ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೂತನ ಶಿಕ್ಷಣದಿಂದ ನವಭಾರತ ನಿರ್ಮಾಣ’

ಮಂಗಳೂರು ವಿಶ್ವವಿದ್ಯಾಲಯದ 41ನೇ ಸಂಸ್ಥಾಪನಾ ದಿನಾಚರಣೆ
Last Updated 19 ಡಿಸೆಂಬರ್ 2020, 17:04 IST
ಅಕ್ಷರ ಗಾತ್ರ

ಕೊಣಾಜೆ (ಮಂಗಳ ಗಂಗೋತ್ರಿ): ನೂತನ ಶಿಕ್ಷಣ ಪದ್ಧತಿಯಿಂದ ಮಾತ್ರ ನವ ಭಾರತ ನಿರ್ಮಾಣ ಸಾಧ್ಯ. ಹೀಗಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಹೇಳಿದರು.

ಶನಿವಾರ ಆಯೋಜಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ 41ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಆನ್‌ಲೈನ್‌ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ‘ಶಿಕ್ಷಣದಿಂದ ಮಾತ್ರ ವ್ಯಕ್ತಿಯ ಬದುಕಿನಲ್ಲಿ ಪರಿವರ್ತನೆ ಸಾಧ್ಯವಾಗುತ್ತದೆ. ಇಂತಹ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದೆ. ರಾಜ್ಯದಲ್ಲಿ ಇದನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಎಲ್ಲ ಸಿದ್ಧತೆಗಳು ನಡೆಯುತ್ತಿವೆ’ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೈಗಾ ಅಣುಸ್ಥಾವರದ ನಿರ್ದೇಶಕ ಆರ್. ಸತ್ಯನಾರಾಯಣ ಮಾತನಾಡಿ, ‘ವಿಶ್ವವಿದ್ಯಾಲಯಗಳು ಔಪಚಾರಿಕ ಶಿಕ್ಷಣ ನೀಡುವ ಜತೆಗೆ ನಿರಂತರ ಕಲಿಕೆಗೆ ಹೊಸ ಅವಕಾಶವನ್ನು ಒದಗಿಸಬೇಕು. ವಿವಿಗಳು ಜೀವನಪರ್ಯಂತ ಕಲಿಕಾ ಕೇಂದ್ರಗಳಾಗಿ ಪರಿವರ್ತನೆಗೊಳ್ಳಬೇಕು. ಸಮಾಜದ ಆಸಕ್ತರಿಗೆ ಜ್ಞಾನ ನೀಡುವ ವಿಸ್ತರಣಾ ಚಟುವಟಿಕೆಗಳು ನಡೆಯಬೇಕು’ ಎಂದರು.

‘ಇಂದಿನ ಅಗತ್ಯಕ್ಕನುಗುಣವಾಗಿ ಅಲ್ಪಾವಧಿ ಕೋರ್ಸ್‌ಗಳನ್ನು ಹೆಚ್ಚು ಪರಿಚಯಿಸುವ ಜತೆಗೆ, ಉದ್ಯೋಗಕ್ಕೆ ಬೇಕಾದ ಕೌಶಲವನ್ನು ಮಕ್ಕಳಲ್ಲಿ ಬೆಳೆಸುವ ಕಾರ್ಯ ಆಗಬೇಕು. ಕಾರ್ಪೊರೇಟ್ ಕ್ಷೇತ್ರದ ತಜ್ಞರ ಜೊತೆಗೆ ಸಂಪರ್ಕ, ಸಂವಹನದಿಂದ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಅವಕಾಶದ ಬಾಗಿಲುಗಳು ತೆರೆಯುತ್ತವೆ’ ಎಂದರು.

ವಿವಿಯ ಸಿಂಡಿಕೇಟ್ ಸದಸ್ಯ ಪ್ರೊ. ಕರುಣಾಕರ್ ಕೋಟೆಗಾರ್ ಅವರು ತಯಾರಿಸಿದ ‘ರಾಷ್ಟ್ರೀಯ ಶಿಕ್ಷಣ ನೀತಿ–2020’ ವಿಡಿಯೊ ಸರಣಿಯನ್ನು ಲೋಕಾರ್ಪಣೆಗೊಳಿಸಲಾಯಿತು. ಕುಲಸಚಿವ ರಾಜು ಮೊಗವೀರ ಸ್ವಾಗತಿಸಿದರು. ಪ್ರೊ. ರವಿಶಂಕರ ರಾವ್ ಮತ್ತು ಡಾ. ಧನಂಜಯ ಕುಂಬ್ಳೆ ನಿರೂಪಿಸಿದರು. ಹಣಕಾಸು ಅಧಿಕಾರಿ ಪ್ರೊ. ಬಿ. ನಾರಾಯಣ ವಂದಿಸಿದರು.

‘ಫೊರೆನ್ಸಿಕ್ ವಿಜ್ಞಾನ ವಿಷಯ ಪರಿಚಯ’
‘ಮಂಗಳೂರು ವಿಶ್ವವಿದ್ಯಾಲಯದಲ್ಲಿ ಫೊರೆನ್ಸಿಕ್ ವಿಜ್ಞಾನ ವಿಷಯ ಪರಿಚಯಿಸಲು ಯೋಚಿಸಲಾಗಿದೆ. ಈಗಾಗಲೇ ಸೈಬರ್ ವಿಜ್ಞಾನವನ್ನು ಪರಿಚಯಿಸಲಾಗಿದೆ. ಪರಿಸರ ಸ್ನೇಹಿ ಮತ್ತು ಕಾಗದರಹಿತ ಕ್ಯಾಂಪಸ್ ಆಗಿ ರೂಪಿಸಲು ಆದ್ಯತೆ ನೀಡಲಾಗಿದೆ. ವಿಶ್ವವಿದ್ಯಾಲಯದ ನಡೆ ಹಳ್ಳಿಯ ಕಡೆಗೆ ಸಾಗಬೇಕೆಂಬ ದೃಷ್ಟಿಯಿಂದ ಐದು ಹಳ್ಳಿಗಳು ಮತ್ತು 10 ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲಾಗಿದೆ. ಕ್ಯಾಂಪಸ್‌ನಲ್ಲಿ ಹುತಾತ್ಮರ ಚೌಕ ನಿರ್ಮಿಸಲಾಗಿದೆ. ಅರ್ಧಕ್ಕೆ ನಿಂತಿರುವ ಹೊರದೇಶಗಳ ವಿದ್ಯಾರ್ಥಿಗಳ ವಸತಿ ನಿಲಯ ಕಟ್ಟಡ ಕಾಮಗಾರಿಯನ್ನು ಪ್ರಾರಂಭಿಸಿ, ಇದನ್ನು ಪರೀಕ್ಷಾ ಭವನವಾಗಿ ರೂಪಿಸಲಾಗುವುದು. ಬರುವ ಜೂನ್‌ನಲ್ಲಿ ಇದನ್ನು ಉದ್ಘಾಟಿಸಲು ಯೋಚಿಸಲಾಗಿದೆ’ ಎಂದು ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ ಹೇಳಿದರು.

ಮಾಜಿ ಸಚಿವ ದಿವಂಗತ ವಿ.ಎಸ್.ಆಚಾರ್ಯ ಸ್ಟಡಿ ಸೆಂಟರ್ ಫಾರ್ ಕೋಸ್ಟಲ್ ಡೆವಲಪ್‌ಮೆಂಟ್ ರಚಿಸಲು ಯೋಚಿಸಲಾಗಿದೆ. ವಿವಿ ವ್ಯಾಪ್ತಿಯ ಪ್ರತಿ ಜಿಲ್ಲೆಯಲ್ಲಿ ವಿದ್ಯಾರ್ಥಿ ಅದಾಲತ್ ಕಾರ್ಯಕ್ರಮ ರೂಪಿಸಲಾಗುವುದು ಎಂದು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT