕೋರ್ಟ್‌ ಸುಪರ್ದಿಗೆ ನೀಡಿ ಯೋಜನೆ ಜಾರಿಗೆ ಕ್ರಮ ವಹಿಸಲಾಗುವುದು’ ಎಂದರು.

ಮೂಲ್ಕಿ ಸಮುದಾಯ ಆಸ್ಪತ್ರೆಗೆ ಸೇರಿದ ಜಮೀನಿನ ಕೆಲ ಭಾಗವನ್ನು ಖಾಸಗಿ ವ್ಯಕ್ತಿಗಳು ಆಕ್ರಮಿಸಿಕೊಂಡಿರುವ ಬಗ್ಗೆ ಪ್ರಕಾಶ ಸುವರ್ಣ ಸಂಶಯ ವ್ಯಕ್ತಪಡಿಸಿದರು. ತಕ್ಷಣ ಜಾಗ ಅಳತೆ ಮಾಡಿ ಸ್ಥಳ ಗುರುತು ಮಾಡಬೇಕು ಎಂದು ಜಿಲ್ಲಾಧಿಕಾರಿ ಸರ್ವೆಯರ್‌ಗೆ ಸೂಚಿಸಿದರು. ಈ ಪ್ರದೇಶಕ್ಕೆ ತಂತಿ ಬೇಲಿ ಅಳವಡಿಸಲು ಸೂಕ್ತ ಯೋಜನೆ ರೂಪಿಸುವಂತೆ ಮೂಲ್ಕಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಚಂದ್ರ ಪೂಜಾರಿಗೆ ಸೂಚಿಸಿದರು.

ಮೂಲ್ಕಿ ತಹಶೀಲ್ದಾರ್ ಸಚ್ಚಿದಾನಂದ ಕಚನೂರ, ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾವತಿ, ಎಡಿಎಲ್ಆರ್ ಅಧಿಕಾರಿ ಗೋಪಾಲ್, ಉಪ ತಹಶೀಲ್ದಾರ್ ದಿಲೀಪ್ ರೋಡ್ಕರ್, ಕಂದಾಯ ನಿರೀಕ್ಷಕ ದಿನೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT