ಶನಿವಾರ, ಜೂನ್ 25, 2022
26 °C

ಆನ್‌ಲೈನ್‌ ಕ್ಯಾಂಪಸ್‌ ಸಂದರ್ಶನ: ವಿದ್ಯಾರ್ಥಿಗೆ ₹51 ಲಕ್ಷ ಪ್ಯಾಕೇಜ್‌ನ ಉದ್ಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಆನ್‌ಲೈನ್‌ ತರಗತಿ ಹಾಗೂ ಪರೀಕ್ಷೆಗಳನ್ನು ನಡೆಸಿದ ಇಲ್ಲಿನ ಎನ್‌ಐಟಿಕೆ, ಇದೀಗ ಆನ್‌ಲೈನ್‌ ಕ್ಯಾಂಪಸ್‌ ಸಂದರ್ಶನ ಕಾರ್ಯಕ್ರಮ ವನ್ನು ಆರಂಭಿಸಿದೆ. ಶೇ 85 ರಷ್ಟು ಪದವಿ ಹಾಗೂ ಶೇ 57 ರಷ್ಟು ಸ್ನಾತಕೋತ್ತರ ಪದವೀಧರರು ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಾರಿಯ ಕ್ಯಾಂಪಸ್‌ ಸಂದರ್ಶನದಲ್ಲಿ ಇಲ್ಲಿನ ವಿದ್ಯಾರ್ಥಿಯೊಬ್ಬರಿಗೆ ವಾರ್ಷಿಕ ₹51.5 ಲಕ್ಷ ವೇತನದ ಪ್ಯಾಕೇಜ್‌ ನೀಡಲಾಗಿದ್ದು, ಇದು ಗರಿಷ್ಠವಾಗಿದೆ. ಈ ಬಾರಿ ನಡೆದ ಕ್ಯಾಂಪಸ್‌ ಸಂದರ್ಶನದಲ್ಲಿ ವಾರ್ಷಿಕ ವೇತನ ಸರಾಸರಿ ₹10 ಲಕ್ಷದಿಂದ ₹11 ಲಕ್ಷಕ್ಕೆ ಏರಿದೆ.

ಇನ್ನೊಂದು ವಿಶೇಷವೆಂದರೆ ಲಾಕ್‌ಡೌನ್‌ ಸಂದರ್ಭದಲ್ಲೂ ಈ ಬಾರಿ ಹೆಚ್ಚಿನ ಕಂಪನಿಗಳು ಕ್ಯಾಂಪಸ್‌ ಸಂದರ್ಭದಲ್ಲಿ ಭಾಗವಹಿಸಿವೆ. ಈಗಾಗಲೇ 269 ಕಂಪನಿಗಳು ಪಾಲ್ಗೊಂಡಿದ್ದು, ಜೂನ್‌ ಅಂತ್ಯದವರೆಗೆ ನಡೆಯುವ ಸಂದರ್ಶನದಲ್ಲಿ ಇನ್ನೂ 15 ಕಂಪನಿಗಳು ಭಾಗವಹಿಸುವ ನಿರೀಕ್ಷೆ ಇದೆ. ಕಳೆದ ವರ್ಷ 256 ಕಂಪನಿಗಳು ಪಾಲ್ಗೊಂಡಿದ್ದವು.

ಎನ್‌ಐಟಿಕೆಯಲ್ಲಿ 800 ಪದವಿ ವಿದ್ಯಾರ್ಥಿಗಳಿದ್ದು, ಈ ಪೈಕಿ 666 ವಿದ್ಯಾರ್ಥಿಗಳು ಕ್ಯಾಂಪಸ್‌ ಸಂದರ್ಶನಕ್ಕೆ ಅರ್ಹರಾಗಿದ್ದಾರೆ. ಅದರಲ್ಲಿ 566 ಮಂದಿಗೆ ನೇಮಕಾತಿ ಆಫರ್‌ ನೀಡಲಾಗಿದೆ. ಸ್ನಾತಕೋತ್ತರ ಪದವಿಯಲ್ಲಿ 600 ವಿದ್ಯಾರ್ಥಿಗಳಿದ್ದು, 541 ಮಂದಿ ಕ್ಯಾಂಪಸ್‌ ಸಂದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ಈ ಪೈಕಿ ಇದುವರೆಗೆ 339 ಮಂದಿಗೆ ನೇಮಕಾತಿ ಆದೇಶ ನೀಡಲಾಗಿದೆ.

‘ಇನ್ನೂ 30 ಕ್ಕೂ ಅಧಿಕ ಬಿ.ಟೆಕ್‌ ಹಾಗೂ ಎಂ.ಟೆಕ್‌ ವಿದ್ಯಾರ್ಥಿ ಗಳಿಗೆ ಉದ್ಯೋಗ ಸಿಗುವ ನಿರೀಕ್ಷೆ ಇದೆ. ಕ್ಯಾಂಪಸ್‌ ಸಂದರ್ಶನ ಈ ತಿಂಗಳಾಂತ್ಯ ದವರೆಗೆ ನಡೆಯಲಿದ್ದು, ಇಸ್ರೊ, ಬಿಇಎಲ್‌, ಬಿಇಎಲ್‌–ಸಿಆರ್‌ಎಲ್‌, ಗೇಲ್‌ನಂತಹ ಕಂಪನಿಗಳಲ್ಲಿ ಬಹಳಷ್ಟು ವಿದ್ಯಾರ್ಥಿಗಳಿಗೆ ಅವಕಾಶ ದೊರೆತಿದೆ’ ಎಂದು ಎನ್‌ಐಟಿಕೆ ಕರಿಯರ್‌ ಡೆವಲಪಮೆಂಟ್‌ ಸೆಂಟರ್‌ನ ಅಧ್ಯಕ್ಷ ವಿಜಯ ದೇಸಾಯಿ ತಿಳಿಸಿದ್ದಾರೆ.

ಐಟಿ ವಿದ್ಯಾರ್ಥಿಗಳಿಗೆ ಬೇಡಿಕೆ: ಎನ್‌ಐಟಿಕೆಯ ಕಂಪ್ಯೂಟರ್ ಸೈನ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ ವಿಭಾಗದ ಪ್ರತಿಯೊಬ್ಬ ವಿದ್ಯಾರ್ಥಿ ನೇಮಕಾತಿ ಆದೇಶ ಪಡೆಯುತ್ತಿದ್ದಾರೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಶೇ 100 ಹಾಗೂ ಮಾಹಿತಿ ತಂತ್ರಜ್ಞಾನದಲ್ಲಿ ಶೇ 98 ರಷ್ಟು ನೇಮಕಾತಿ ಆಗುತ್ತಿದೆ.

ಬಿ.ಟೆಕ್‌ನ ಶೇ 70 ರಷ್ಟು ವಿದ್ಯಾ ರ್ಥಿಗಳು ಉದ್ಯೋಗಾವಕಾಶ ಪಡೆದಿ ದ್ದಾರೆ. ಬಿ.ಟೆಕ್‌ನ ಅಂತಿಮ ವರ್ಷದ 80 ವಿದ್ಯಾರ್ಥಿಗಳು ಕ್ಯಾಂಪಸ್‌ ಸಂದರ್ಶನ ದಿಂದ ದೂರ ಉಳಿದಿದ್ದು, ಉನ್ನತ ಶಿಕ್ಷಣಕ್ಕಾಗಿ ಪ್ರವೇಶ ಪಡೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು