ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಹರೂ ಯುವಕೇಂದ್ರ: ಯೋಜನೆಗಳ ‘ಭಾರ’

ಸಾಲು ಸಾಲು ಕಾರ್ಯಕ್ರಮಗಳು; ಜಿಲ್ಲಾ ಯುವ ಅಧಿಕಾರಿ ನೇಮಕಾತಿ ಪ್ರಕ್ರಿಯೆಗಾಗಿ ಕಾಯುತ್ತಿರುವ ರಾಜ್ಯ
Published 23 ಜುಲೈ 2023, 19:30 IST
Last Updated 23 ಜುಲೈ 2023, 19:30 IST
ಅಕ್ಷರ ಗಾತ್ರ

ಮಂಗಳೂರು: ಯುವಜನರ ಸಶಕ್ತೀಕರಣದ ಮೂಲಕ ದೇಶದ ಅಭಿವೃದ್ಧಿಯ ಆಶಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ನೆಹರೂ ಯುವ ಕೇಂದ್ರ ಸಂಘಟನೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕೊರತೆಯಿಂದಾಗಿ ಯೋಜನೆಗಳೇ ‘ಭಾರ’ವಾಗಿ ಪರಿಣಮಿಸಿವೆ. ಕಟ್ಟಡ ಸೇರಿದಂತೆ ಮೂಲಸೌಲಭ್ಯಗಳು ಇಲ್ಲದಿರುವುದು ಕೂಡ ಸಂಘಟನೆಯ ಕಾರ್ಯಚಟುವಟಿಕೆ ಮೇಲೆ ಪರಿಣಾಮ ಬೀರಿದೆ.

ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯದ ಅಧೀನದ ಸಂಘಟನೆ, ಯುವಜನರಿಗಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಯಲ್ಲಿ ವಿವಿಧ ಇಲಾಖೆಗಳ ಯೋಜನೆಗಳಲ್ಲೂ ಪಾಲ್ಗೊಳ್ಳುತ್ತದೆ. ಕ್ರೀಡಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಸಂಘಟನೆಯ ಭಾಗವಾಗಿ ಟ್ರೆಕಿಂಗ್‌, ಯುವ ಸಪ್ತಾಹ, ಯುವ ಉತ್ಸವ, ಗ್ರಾಮೀಣ ಯುವಜನರಿಗೆ ಸ್ವಾವಲಂಬನೆ ತರಬೇತಿ ಮುಂತಾದವುಗಳನ್ನು ಆಯೋಜಿಸುತ್ತಿದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ನೆರವು ನೀಡುವುದು, ಕೋವಿಡ್‌ನಂಥ ಮಹಾಮಾರಿ ಬಂದಾಗ ಜಾಗೃತಿ ಮೂಡಿಸುವುದು, ಸಂವಿಧಾನದ ಅರಿವು ನೀಡುವುದು, ಪೋಷಣ್ ಅಭಿಯಾನದ ಅನುಷ್ಠಾನ, ಮಳೆ ನೀರು ಸಂಗ್ರಹ, ಯೋಗ ದಿನಾಚರಣೆ ಮುಂತಾದವು ಕೂಡ ಇದರಲ್ಲಿ ಸೇರುತ್ತವೆ.

ಇಷ್ಟೆಲ್ಲ ಕಾರ್ಯಕ್ರಮಗಳನ್ನು ಆಯೋಜಿಸಲು ಕಾರ್ಯಕರ್ತರ ಜೊತೆಯಲ್ಲಿ ಪ್ರತಿ ಕಚೇರಿಗೆ ಯುವ ಅಧಿಕಾರಿ, ಲೆಕ್ಕಪತ್ರ ಮತ್ತು ಕಾರ್ಯಕ್ರಮ ಮೇಲುಸ್ತುವಾರಿ (ಎಪಿಎಸ್‌) ಮತ್ತು ಕಚೇರಿ ಸಹಾಯಕರು (ಎಎ) ಇರಬೇಕು. ಪ್ರತಿ ಬ್ಲಾಕ್‌ಗೆ ತಲಾ ಇಬ್ಬರಂತೆ ರಾಷ್ಟ್ರೀಯ ಯುವ ಸ್ವಯಂಸೇವಕರು ಇರಬೇಕು. ಆದರೆ ಬಹುತೇಕ ಕಚೇರಿಗಳಲ್ಲಿ ಇಷ್ಟು ಉದ್ಯೋಗಿಗಳು ಇಲ್ಲ ಎಂಬ ದೂರು ಇದೆ. ಕರ್ನಾಟಕದ 31 ಜಿಲ್ಲೆಗಳ ಪೈಕಿ 14ರಲ್ಲಿ ಮಾತ್ರ ಯುವ ಅಧಿಕಾರಿ ಇದ್ದಾರೆ. ಹೀಗಾಗಿ ಕೆಲವರಿಗೆ ಮೂರು ಅಥವಾ ನಾಲ್ಕು ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಅಧಿಕಾರಿ ಯಶವಂತ ಯಾದವ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿಯೂ ಆಗಿದ್ದಾರೆ. ಸ್ವಂತ ಕಟ್ಟಡ ಇಲ್ಲದ ಸಂಘಟನೆಯ ಮಂಗಳೂರು ಕಚೇರಿಗೆ ಆಡಳಿತಾಧಿಕಾರಿ ಜಗದೀಶ್ ಒಬ್ಬರೇ ಎಲ್ಲವೂ ಆಗಿದ್ದಾರೆ. 

1972ರಲ್ಲಿ ಆರಂಭಗೊಂಡ ನೆಹರೂ ಯುವ ಕೇಂದ್ರ 1987ರಲ್ಲಿ ನೆಹರೂ ಯುವ ಕೇಂದ್ರ ಸಂಘಟನ್ (ಎನ್‌ವೈಕೆಎಸ್‌) ಎಂಬ ಸ್ವಾಯತ್ತ ಸಂಸ್ಥೆಯಾಯಿತು. ಎನ್‌ವೈಕೆಎಸ್‌ನ ಎಲ್ಲ ಉದ್ಯೋಗಿಗಳ ನೇಮಕ ಮತ್ತು ವೇತನ ನೀಡಿಕೆ, ಕೇಂದ್ರ ಸರ್ಕಾರದ ಮೂಲಕವೇ ನಡೆಯುತ್ತದೆ. ಪ್ರತಿ ರಾಜ್ಯ ಘಟಕಕ್ಕೆ ಕ್ರೀಡಾ ಸಚಿವರು ಅಧ್ಯಕ್ಷರಾಗಿರುತ್ತಾರೆ.

ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ನೆಹರು ಯುವ ಕೇಂದ್ರದ ಕಚೇರಿ
ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ನೆಹರು ಯುವ ಕೇಂದ್ರದ ಕಚೇರಿ

ಸಂಸದರು, ವಿಧಾನ ಸಭೆ ಸದಸ್ಯರು ಅಥವಾ ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಇಬ್ಬರು ಉಪಾಧ್ಯಕ್ಷರು ಇರುತ್ತಾರೆ. ವಿವಿಧ ಇಲಾಖೆಯ 40ಕ್ಕೂ ಹೆಚ್ಚು ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ಆದರೂ ನೇಮಕಾತಿ ವಿಷಯದಲ್ಲಿ ಈ ‘ಶಕ್ತಿ’ ಪ್ರಯೋಜನಕ್ಕೆ ಬಂದಿಲ್ಲ ಎಂದು ಕೆಲವು ಜಿಲ್ಲೆಗಳ ಯುವ ಅಧಿಕಾರಿಗಳು ದೂರಿದ್ದಾರೆ.

‘ಸಂಘಟನೆಗೆ ಯುಪಿಎಸ್‌ಸಿ ನೇಮಕಾತಿ ನಡೆಸುತ್ತದೆ. ಕೋವಿಡ್–19ಕ್ಕೂ ಮೊದಲು 460 ಜಿಲ್ಲಾ ಯುವ ಅಧಿಕಾರಿಗಳ ನೇಮಕಾತಿ ಆಗಿತ್ತು. 200 ಅಧಿಕಾರಿಗಳ ನೇಮಕಾತಿಗೆ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಕಾಣುತ್ತಿದೆ. ಇದು ಪೂರ್ಣಗೊಂಡರೆ ಕರ್ನಾಟಕದ ಎಲ್ಲ ಜಿಲ್ಲೆಗಳಿಗೂ ಅಧಿಕಾರಿಗಳು ಸಿಗುವ ನಿರೀಕ್ಷೆ ಇದೆ’ ಎಂದು ಎನ್‌ವೈಕೆಎಸ್‌ ಬೆಂಗಳೂರು ಪ್ರಾದೇಶಿಕ ಕಚೇರಿಯ ನಿರ್ದೇಶಕ ಎಂ.ಎನ್.ನಟರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ಯೋಧರಿಗೆ ಅಭಿನಂದನೆ– ಭೂತಾಯಿಗೆ ನಮನ: ದೇಶದ ಯೋಧರ ತ್ಯಾಗವನ್ನು ನೆನಪಿಸಿಕೊಳ್ಳುವ ‘ಪಂಚ ಪ್ರಾಣ್‌’ ಎಂಬ ಹೊಸ ಯೋಜನೆ ಇದೀಗ ಎನ್‌ವೈಕೆಎಸ್‌ ಹೆಗಲಿಗೆ ಬಿದ್ದಿದೆ. ಯೋಧರಿಗೆ ಅಭಿನಂದನೆ; ಭೂತಾಯಿಗೆ ನಮನ ಎಂಬ ಹೆಸರಿನ ಈ ಕಾರ್ಯಕ್ರಮ ಆಗಸ್ಟ್ 9ರಂದು ಆರಂಭಗೊಳ್ಳಲಿದೆ. ದೇಶದ ಎಲ್ಲ ಜಿಲ್ಲೆಗಳ ಗ್ರಾಮ ಪಂಚಾಯಿತಿಗಳಲ್ಲಿ ಏಕಕಾಲದಲ್ಲಿ ನಡೆಯುವ ಕಾರ್ಯಕ್ರಮದಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 75 ಗಿಡಗಳನ್ನು ನೆಡಲಾಗುವುದು. ಯೋಧರು ಮತ್ತು ಸ್ವಾತಂತ್ರ್ಯ ಯೋಧರಿಗೆ ಸನ್ಮಾನ ನಡೆಯಲಿದೆ. ದೆಹಲಿಯಲ್ಲಿ ನಡೆಯಲಿರುವ ದೇಶದ ವೈವಿಧ್ಯ ಬಿಂಬಿಸುವ ಪೋಷಾಕು ಪೆರೇಡ್‌ನಲ್ಲಿ ಪಾಲ್ಗೊಳ್ಳಲು ಪ್ರತಿ ಬ್ಲಾಕ್‌ನಿಂದ ಒಬ್ಬ ಯುವ ಪ್ರತಿನಿಧಿಯನ್ನು ಆರಿಸಿ ಕಳುಹಿಸಲಾಗುವುದು ಎಂದು ಎಂ.ಎನ್. ನಟರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT