ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಕಾರಣಕ್ಕೆ ಗೊಂದಲ ಸೃಷ್ಟಿ: ಹರಿಕೃಷ್ಣ ಬಂಟ್ವಾಳ

ನಾರಾಯಣಗುರು ಅಭಿವೃದ್ಧಿ ನಿಗಮ– ಸ್ವಾಗತಿಸಿದ ಬಿಜೆಪಿ ಮುಖಂಡ
Last Updated 22 ಫೆಬ್ರುವರಿ 2023, 15:11 IST
ಅಕ್ಷರ ಗಾತ್ರ

ಮಂಗಳೂರು: ‘ಸರ್ಕಾರ ನಾರಾಯಣಗುರು ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ್ದನ್ನು ಸ್ವಾಗತಿಸುವ ಬದಲು ಕೆಲವರು ರಾಜಕೀಯ ಕಾರಣಕ್ಕೆ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ ಆರೋಪಿಸಿದರು.

ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಲ್ಲವ ಸಮುದಾಯದ ಕೆಲವರು ಈ ನಿಗಮಕ್ಕೆ ಅನುದಾನ ಒದಗಿಸಿಲ್ಲ ಎಂದು ಆರೋಪಿಸಿದ್ದಾರೆ. ನಿಗಮಕ್ಕೆ ₹ 500 ಕೋಟಿ ಮೀಸಲಿಡಬೇಕು ಎಂದು ಒತ್ತಾಯಿಸಿದ್ದಾರೆ. ನಿಗಮವನ್ನು ಸ್ಥಾಪಿಸಿದ ಸರ್ಕಾರಕ್ಕೆ ಅದಕ್ಕೆ, ತಕ್ಕಷ್ಟು ಅನುದಾನವನ್ನು ನೀಡುವುದಕ್ಕೂ ಗೊತ್ತಿದೆ’ ಎಂದರು.

‘ಬೆಂಗಳೂರಿನ ಆರ್ಯ ಈಡಿಗ ಸಂಘದ ಅಧ್ಯಕ್ಷ ತಿಮ್ಮೇಶ್‌, ಬೆಂಗಳೂರಿನ ಬಿಲ್ಲವ ಅಸೋಸಿಯೇಷನ್‌ನ ವೇದಕುಮಾರ್‌, ಅಖಿಲ ಭಾರತ ಬಿಲ್ಲವರ ಸಂಘದ ನವೀನ್‌ ಡಿ.ಸುವರ್ಣ ಪ್ರಯತ್ನದಿಂದಾಗಿ ನಿಗಮ ಸ್ಥಾಪನೆ ಆಗಿದೆ. ಇದರಲ್ಲಿ ಜಿಲ್ಲೆಯ ಬಿಲ್ಲವ ಮುಖಂಡರ ಪಾತ್ರ ಇಲ್ಲ. ಅವರು ಈ ಕುರಿತು ಸರ್ಕಾರಕ್ಕೆ ಒಂದು ಮನವಿಯನ್ನೂ ಕೊಟ್ಟವರಲ್ಲ’ ಎಂದು ತಿಳಿಸಿದರು.

‘ಕಾಂಗ್ರೆಸ್‌ ಟಿಕೆಟ್‌ ಮೇಲೆ ಕಣ್ಣಿಟ್ಟಿರುವ ಪದ್ಮರಾಜ್‌ ಆರ್‌. ಅವರು ನಾರಾಯಣ ಗುರು ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿ ಏಕೆ ನಾರಾಯಣಗುರು ನಿಗಮ ಸ್ಥಾಪನೆ ಮಾಡಿಲ್ಲ’ ಎಂದೂ ಅವರು ಪ್ರಶ್ನಿಸಿದರು.

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಗಣೇಶ್‌ ಸಿ.ಹೊಸಬೆಟ್ಟು, ವಕ್ತಾರ ರಾಧಾಕೃಷ್ಣ, ರಂದೀಪ್ ಕಾಂಚನ್‌, ಮಾಧ್ಯಮ ಸಂಚಾಲಕ ಸಂದೇಶ್‌ ಕುಮಾರ್‌ ಇದ್ದರು.

‘ನಾರಾಯಣಗುರು ಜಾತಿಗೆ ಸೀಮಿತ ಅಲ್ಲ’

‘ಬ್ರಹ್ಮಶ್ರೀ ನಾರಾಯಣಗುರು ಅವರು ನಿರ್ದಿಷ್ಟ ಜಾತಿಗೆ ಸೀಮಿತರಾದವರಲ್ಲ. ಅವರನ್ನು ಜಾತಿಗೆ ಸೀಮಿತಗೊಳಿಸುವುದೂ ಸರಿಯಲ್ಲ. ರಾಜಕೀಯ ಕಾರಣಕ್ಕೆ ಅವರ ಹೆಸರು ದುರ್ಬಳಕೆ ಮಾಡಿಕೊಳ್ಳಬಾರದು. ಈ ರೀತಿ ಮಾಡಿದರೆ, ‘ಬಿಲ್ಲವರ ಬೆಕ್ಕಿನ ಬಿಡಾರ ಬೇರೆಯೇ’ ಎಂದು ಬೇರೆಯವರು ನಗಾಡುವ ಸ್ಥಿತಿ ಉಂಟಾಗುತ್ತದೆ’ ಎಂದು ಹರಿಕೃಷ್ಣ ಬಂಟ್ವಾಳ ಅಭಿಪ್ರಾಯಪಟ್ಟರು.

‘ಸರ್ಕಾರದ ಆದೇಶದಲ್ಲಿ ಈಡಿಗ–ಬಿಲ್ಲವ ಸೇರಿದಂತೆ ಒಟ್ಟು 26 ಜಾತಿಗಳ ಸಮಗ್ರ ಅಭಿವೃದ್ಧಿಗೆ ನಾರಾಯಣಗುರು ನಿಗಮ ಸ್ಥಾಪಿಸಲಾಗಿದೆ’ ಎಂದು ಉಲ್ಲೇಖಿಸಿರುವುದನ್ನೂ ನೀವು ಖಂಡಿಸುತ್ತೀರಾ ಎಂಬ ಪ್ರಶ್ನೆಗೆ, ‘ಈ ಆದೇಶವನ್ನು ಜಾತಿ ಕಣ್ಣಲ್ಲಿ ನೋಡಿದರೆ ಮಾತ್ರ ಜಾತಿ ಕಾಣಿಸುತ್ತದೆ’ ಎಂದರು.

-0-

‘ಜಾತಿ ಪ್ರೀತಿಯ ಸ್ವಾಮೀಜಿ ದೇಶಕ್ಕೆ ಅಪಾಯಕಾರಿ’

‘ಜಾತಿಗಾಗಿ ಕೆಲಸ ಮಾಡುವ ಸ್ವಾಮೀಜಿಗಳು ದೇಶಕ್ಕೆ ಅಪಾಯಕಾರಿ. ಇಂದು ಜಾತಿಯಿಂದಾಗಿ, ಟಿ.ವಿ. ವಾಹಿನಿಗಳಿಂದಾಗಿ, ಆನ್‌ಲೈನ್‌ನಿಂದಾಗ ರೂಪುಗೊಳ್ಳುವ ಸ್ವಾಮೀಜಿಗಳ ಸಂಖ್ಯೆಯೇ ಹೆಚ್ಚುತ್ತಿದ್ದು, ಆಧ್ಯಾತ್ಮಿಕ ಚಿಂತನೆಯಿಂದ ಸ್ವಾಮೀಜಿಯಾಗುವವರು ವಿರಳ. ಯಾವತ್ತೂ ಜಾತಿ ರಾಜಕಾರಣ ಒಳ್ಳೆಯದಲ್ಲ. ನಾನು ಬಿಲ್ಲವ ನಾಯಕ ಅಲ್ಲ. ಬಿಜೆಪಿ ನಾಯಕ. ರಾಷ್ಟ್ರೀಯ ಚಿಂತನೆ ಬೆಳೆಸಿಕೊಳ್ಳುವುದು ಒಳ್ಳೆಯದು’ ಎಂದು ಹರಿಕೃಷ್ಣ ಬಂಟ್ವಾಳ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT