ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಚುನಾವಣೆಗೂ, ತೆರಿಗೆ ಕಡಿತಕ್ಕೂ ಸಂಬಂಧವಿಲ್ಲ: ಸುದರ್ಶನ ಮೂಡುಬಿದಿರೆ

'ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲೂ ಇಂಧನ ತೆರಿಗೆ ಇಳಿಸಿ'
Last Updated 8 ನವೆಂಬರ್ 2021, 15:51 IST
ಅಕ್ಷರ ಗಾತ್ರ

ಮಂಗಳೂರು: ಕಾಂಗ್ರೆಸ್ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲೂ ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆಯನ್ನು ಕಡಿತ ಮಾಡಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ಒತ್ತಾಯಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆ ಫಲಿತಾಂಶಕ್ಕೂ, ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆ ಕಡಿತ ಮಾಡಿರುವುದಕ್ಕೂ ಸಂಬಂಧವೇ ಇಲ್ಲ ಎಂದರು. ‌

ಕಾಂಗ್ರೆಸ್ ಮುಖಂಡರು ಕೇವಲ ಸುಳ್ಳು ಮಾಹಿತಿಗಳನ್ನು ಹರಡುವುದರಲ್ಲಿ ನಿರತರಾಗಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ ತನ್ನ ಪಾಲಿನ ತೆರಿಗೆಯನ್ನು ಕಡಿಮೆ ಮಾಡಿದೆ. ಇದೀಗ ರಾಜ್ಯ ಸರ್ಕಾರಗಳ ಜವಾಬ್ದಾರಿ ಇದೆ. ಜನರ ಬಗ್ಗೆ ನಿಜವಾದ ಕಾಳಜಿ ಇದ್ದಲ್ಲಿ, ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳಲ್ಲೂ ಇಂಧನದ ಮೇಲಿನ ತೆರಿಗೆಯನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.

ಉಪ ಚುನಾವಣೆಯಲ್ಲಿನ ಸೋಲಿನಿಂದಾಗಿ ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆ ಇಳಿಕೆ ಮಾಡಿರುವುದಾಗಿ ಕಾಂಗ್ರೆಸ್‌ ಆರೋಪಿಸುತ್ತಿದೆ. ಆದರೆ, ವಾಸ್ತವದಲ್ಲಿ ಉಪ ಚುನಾವಣೆಗೂ ಇದಕ್ಕೂ ಸಂಬಂಧವೇ ಇಲ್ಲ. ಉಪ ಚುನಾವಣೆಗೂ ಮೊದಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೆರಿಗೆ ಕಡಿಮೆ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಇದನ್ನು ಕಾಂಗ್ರೆಸ್ಸಿಗರು ಅರಿತುಕೊಳ್ಳಬೇಕು ಎಂದು ಹೇಳಿದರು.

ತಪ್ಪೇನು: ಸುರತ್ಕಲ್‌ನ ವೃತ್ತಕ್ಕೆ ಸಾವರ್ಕರ್‌ ಹೆಸರು ಇಡುವುದರಲ್ಲಿ ತಪ್ಪೇನಿದೆ ಎಂದು ಸುದರ್ಶನ ಮೂಡುಬಿದಿರೆ ಪ್ರಶ್ನಿಸಿದರು.

ಶಾಸಕ ಯು.ಟಿ. ಖಾದರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಾವರ್ಕರ ಅವರ ಸಾಮರ್ಥ್ಯ ಬ್ರಿಟಿಷರಿಗೆ ಮಾತ್ರ ಗೊತ್ತಿತ್ತು. ಅದಕ್ಕಾಗಿಯೇ ಅವರನ್ನು ಅಂಡಮಾನ್‌, ನಿಕೋಬಾರ್‌ನ ಜೈಲಿನಲ್ಲಿ ಇರಿಸಿತ್ತು. ಆದರೆ, ಕೆಲವರು ಅವರನ್ನು ದೇಶದ್ರೋಹಿಯಾಗಿ ಬಿಂಬಿಸುತ್ತಿರುವುದು ದುರ್ದೈವದ ಸಂಗತಿ ಎಂದರು.

ದೇಶವನ್ನು ಆಳಿದ, ಲೂಟಿ ಮಾಡಿದವರ ಹೆಸರುಗಳನ್ನು ಇಡುವಾಗ ವ್ಯಕ್ತವಾಗದ ಆಕ್ಷೇಪ, ದೇಶಭಕ್ತರ ಹೆಸರನ್ನು ಇಡುವಾಗಿ ಏಕೆ ಆರಂಭವಾಗುತ್ತದೆ? ಯು.ಎಸ್‌. ಮಲ್ಯ, ಜಾರ್ಜ್‌ ಫರ್ನಾಂಡಿಸ್‌, ರಾಣಿ ಅಬ್ಬಕ್ಕ ಅವರ ಹೆಸರನ್ನು ಕೆಲ ವೃತ್ತಗಳಿಗೆ ಇಡಲಾಗಿದೆ. ಆದರೆ, ಮೂಲ್ಕಿ ಸುಂದರರಾಮ ಶೆಟ್ಟಿ ಅವರ ಹೆಸರನ್ನು ರಸ್ತೆಗೆ ಇಡುವಾಗ ಕೆಲವರು ಆಕ್ಷೇಪ ವ್ಯಕ್ತಪಡಿಸಿ, ಅಡ್ಡಿಪಡಿಸಿದರು ಎಂದು ತಿರುಗೇಟು ನೀಡಿದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಕಸ್ತೂರಿ ಪಂಜ, ಸುಧೀರ್ ಶೆಟ್ಟಿ ಕಣ್ಣೂರು, ಜಿಲ್ಲಾ ವಕ್ತಾರ, ಮುಡಾ ಅಧ್ಯಕ್ಷ ರವಿಶಂಕರ ಮಿಜಾರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT