ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಗೆ ಹುಟ್ಟೂರಿನ ಜನರ ಪ್ರೀತಿಯೇ ಪ್ರೇರಣೆ: ಗಾಯಕ ನಿಹಾಲ್

Last Updated 19 ಆಗಸ್ಟ್ 2021, 22:00 IST
ಅಕ್ಷರ ಗಾತ್ರ

ಮೂಡುಬಿದಿರೆ: ‘ನಾವು ಕಲಿಯುವ ಶಾಲೆಗಳಲ್ಲೆ ನಮ್ಮ ಪ್ರತಿಭೆಗಳಿಗೆ ವೇದಿಕೆ ಸಿಗುತ್ತದೆ. ಅದನ್ನು ಬಳಸಿಕೊಳ್ಳಬೇಕು. ನಾನು ಪ್ರಾಥಮಿಕ ತರಗತಿಯಲ್ಲಿ ಓದುತ್ತಿರುವಾಗಲೇ ನನಗೆ ಸಂಗೀತದ ಆಸಕ್ತಿ ಹುಟ್ಟಿತ್ತು. ಅಲ್ಲಿಂದ ಅರಂಭವಾದ ನನ್ನ ಸಂಗೀತ ಪಯಣಕ್ಕೆ ಹುಟ್ಟೂರ ಜನರಿಂದ ಸಿಕ್ಕಿದ ನಿರಂತರ ಪ್ರೋತ್ಸಾಹದಿಂದ ಇಂಡಿಯನ್ ಐಡಲ್ ಸೀಸನ್ 12ರ ಟಾಪ್ 5 ಗಾಯಕನಾಗಿ ಮೂಡಿಬರಲು ಸಾಧ್ಯವಾಯಿತು’ ಎಂದು ಯುವ ಗಾಯಕ ನಿಹಾಲ್ ತಾವ್ರೊ ಹೇಳಿದರು.

ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಗುರುವಾರ ಸಾರ್ವಜನಿಕ ಸನ್ಮಾನ ಸ್ವೀಕರಿಸಿ ಮಾತನಾಡಿದರು. ‘ಸ್ಪರ್ಧೆ ನಡೆಯುತ್ತಿರುವಾ ನನಗೆ ಇಷ್ಟೊಂದು ಜನ ಬೆಂಬಲ ನೀಡಿದ್ದಾರೆ ಎಂದು ಕೇಳಿದಾಗ ಆಶ್ಚರ್ಯವಾಯಿತು. ಇಂಡಿಯನ್ ಐಡಲ್‌ನಲ್ಲಿ ನಾನು ಫೈನಲ್ ಪ್ರವೇಶಿಸಿ ಇಷ್ಟು ದೊಡ್ಡ ಸಾಧನೆ ಮಾಡಿದ್ದರೆ ನನ್ನ ಹುಟ್ಟೂರಿನ ಜನರ ಪ್ರೀತಿಯೇ ಪ್ರೇರಣೆ. ಮುಂದಿನ ದಿನಗಳಲ್ಲಿ ಈ ಸ್ಪರ್ಧೆಗೆ ಕರ್ನಾಟಕದಿಂದ ಇನ್ನಷ್ಟು ಗಾಯಕರು ಸೇರ್ಪಡೆಯಾಗಬೇಕೆಂಬುದು ನನ್ನ ಆಸೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ‘ನಿಹಾಲ್ ತಾವ್ರೊ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ. ಈತನ ಪ್ರತಿಭೆಯನ್ನು ನೋಡುವಾಗ ರಾಷ್ಟ್ರದ ಪ್ರಸಿದ್ಧ ಗಾಯಕ ಅರಿಜೀತ್‌ ಸಿಂಗ್‌ನ ತದ್ರೂಪಿಯಂತೆ ಭಾಸವಾಗುತ್ತಿದೆ. ಸಂಗೀತ ಪ್ರೇಮಿಗಳೆಲ್ಲ ಕೊಂಡಾಡುವ ರೀತಿಯಲ್ಲಿ ಪ್ರದರ್ಶನ ನೀಡಿದ್ದಾರೆ. ಮೂಡುಬಿದಿರೆಯ ಹೆಸರನ್ನು ರಾಷ್ಟ್ರದ ಎತ್ತರಕ್ಕೇರಿಸಿದ್ದಾರೆ’ ಎಂದು ಮೋಹನ ಅಳ್ವ ಹೇಳಿದರು.

ಮೂಡುಬಿದಿರೆಯ 51 ಸಂಘ ಸಂಸ್ಥೆಗಳು ನಿಹಾಲ್‌ ಅವರನ್ನು ಸನ್ಮಾನಿಸಿದವು. ಮಾಜಿ ಸಚಿವ ಅಭಯಚಂದ್ರ ಜೈನ್‌, ಮೂಡುಬಿದಿರೆ ಚರ್ಚ್‌ ಧರ್ಮಗುರು ಪೌಲ್ ಸಿಕ್ವೇರಾ, ಅಲಂಗಾರು ಚರ್ಚ್‌ ಧರ್ಮಗುರು ವಾಲ್ಟರ್ ಡಿಸೋಜ, ಕ್ರೈಸ್ತ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜೋಯ್ಲಸ್ ಡಿಸೋಜ, ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಪ್ರಮುಖರಾದ ನಾರಾಯಣ ಪಿ.ಎಂ., ಶ್ರೀಪತಿ ಭಟ್, ವಲೇರಿಯನ್ ಸಿಕ್ವೇರಾ, ಅಬುಲ್ ಅಲಾ, ಸಚಿನ್ ಫರ್ನಾಂಡಿಸ್, ಚೌಟರ ಅರಮನೆಯ ಕುಲದೀಪ್ ಎಂ., ನಿಹಾಲ್ ತಾವ್ರೊ ಅವರ ತಂದೆ ಹೆರಾಲ್ಡ್ ತಾವ್ರೊ, ತಾಯಿ ಪ್ರೆಸಿಲ್ಲಾ ಉಪಸ್ಥಿತರಿದ್ದರು. ಗಣೇಶ್ ಕಾಮತ್ ನಿರೂಪಿಸಿದರು.

ಹಾಡಿ ರಂಜಿಸಿದ ತಾವ್ರೊ: ಸಭಿಕರ ಕೋರಿಕೆ ಮೇರೆಗೆ ‘ತೂ ಮೇರಾ ದಿಲ್, ತೂ ಮೇರಿ ಜಾನ್’ ಹಿಂದಿ ಹಾಡು, ‘ಒಂದು ಮಳೆ ಬಿಲ್ಲು ಒಂದು ಮಳೆ ಮೋಡ’ ಕನ್ನಡ ಹಾಡು ಹಾಗೂ ‘ಮೋಕೆದ ಸಿಂಗಾರಿ’ ಎಂಬ ಪ್ರಸಿದ್ಧ ತುಳು ಹಾಡನ್ನು ಹಾಡಿ ಸಭಿಕರನ್ನು ರಂಜಿಸಿದರು.

‘ಫೈನಲ್‌ನಲ್ಲಿದ್ದ ಗಾಯಕರನ್ನು ಕರೆತರುವೆ’

‘ಇಂಡಿಯನ್ ಐಡಲ್ ಸೀಸನ್ 12ರಲ್ಲಿ ಫೈನಲ್ ಪ್ರವೇಶಿಸಿದ ಆರು ಮಂದಿ ಗಾಯಕರ ತಂಡದ ಕಾರ್ಯಕ್ರಮವನ್ನು ಮೂಡುಬಿದಿರೆಯಲ್ಲಿ ಅದ್ದೂರಿಯಾಗಿ ನಡೆಸಬೇಕೆಂದು ಬಯಸಿದ್ದೇನೆ. ಇದಕ್ಕೆ ನಿಮ್ಮ ಸಹಕಾರ ಬೇಕು’ ಎಂದು ನಿಹಾಲ್ ತಾವ್ರೊ ಹೇಳಿದರು.

‘ಇಂಡಿಯನ್ ಐಡಲ್‌ನ ಫೈನಲ್‌ನಲ್ಲಿ ಪ್ರದರ್ಶನ ನೀಡಿದ್ದ ಎಲ್ಲಾ ಆರು ಮಂದಿ ಗಾಯಕರ ಪ್ರದರ್ಶನಕ್ಕೆ ಮೂಡುಬಿದಿರೆಯಲ್ಲಿ ನಾನು ವೇದಿಕೆ ಕಲ್ಪಿಸಲಿದ್ದೇನೆ. ಅವರೆಲ್ಲರನ್ನು ಕರೆತರುವ ಜವಾಬ್ದಾರಿ ನಿಹಾಲ್ ವಹಿಸಿಕೊಳ್ಳಬೇಕು’ ಎಂದು ಮೋಹನ ಅಳ್ವ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT