ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಡುಗಿ ಜೊತೆ ಮಾತನಾಡಿದ ಮುಸ್ಲಿಂ ಯುವಕನಿಗೆ ಗುಂಪಿನಿಂದ ಹಲ್ಲೆ

ಸುಬ್ರಹ್ಮಣ್ಯ:ಯುವಕನ ವಿರುದ್ಧವೂ ದೂರು ನೀಡಿದ ಬಾಲಕಿಯ ತಾಯಿ – ‍ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು
Last Updated 6 ಜನವರಿ 2023, 12:46 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಬಳಿ ಗುರುವಾರ ಸಂಜೆ ಹುಡುಗಿಯ ಜೊತೆ ಮಾತನಾಡಿ ಚಾಕೊಲೇಟ್‌ ನೀಡಿದ ಯುವಕನನ್ನು ಜೀಪಿನಲ್ಲಿ ಸಮೀಪದ ಕುಮಾರಧಾರ ಜಂಕ್ಷನ್‌ನ ಹಳೆಯ ಕಟ್ಟಡಕ್ಕೆ ಕರೆದೊಯ್ದು ಹಲ್ಲೆ ನಡೆಸಲಾಗಿದೆ.

ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಗೆ ಯುವಕ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ‌ಸುಳ್ಯ ತಾಲ್ಲೂಕು ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಹಫೀದ್‌ (20) ಹಲ್ಲೆಗೊಳಗಾದ ಯುವಕ.

‘ವರ್ಷದ ಹಿಂದೆ ಇನ್ಸ್ಟಾಗ್ರಾಂನಲ್ಲಿ ಇಲ್ಲಿನ ವಿದ್ಯಾರ್ಥಿನಿಯೊಬ್ಬಳ ಪರಿಚಯವಾಗಿತ್ತು. ಆಕೆಯ ಜೊತೆ ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಬಳಿ ಈ ಹಿಂದೆ ಎರಡು ಮೂರು ಸಲ ಮಾತನಾಡಿದ್ದೆ. ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಕಾಲೇಜಿನಿಂದ ಬಸ್‌ನಿಲ್ದಾಣಕ್ಕೆ ಬಂದಿದ್ದ ಆಕೆಯನ್ನು ಮಾತನಾಡಿಸಿ ಚಾಕಲೇಟ್‌ ಕೊಡುತ್ತಿದ್ದೆ. ಆಗ, ಪರಿಚಯವಿಲ್ಲದ ಎರಡು–ಮೂರು ಜನರು ನನ್ನನ್ನು ಬಲವಂತದಿಂದ ಎಳೆದೊಯ್ದು ಜೀಪಿನಲ್ಲಿ ಹಾಕಿದರು. ಮತ್ತೆ ಐದಾರು ಜನ ಸೇರಿ ಸಮೀಪದ ಕುಮಾರಧಾರ ಜಂಕ್ಷನ್‌ ಬಳಿಯ ಹಳೆ ಕಟ್ಟಡದ ಕೊಣೆಯೊಳಗೆ ಕರೆದೊಯ್ದು ಕೂಡಿಹಾಕಿದರು’ ಎಂದು ಹಲ್ಲೆಗೊಳಗಾದ ಹಫೀದ್‌ ದೂರಿನಲ್ಲಿ ತಿಳಿಸಿದ್ದಾರೆ.

‘ಆ ಕೋಣೆಯಲ್ಲಿ ಸುಮಾರು 10-12 ಮಂದಿ ಸೇರಿ ದೊಣ್ಣೆ ಮತ್ತು ಬೆತ್ತಗಳಿಂದ ನನಗೆ ಹೊಡೆದರು. ಒಬ್ಬಾತ ಚಾಕುವಿನಿಂದ ತಿವಿಯಲು ಬಂದ. ಆಗ ಉಳಿದವರು ಅವನನ್ನು ತಡೆದರು. ‘ಇನ್ನು ಮುಂದೆ, ನಮ್ಮ ಹುಡುಗಿಯರ ತಂಟೆಗೆ ಬಂದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ’ ಎಂದು ಬೆದರಿಕೆಯೊಡ್ಡಿದರು. ಹಲ್ಲೆ ನಡೆಸಿದವರು ನನ್ನ ಮೊಬೈಲ್‌, ಪರ್ಸ್‌ ಮತ್ತು ಚೀಲವನ್ನು ಕಸಿದುಕೊಂಡರು. ಅವರು ಧರಿಸಿದ್ದ ಟೀ– ಶರ್ಟ್‌ ಮೇಲೆ ಎಸ್ಎಸ್‌ಎಸ್‌ ಪಿ.ಯು ಎಂದು ಬರೆದಿತ್ತು’ ಎಂದೂ ಯುವಕ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಹಲ್ಲೆಗೊಳಗದ ಯುವಕನ ವಿರುದ್ಧ, ಆತ ಮಾತನಾಡಿಸಿದ ಬಾಲಕಿಯ ತಾಯಿಯು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದಾರೆ.

‘ಅಪ್ರಾಪ್ತ ವಯಸ್ಸಿನ ಮಗಳು ಸುಬ್ರಹ್ಮಣ್ಯದ ಪ್ರಯಾಣಿಕರ ತಂಗುದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದಾಗ ಹಫೀದ್‌ ಎಂಬಾತ ಆಕೆಯನ್ನು ಪ್ರೀತಿಸುವಂತೆ ಒತ್ತಡ ಹಾಕಿದ್ದ. ಆಕೆಯ ಮೊಬೈಲ್‌ ಸಂಖ್ಯೆಯನ್ನು ಕೇಳಿದ್ದ. ಅದಕ್ಕೆ ಅವಳು ನಿರಾಕರಿಸಿದ್ದಳು. ಆಗ ಅವಳ ಕೈ ಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿ, ಬೆದರಿಕೆ ಹಾಕಿದ್ದ. ಆತನಿಂದ ತಪ್ಪಿಸಿಕೊಂಡು ಮನೆಗೆ ಬಂದಿದ್ದ ಆಕೆ ವಿಚಲಿತಳಾಗಿದ್ದಳು. ಭಯಗೊಂಡಿದ್ದ ಆಕೆಯನ್ನು ವಿಚಾರಿಸಿದಾಗ ತಡವಾಗಿ ಈ ಬಗ್ಗೆ ಮಾಹಿತಿ ನೀಡಿದ್ದಾಳೆ’ ಎಂದು ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

ಹಫೀದ್ ವಿರುದ್ಧ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT