ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಕಾಮಗಾರಿಗೆ ಮರುಜೀವ

ರಾಷ್ಟ್ರೀಯ ಹೆದ್ದಾರಿ 75: ಅಡ್ಡಹೊಳೆ-–ಬಿ.ಸಿ. ರೋಡು ಚತುಷ್ಪಥ ರಸ್ತೆ ನಿರ್ಮಾಣ
Last Updated 8 ಜುಲೈ 2021, 3:41 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಿರಾಡಿ ಗ್ರಾಮದ ಅಡ್ಡಹೊಳೆಯಿಂದ ಬಿ.ಸಿ. ರೋಡು ವರೆಗೆ ರಸ್ತೆ ಮೇಲ್ದರ್ಜೆಗೆ ಏರಿಸಿ, ಚತುಷ್ಪಥ ಕಾಂಕ್ರೀಟ್ ರಸ್ತೆಯಾಗಿ ಪರಿವರ್ತಿಸುವ ಕಾಮಗಾರಿ ಮರು ಜೀವ ಪಡೆಯುತ್ತಿರುವ ಲಕ್ಷಣಗಳು ಕಾಣತೊಡಗಿವೆ.

64 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ ಎರಡು ಹಂತಗಳಲ್ಲಿ ಯೋಜನೆ ಸಿದ್ಧಗೊಂಡು, ಕಾಮ ಗಾರಿಯ ಟೆಂಟರ್ ಮುಗಿದಿದೆ.

ಅಡ್ಡಹೊಳೆಯಿಂದ ಪೆರಿಯಶಾಂತಿ ವರೆಗೆ 15 ಕಿ.ಮೀ ರಸ್ತೆಯ ಮೊದಲ ಹಂತದ ಕಾಮಗಾರಿಯ ₹ 317 ಕೋಟಿ ವೆಚ್ಚದ ಯೋಜನೆಯನ್ನು ಪುಣೆಯ ಎಸ್.ಎಂ. ಔತಾಡೆ ಕಂಪನಿ ಗುತ್ತಿಗೆ ಪಡೆದಿದೆ. ಈ ಭಾಗದ ರಸ್ತೆ ಇಕ್ಕೆಲಗಳಲ್ಲಿ ರಕ್ಷಿತಾರಣ್ಯ ಇದೆ. ಇದನ್ನು ವಿಶೇಷ ವಲಯವಾಗಿ ಗುರುತಿಸಿ, ‘ಆನೆ ಕಾರಿಡಾರ್’ ಪ್ರಾಣಿಗಳ ದಾಟು ಸೇತುವೆ ನಿರ್ಮಿಸಲಾಗುತ್ತದೆ.

ಎರಡನೇ ಹಂತದಲ್ಲಿ ಪೆರಿಯಶಾಂತಿಯಿಂದ ಬಿ.ಸಿ. ರೋಡು ತನಕ 49 ಕಿ.ಮೀ. ರಸ್ತೆಯ ಸುಮಾರು ₹1,600 ಕೋಟಿ ವೆಚ್ಚ ಯೋಜನೆಯ ಗುತ್ತಿಗೆಯನ್ನು ಹೈದ್ರಾಬಾದ್‌ನ ಕೆ.ಎನ್.ಆರ್. ಸಂಸ್ಥೆ ಪಡೆದಿದೆ.

ಕಲ್ಲಡ್ಕ ಪೇಟೆಯಲ್ಲಿ ಎರಡೂವರೆ ಕಿ.ಮೀ. ಉದ್ದದ ಮೇಲು ಸೇತುವೆ ನಿರ್ಮಾಣ ಆಗಲಿದೆ. ಉಪ್ಪಿನಂಗಡಿ ಮತ್ತು ನೆಲ್ಯಾಡಿ ಸೇರಿದಂತೆ 10 ಕಡೆಯಲ್ಲಿ ಸರ್ವಿಸ್ ರಸ್ತೆ, ಅಂಡರ್ ಪಾಸ್ ರಸ್ತೆ, ಪೆರಿಯಶಾಂತಿಯಲ್ಲಿ ಧರ್ಮಸ್ಥಳ ಕಡೆಗೆ ಹೋಗುವ ರಸ್ತೆ ತಿರುವಿನಲ್ಲಿ ಓವರ್ ಪಾಸ್ ರಸ್ತೆ ನಿರ್ಮಾಣ ಆಗಲಿದೆ.

ಈ ಹಿಂದೆ ಅಡ್ಡಹೊಳೆಯಿಂದ ಬಿ.ಸಿ. ರೋಡು ತನಕ 64 ಕಿ.ಮೀ. ರಸ್ತೆಗೆ ₹1200 ಕೋಟಿ ಮಂಜೂರು ಆಗಿ ಎಲ್ ಆ್ಯಂಡ್ ಟಿ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. 2017 ಮಾರ್ಚ್‌ 28ರಂದು ಕಾಮಗಾರಿ ಆರಂಭಗೊಂಡು, 30 ತಿಂಗಳ ಅವಧಿಯಲ್ಲಿ 2019 ಸೆಪ್ಟೆಂಬರ್ 23ಕ್ಕೆ ಕಾಮಗಾರಿ ಪೂರ್ಣವಾಗಬೇಕಿತ್ತು. ಆದರೆ ಕಾಮಗಾರಿ ಆಮೆಗತಿಯಲ್ಲಿ ಸಾಗಿ, ನಂತರ ಸಂಪೂರ್ಣ ನಿಲುಗಡೆಯಾಗಿತ್ತು. ಪೆರಿಯಶಾಂತಿಯಲ್ಲಿ ಪ್ರಾಣಿಗಳ ದಾಟು ಸೇತುವೆ ಸಣ್ಣ ಪ್ರಮಾಣದಲ್ಲಿ ಇದ್ದಿದ್ದಕ್ಕೆ ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಸಮಸ್ಯೆಯೂ ಕಾಮಗಾರಿ ನಿಲುಗಡೆಗೆ ಕಾರಣವಾಗಿತ್ತು ಎನ್ನಲಾಗಿದೆ.

ನಾಲ್ಕು ವರ್ಷಗಳ ಹಿಂದೆ ಕಾಮಗಾರಿ ಆರಂಭಗೊಂಡು ಅವೈಜ್ಞಾನಿಕ ರೀತಿಯಲ್ಲಿ ಅಲ್ಲಲ್ಲಿ ಅಗೆದು ಹಾಕಿ, ಬಹಳಷ್ಟು ಅಪಘಾತಗಳಿಗೆ ಕಾರಣವಾಗಿದ್ದ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಶೀಘ್ರ ಆರಂಭವಾಗಿ ಪ್ರಯಾಣಿಕರಿಗೆ ಅನುಕೂಲವಾಗಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ರಸ್ತೆ ನಿರ್ಮಾಣ ಕಾಮಗಾರಿ ಸಂಬಂಧ ಶಿರಾಡಿಯ ಉದನೆಯಲ್ಲಿ ಪ್ಲಾಂಟ್ ನಿರ್ಮಾಣದ ಭಾಗವಾಗಿ ಯಂತ್ರ ಅಳವಡಿಸಲಾಗುತ್ತಿದೆ. ಮಳೆ ಕಡಿಮೆ ಆದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು. ಎಂದು ಎಸ್.ಎಂ. ಔತಾಡೆ ಕಂಪನಿಯ ಯೋಜನಾ ವ್ಯವಸ್ಥಾಪಕ ಮಹೇಶ್ವರ
ರೆಡ್ಡಿ ಪ್ರತಿಕ್ರಿಯಿಸಿದರು.

ಮಾರ್ಗಸೂಚಿಯಂತೆ ಆನೆ ಕಾರಿಡಾರ್

ಈ ಹಿಂದಿನ ಆನೆ ಕಾರಿಡಾರ್ ಸೇತುವೆ ನಿರ್ಮಾಣ ಅವೈಜ್ಞಾನಿಕವಾಗಿತ್ತು. ಹಾಗಾಗಿ ಅರಣ್ಯ ಇಲಾಖೆ ಆಕ್ಷೇಪ ಸಲ್ಲಿಸಿತ್ತು. ಈಗ ಅರಣ್ಯ ಇಲಾಖೆಯ ಪ್ರಸ್ತಾವದಂತೆ ಶಿರಾಡಿ ಗ್ರಾಮದ ಕೊಡ್ಯಕಲ್ಲು ಎಂಬಲ್ಲಿ 75 ಮೀಟರ್ ಅಗಲ ಮತ್ತು 6 ಮೀಟರ್ ಎತ್ತರದ ಆನೆ ಕಾರಿಡಾರ್ ಮತ್ತು ರಸ್ತೆಯ ಇಕ್ಕೆಲದಲ್ಲಿ 500 ಮೀಟರ್ ಆನೆ ಸಂಚಾರ ಪಥ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಮ್ಮತಿಸಿದೆ ಎಂದು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂದನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT