ಸೋಮವಾರ, ಜನವರಿ 20, 2020
20 °C
ಎನ್‍ಐಟಿಕೆಯ ಕರಾವಳಿ ಮ್ಯಾರಥಾನ್‍ನ 5 ಆವೃತ್ತಿಗೆ ಚಾಲನೆ ನೀಡಿದ ಅರ್ಜುನ್ ದೇವಯ್ಯ

ಆರೋಗ್ಯವಂತ ಯುವಜನತೆ ದೇಶದ ಸಂಪತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರತ್ಕಲ್: ದೇಶದ ಜನಸಂಖ್ಯೆಯ ಶೇ 60 ರಷ್ಟು ಯುವಜನ ಸಮುದಾಯವನ್ನು ಹೊಂದಿದ್ದು, ಭಾರತವು ಪ್ರಪಂಚದಲ್ಲಿಯೇ ಅತೀ ಹೆಚ್ಚಿನ ಪ್ರಮಾಣದಲ್ಲಿ ಯವ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ ಎಂದು ಅಂತರ ರಾಷ್ಟ್ರೀಯ ಕ್ರೀಡಾಪಟು ಅರ್ಜುನ್ ದೇವಯ್ಯ ಹೇಳಿದರು.

ಇಲ್ಲಿನ ಎನ್‍ಐಟಿಕೆಯ ಹಳೆ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಭಾನುವಾರ ಕರಾವಳಿ ಮ್ಯಾರಥಾನ್‍ನ ಐದನೇ ಆವೃತ್ತಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಇಂದಿನ ಯುವ ಸಮುದಾಯ ಜ್ಞಾನ ಸಂಪಾದನೆಯ ಜತೆಗೆ ತಮ್ಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಂಡಾಗ ನಮ್ಮ ದೇಶವು ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆರೋಗ್ಯವಂತ ಯುವಜನತೆ ನಮ್ಮ ದೇಶದ ಸಂಪತ್ತು’ ಎಂದು ಅಭಿಪ್ರಾಯಪಟ್ಟರು.

ಇಂದಿನ ಯುವಜನತೆ ಆಧುನಿಕ ಜೀವನಶೈಲಿಗಳಿಂದ ತಮ್ಮ ನಿಜವಾದ ವಯಸ್ಸಿಗಿಂತ 10 ರಿಂದ 12 ವರ್ಷ ಹಿರಿಯರಂತೆ ಕಾಣುತ್ತಿರುವುದು ದುರದೃಷ್ಟಕರ. ಯವಜನತೆ ಜ್ಞಾನಾರ್ಜನೆಯ ಜತೆಗೆ ತಮ್ಮ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.

ರಾಷ್ಟ್ರೀಯ ಯುವ ದಿನಾಚರಣೆಯಂದು ಜರುಗಿದ ಮ್ಯಾರಥಾನ್‍ನಲ್ಲಿ ಸ್ವಾಮಿ ವಿವೇಕಾನಂದರ ಮಾತುಗಳನ್ನು ನೆನಪಿಸಿದ ಅರ್ಜುನ್ ದೇವಯ್ಯ, ‘ವಿವೇಕಾನಂದರು ಹೇಳಿದಂತೆ ಒಂದು ಗಂಟೆ ಭಗವದ್ಗೀತೆ ಓದುವ ಬದಲು, 45 ನಿಮಿಷ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಉಕ್ಕನಂತೆ ಸದೃಢವಾದ ದೇಹ ನಮ್ಮದಾಗಲಿದೆ. ಇದು ನಮ್ಮ ಇಂದಿನ ದೇಶದ ಅವಶ್ಯಕತೆಯೂ ಕೂಡ ಹೌದು. ಯುವಜನರು ಈ ಗುರಿಯನ್ನು ತಲುಪಲು ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.

ಸವರ್ಣದೀರ್ಘ ಸಂಧಿ ಖ್ಯಾತಿಯ ಚಲನಚಿತ್ರ ನಟಿ ಕೃಷ್ಣ ಭಟ್ ಮಾತನಾಡಿ, ‘ಇಂದಿನ ಮ್ಯಾರಥಾನ್ ಜಾಗತಿಕ ಹವಾಮಾನ ಬದಲಾವಣೆಯ ವಿರುದ್ಧ ಹೋರಾಟ ಎಂಬ ಧ್ಯೇಯವಾಕ್ಯದೊಂದಿಗೆ ನಡೆದಿರುವುದು ನಿಜಕ್ಕೂ ಅರ್ಥಪೂರ್ಣವಾದುದು. ಹವಾಮಾನ ಬದಲಾವಣೆಗಳಿಂದ ನಾವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ನಮ್ಮ ಕಣ್ಣ ಮುಂದೆಯೇ ಕಾಣಬಹುದಾಗಿದೆ. ಇವೆಲ್ಲ ಸಮಸ್ಯೆಗಳಿಗೆ ಸದೃಢ ಆರೋಗ್ಯವಂತ ಯುವಜನತೆ ಪರಿಹಾರ ನೀಡಬಲ್ಲರು. ಈ ಆರೋಗ್ಯವಂತ ಯುವಸಮುದಾಯದ ಸೃಷ್ಟಿಗೆ ಕ್ರೀಡೆ ಸಹಕರಿಸುತ್ತದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಎನ್‍ಐಟಿಕೆ ನಿರ್ದೇಶಕ ಪ್ರೊ.ಕೆ.ಉಮಾಮಹೇಶ್ವರ ರಾವ್ ಮಾತನಾಡಿ, ಜಾಗತಿಕ ತಾಪಮಾನದ ವಿರುದ್ಧ ಹೋರಾಟ ಎನ್ನುವುದು ಯವಜನತೆಗೆ ತಲುಪಿಸಬೇಕಾದ ಸಂದೇಶವಾಗಿದ್ದು, ಎನ್‍ಐಟಿಕೆ ಅದನ್ನು ಕ್ರೀಡೆಯ ಮೂಲಕ ತಲುಪಿಸಲು ಪ್ರಯತ್ನಪಟ್ಟಿದೆ ಎಂದರು.

ಜಾಗತಿಕ ತಾಪಮಾನದ ಸಮಸ್ಯೆ ಎಲ್ಲಿಯವರೆಗೆ ವೈಯುಕ್ತಿಕವಾಗಿ ತಟ್ಟುವುದಿಲ್ಲವೋ, ಅಲ್ಲಿಯವರೆಗೆ ಯಾರೂ ಅದರ ಕುರಿತಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಎಲ್ಲಿಯವರೆಗೆ ವೈಯುಕ್ತಿಕವಾಗಿ ನಮಗೆ ದೈಹಿಕ ಸಮಸ್ಯೆಗಳು ಬಂದೆರಗುವುದಿಲ್ಲವೋ, ಅಲ್ಲಿಯವರೆಗೆ ನಾವು ಆರೋಗ್ಯದ ಕಡೆ ಗಮನಹರಿಸುವುದಿಲ್ಲ. ಅದರ ಬದಲಾಗಿ ನಾವು ಇಂದಿನಿಂದಲೇ ಸದೃಢವಾಗಿದ್ದು, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯ ಎಂದು ಹೇಳಿದರು.

ಎನ್‍ಐಟಿಕೆ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ.ಕೆ.ಬಲವೀರ ರೆಡ್ಡಿ, ಎನ್‍ಐಟಿಕೆ ಹಳೆವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ವಿದ್ಯಾಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಕ್ರೀಡಾಪಟುಗಳು ಭಾಗವಹಿಸಿದ್ದರು. ಹಳೆವಿದ್ಯಾರ್ಥಿ ನಿರಂಜನ್ ಮಹಾಬಲಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್‍ಐಟಿಕೆ ಹಳೆ ವಿದ್ಯಾರ್ಥಿ ಸಂಘದ ಜಾಗತಿಕ ಅಧ್ಯಕ್ಷ ಬಿ.ಕೆ.ಕೃಷ್ಣಮೂರ್ತಿ ಸ್ವಾಗತಿಸಿದರು. ಮ್ಯಾರಥಾನ್ ನಿರ್ದೇಶಕ ಕಾರ್ತಿಕ್ ಪಿಳೈ ವಂದಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು