ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಿಗುಡ್ದದ 34 ಮರಗಳಿಗೆ ಎನ್‌ಜಿಟಿ ಅಭಯ

ಪ್ರತಿವಾದಿ ಪಟ್ಟಿಯಲ್ಲಿರುವ 13 ಪಾರ್ಟಿಗಳ ಪೈಕಿ 12ರ ವಿರುದ್ಧ ಸಿವಿಲ್ ಸ್ಯೂಟ್ ದಾಖಲಿಸಲು ನಿರ್ಧಾರ
Published 21 ಮಾರ್ಚ್ 2024, 15:23 IST
Last Updated 21 ಮಾರ್ಚ್ 2024, 15:23 IST
ಅಕ್ಷರ ಗಾತ್ರ

ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಗಾಗಿ ಬಲಿಕೊಡಲು ಅಧಿಕಾರಿಗಳು ನಿರ್ಧರಿಸಿದ್ದ ನಗರದ ನಂದಿಗುಡ್ಡದಿಂದ ಮಾರ್ನಮಿಕಟ್ಟೆ ವರೆಗಿನ 34 ಮರಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ದಕ್ಷಿಣ ವಲಯದ ನ್ಯಾಯಾಧೀಶರು ಅಭಯ ನೀಡಿದ್ದಾರೆ ಎಂದು ನ್ಯಾಷನಲ್ ಎನ್ವಿರಾನ್ಮೆಂಟ್ ಕೇರ್‌ ಫೆಡರೇಷನ್‌ (ಎನ್‌ಇಸಿಎಫ್‌) ಪ್ರಧಾನ ಕಾರ್ಯದರ್ಶಿ ಶಶಿಧರ್ ಶೆಟ್ಟಿ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಸ್ತೆ ವಿಸ್ತರಣೆ ಮಾಡುವುದಕ್ಕೆಂದು ಮರಗಳನ್ನು ಕಡಿಯಲು ಸ್ಮಾರ್ಟ್ ಸಿಟಿ ಯೋಜನೆ ಅಧಿಕಾರಿಗಳಿಗೆ ಅರಣ್ಯ ಇಲಾಖೆ ಅನುಮತಿ ನೀಡಿತ್ತು. ಇದನ್ನು ಅರಿತ ಎನ್‌ಇಸಿಎಫ್‌ 13 ಮಂದಿಯನ್ನು ಪಾರ್ಟಿ ಮಾಡಿ ನ್ಯಾಯಮಂಡಳಿಗೆ ದೂರು ಸಲ್ಲಿಸಿತ್ತು. ಇದಕ್ಕೆ ಪೂರಕವಾಗಿ ತೀರ್ಪು ಬಂದಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು ನಗರಪಾಲಿಕೆ ಆಯುಕ್ತ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ, ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್‌, ಉಪಜಿಲ್ಲಾಧಿಕಾರಿ, ಮಂಗಳೂರು ನಗರ ಪೊಲೀಸ್ ಆಯುಕ್ತ ಮತ್ತು ಪರಿಸರ ಅಧಿಕಾರಿಯನ್ನು ಪಾರ್ಟಿ ಮಾಡಲಾಗಿತ್ತು. ಈ ಪೈಕಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಾತ್ರ ವಿಚಾರಣೆಗೆ ಹಾಜರಾಗಿದ್ದು ಮರಗಳನ್ನು ಕಡಿಯುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ಶಶಿಧರ್ ಶೆಟ್ಟಿ ತಿಳಿಸಿದರು.

ಮರಗಳನ್ನು ಕಡಿಯಲು ಅವಕಾಶ ನೀಡಬಾರದು ಎಂಬುದು ಅರಣ್ಯ ಇಲಾಖೆ ತಾನಾಗಿಯೇ ನಿರ್ಧರಿಸಬೇಕಾಗಿತ್ತು. ಹಾಗೆ ಮಾಡದ್ದರಿಂದ  ಸಂಘಟನೆಯೊಂದು ಹೋರಾಟಕ್ಕೆ ಇಳಿಯಬೇಕಾಯಿತು. ಅಭಿವೃದ್ಧಿಯ ಹೆಸರಿನಲ್ಲಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ತೆರಿಗೆ ಹಣ ಪೋಲು ಮಾಡಿ ಪರಿಸರ ನಾಶ ಮಾಡುತ್ತಿದ್ದಾರೆ. ಇದನ್ನು ಪ್ರತಿಭಟಿಸಬೇಕಾದ ನಾಗರಿಕರು ಸುಮ್ಮನಿರುವುದು ಬೇಸರದ ವಿಷಯ ಎಂದು ಅವರು ಹೇಳಿದರು.

ವಿಚಾರಣೆಯಿಂದ ದೂರ ಉಳಿದಿರುವ 12 ಮಂದಿ ವಿರುದ್ಧ ಸಿವಿಲ್ ಸ್ಯೂಟ್ ದಾಖಲಿಸಲಾಗುವುದು ಎಂದು ತಿಳಿಸಿದರು.

ನೀರಿಲ್ಲ ಎಂದು ಹೇಳಿದರೆ ಸಾಲದು

ನೀರಿಲ್ಲ ಎಂದು ಬೇಸಿಗೆಯಲ್ಲಿ ಪ್ರತಿನಿತ್ಯ ಗೊಣಗುವವರು ಪ್ರಕೃತಿಯನ್ನು ಉಳಿಸಿ ಆ ಮೂಲಕ ಜಲಮೂಲಗಳನ್ನು ರಕ್ಷಿಸಲು ಏನು ಮಾಡಿದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಈಗ ಲಭ್ಯ ಇರುವ ನೀರಿನಲ್ಲಿ ಶೇಕಡ 2ರಷ್ಟು ಮಾತ್ರ ಕುಡಿಯಲು ಯೋಗ್ಯವಾಗಿದ್ದು ಉಳಿದದ್ದೆಲ್ಲ ಮಲಿನ. ಈ ಬಗ್ಗೆ ಯೋಚನೆ ಮಾಡಬೇಕಾಗಿದೆ. ನಿಮಗಲ್ಲದಿದ್ದರೂ ನಿಮ್ಮ ಮಕ್ಕಳಿಗೋಸ್ಕರವಾದರೂ ಹೋರಾಟ ಮಾಡುವ ಮನೋಭಾವ ಬೆಳೆಸಿಕೊಳ್ಳಿ ಎಂದು ಶಶಿಧರ್ ಶೆಟ್ಟಿ ಕೋರಿದರು.

ನೇತ್ರಾವತಿ ನದಿಗೆ ಮಣ್ಣು ಮತ್ತು ಕಟ್ಟಡದ ತ್ಯಾಜ್ಯ ತುಂಬಿ ಬೊಜ್ಜು ಕರಗಿಸುವ ವ್ಯಾಯಾಮಕ್ಕಾಗಿ ಅಧಿಕಾರಿಗಳು ಮತ್ತು ಆಳುವವರು ಯೋಜನೆ ಜಾರಿಗೊಳಿಸಲು ಮುಂದಾಗಿದ್ದಾರೆ. ಇದಕ್ಕಿಂತ ವೆನ್‌ಲಾಕ್ ಆಸ್ಪತ್ರೆಯನ್ನು ಅಭಿವೃದ್ಧಿ ಮಾಡಿದರೆ ಸಾವಿರಾರು ರೋಗಿಗಳಿಗೆ ನೆರವಾಗಬಹುದು. ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಆಗುವಂತೆ ಮಾಡಿದರೆ ವಿದ್ಯಾರ್ಥಿಗಳಿಗೆ ಅನುಕೂಲ ಆಗಬಹುದು ಎಂದು ಅವರು ಸಲಹೆ ನೀಡಿದರು.

ಅನಿತಾ ಭಂಡಾರ್ಕರ್‌, ನಾರಾಯಣ ಬಂಗೇರ, ಜಾನಸ್‌ ಡಿಸೋಜ, ಹರೀಶ್ ರಾಜಕುಮಾರ್‌, ಬೆನೆಡಿಕ್ಟ್‌ ಫರ್ನಾಂಡಿಸ್‌ ಹಾಗೂ ಆರತಿ ಅಶೋಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT