ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ನಡುವೆಯೂ ಎನ್‌ಎಂಪಿಟಿ ಸಾಧನೆ

ಮೊದಲ ತ್ರೈಮಾಸಿಕದಲ್ಲಿ 3 ಲಕ್ಷ ಟನ್‌ ಹೆಚ್ಚುವರಿ ಸರಕು ಸಾಗಣೆ
Last Updated 30 ಜುಲೈ 2020, 16:36 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್–19 ಲಾಕ್‌ಡೌನ್‌ ನಡುವೆಯೂ ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ನವಮಂಗಳೂರು ಬಂದರು ಮಂಡಳಿ ಹೆಚ್ಚಿನ ಸರಕು ಸಾಗಣೆ ಮಾಡುವ ಮೂಲಕ ಸಾಧನೆ ಮಾಡಿದೆ.

ಕೋವಿಡ್‌–19 ಸಂಕಷ್ಟವನ್ನು ಸವಾಲಾಗಿ ಸ್ವೀಕರಿಸುವ ಮೂಲಕ ಕಠಿಣ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದ್ದು, ಈ ಬಾರಿ ಕಳೆದ ವರ್ಷದ ಮೊದಲ ತ್ರೈಮಾಸಿಕಕ್ಕಿಂತ ಹೆಚ್ಚಿನ ಸರಕು ಸಾಗಣೆ ಮಾಡಲಾಗಿದೆ ಎಂದು ಎನ್‌ಎಂಪಿಟಿ ಅಧ್ಯಕ್ಷ ಎ.ವಿ. ರಮಣ್‌ ತಿಳಿಸಿದ್ದಾರೆ.

ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ 89 ಲಕ್ಷ ಟನ್‌ ಸರಕು ಸಾಗಣೆ ಮಾಡಿದ್ದ ಎನ್‌ಎಂಪಿಟಿ ಈ ವರ್ಷದ ಮೊದಲ ತ್ರೈಮಾಸಿಕದ ಅಂತ್ಯಕ್ಕೆ 92 ಲಕ್ಷ ಟನ್‌ ಸರಕು ಸಾಗಣೆ ಮಾಡಿದೆ. ಕಳೆದ ವರ್ಷ 321 ಸರಕು ಸಾಗಣೆ ವಿಮಾನಗಳ ನಿರ್ವಹಣೆ ಮಾಡಿದ್ದರೆ, ಈ ಬಾರಿ 277 ಹಡಗುಗಳ ನಿರ್ವಹಣೆ ಮಾಡಲಾಗಿದೆ. ಅಲ್ಲದೇ ಬರ್ತ್‌ನಿಂದ ಸರಾಸರಿ ಸರಕು ಸಾಗಣೆ ಪ್ರಮಾಣ 14,774 ಟನ್‌ನಿಂದ 17,746 ಟನ್‌ಗೆ ಏರಿಕೆಯಾಗಿದೆ.

ಕಚ್ಚಾತೈಲದ ಆಮದು ಹೆಚ್ಚಳ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾಗಿದ್ದರಿಂದ ಕೇಂದ್ರ ಸರ್ಕಾರ ಕರಾವಳಿಯ ಪೆರ್ಮುದೆ ಹಾಗೂ ಪಾದೂರು ಸಂಗ್ರಹಾಗಾರಗಳಲ್ಲಿ ಹೆಚ್ಚಿನ ಕಚ್ಚಾತೈಲ ಶೇಖರಣೆ ಮಾಡಿದ್ದು, ಇದರಿಂದಾಗಿ ಎನ್‌ಎಂಪಿಟಿಯ ವಹಿವಾಟು ಹೆಚ್ಚಳವಾಗಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ 25 ಲಕ್ಷ ಟನ್‌ ಕಚ್ಚಾತೈಲ ಎನ್‌ಎಂಪಿಟಿಗೆ ಬಂದಿದ್ದು, ಈ ಬಾರಿ 40 ಲಕ್ಷ ಟನ್‌ ಕಚ್ಚಾತೈಲವನ್ನು ಎನ್‌ಎಂಪಿಟಿ ನಿರ್ವಹಣೆ ಮಾಡಿದೆ. ಏಪ್ರಿಲ್‌–ಮೇ ತಿಂಗಳಲ್ಲಿ ಗಲ್ಫ್‌ ರಾಷ್ಟ್ರಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾತೈಲ ಮಂಗಳೂರಿಗೆ ಬಂದಿದ್ದು, ಇದನ್ನು ಎನ್‌ಎಂಪಿಟಿಯ ಮೂಲಕ ಭೂಗತ ಸಂಗ್ರಹಾಗಾರಗಳಲ್ಲಿ ಶೇಖರಣೆ ಮಾಡಲಾಗಿದೆ.

ಇನ್ನೊಂದೆಡೆ ಜೆಎಸ್‌ಡಬ್ಲ್ಯು ಸ್ಟೀಲ್‌, ಉತ್ತರ ಕರ್ನಾಟಕ ಸಿಮೆಂಟ್‌ ಕಾರ್ಖಾನೆಗಳು, ಉಡುಪಿಯ ಯುಪಿಸಿಎಲ್‌ನಿಂದ ಹೆಚ್ಚಿನ ಸರಕು ಸಾಗಣೆ ಆಗಿಲ್ಲ. ಆದರೆ, ಕಚ್ಚಾತೈಲದ ಆಮದು ಹೆಚ್ಚಿದ್ದರಿಂದ ಬೇರೆ ಕ್ಷೇತ್ರಗಳಲ್ಲಿ ಆಗಿರುವ ನಷ್ಟವನ್ನು ಸರಿದೂಗಿಸಲು ಸಾಧ್ಯವಾಗಿದೆ. ನಿರ್ವಹಣೆ ಮಾಡಿರುವ ಸರಕುಗಳಲ್ಲಿ ಕಚ್ಚಾತೈಲ ಹಾಗೂ ಕಲ್ಲಿದ್ದಲಿನ ಪ್ರಮಾಣವೇ ಶೇ 78 ರಷ್ಟಿದೆ ಎಂದು ಎ.ವಿ. ರಮಣ್‌ ತಿಳಿಸಿದ್ದಾರೆ.

ತೈಲೋತ್ಪನ್ನಗಳ ಬೇಡಿಕೆ ಕುಸಿದಿರುವುದರಿಂದ ಎಂಆರ್‌ಪಿಎಲ್‌ ಶೇ 40 ರಷ್ಟು ಮಾತ್ರ ತೈಲ ಸಂಸ್ಕರಣೆ ಮಾಡುತ್ತಿದೆ. ಅಲ್ಲದೇ ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿಯು ಚೀನಾಗೆ ಕಳುಹಿಸಬೇಕಿದ್ದ 3 ಹಂತದ ಸರಕು ಸಾಗಣೆಯೂ ಸಾಧ್ಯವಾಗಿಲ್ಲ. ಅದಾಗ್ಯೂ ಎನ್‌ಎಂಪಿಟಿ ಈ ಸಾಧನೆ ಮಾಡಿದೆ ಎನ್ನುವುದು ರಮಣ್‌ ಅವರ ಮಾತು.

ಕೋವಿಡ್–19 ಸಂದರ್ಭದಲ್ಲಿ ಪರ್ಯಾಯ ವಹಿವಾಟು ಅಭಿವೃದ್ಧಿ ಯೋಜನೆಗಳು ಎನ್‌ಎಂಪಿಟಿಯ ಸಾಧನೆಗೆ ಸಹಕಾರಿಯಾಗಿವೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT