ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರತಿ ತಿಂಗಳು ನೀರಿನ ಬಿಲ್‌ ವಿತರಣೆ’

ನೀರಿನ ಶುಲ್ಕ ಪಾವತಿ, ಟ್ರೇಡ್‌ ಲೈಸೆನ್ಸ್‌ಗೆ ಆನ್‌ಲೈನ್‌ ವ್ಯವಸ್ಥೆ
Last Updated 2 ಜನವರಿ 2021, 4:11 IST
ಅಕ್ಷರ ಗಾತ್ರ

ಮಂಗಳೂರು: ಮಹಾನಗರ ಪಾಲಿಕೆಯ ನೀರಿನ ಶುಲ್ಕ ಪಾವತಿ ಹಾಗೂ ಹೊಸ ಉದ್ದಿಮೆ ಪರವಾನಗಿ ಪಡೆಯುವುದು ಅಥವಾ ನವೀಕರಣಕ್ಕಾಗಿ ಆನ್‌ಲೈನ್‌ ಸೇವೆಯನ್ನು ಆರಂಭಿಸಲಾಗಿದ್ದು, ನಗರದ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ಮೇಯರ್ ದಿವಾಕರ ಪಾಂಡೇಶ್ವರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೀರಿನ ಶುಲ್ಕವನ್ನು ಆನ್‌ಲೈನ್ ಮೂಲಕ ಭಾರತೀಯ ಸ್ಟೇಟ್ ಬ್ಯಾಂಕ್‌ಗೆ ಪಾವತಿಸಬಹುದು. ಉದ್ದಿಮೆ ಪರವಾನಗಿಗಾಗಿ ‘ಎಂಸಿಸಿ ಟ್ರೇಡ್ ಲೈಸೆನ್ಸ್’ ಆ್ಯಪ್ ಆರಂಭಿಸಲಾಗಿದೆ ಎಂದು ತಿಳಿಸಿದರು.

ನೀರಿನ ಶುಲ್ಕವನ್ನು ಪಾಲಿಕೆಯ ವೆಬ್‌ಸೈಟ್ www.mangalurucity.mrc.gov.in ಗೆ ಲಾಗಿನ್ ಆಗಿ, ಅಲ್ಲಿ ಆನ್‌ಲೈನ್ ನೀರಿನ ಬಿಲ್ಲಿನ ಪಾವತಿಯನ್ನು ಕ್ಲಿಕ್ ಮಾಡುವ ಮೂಲಕ ಪ್ರಕ್ರಿಯೆಯನ್ನು ಮುಂದುವರಿಸಿಕೊಂಡು ಗ್ರಾಹಕರು ಯುಪಿಐ, ರುಪೇ, ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಮೂಲಕ ನೀರಿನ ಶುಲ್ಕ ಪಾವತಿಸಬಹುದು ಎಂದು ಉಪ ಆಯುಕ್ತ ಡಾ.ಸಂತೋಷ್‌ಕುಮಾರ್ ತಿಳಿಸಿದರು.

ನಗರದಲ್ಲಿ 93 ಸಾವಿರ ಗೃಹ ಬಳಕೆಯ ನೀರಿನ ಸಂಪರ್ಕವಿದ್ದು, ಎಂಪಿಡಬ್ಲ್ಯು ಕಾರ್ಯಕರ್ತರು ಮನೆಗಳಿಗೆ ಭೇಟಿ ನೀಡಿ ನೀರಿನ ಶುಲ್ಕವನ್ನು ನೀಡುತ್ತಾರೆ. 60 ವಾರ್ಡ್‌ಗಳಿಗೂ ತಲಾ ಒಬ್ಬರಂತೆ ಕಾರ್ಯಕರ್ತರನ್ನು ನಿಯೋಜಿಸಲಾಗಿದ್ದು, ಪ್ರತಿ ತಿಂಗಳು ಅವರು ನೀರಿನ ಶುಲ್ಕ ನೀಡುವ ವ್ಯವಸ್ಥೆಯ ಜತೆಗೆ, ಸ್ಥಳದಲ್ಲೇ ಅವರ ಬಳಿ ಇರುವ ಕ್ಯೂಆರ್ ಕೋಡ್ ಮೂಲಕವೂ ನೀರಿನ ಬಿಲ್ ಪಾವತಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸಕ್ರಮಕ್ಕೆ ಅವಕಾಶ: ಪಾಲಿಕೆಯ ನೀರಿನ ಶುಲ್ಕ ಪಾವತಿ ಹಾಗೂ ಉದ್ದಿಮೆ ಪರವಾನಗಿ ವ್ಯವಸ್ಥೆಯನ್ನು ಆನ್‌ಲೈನ್ ಮೂಲಕ ಮಾಡುವಲ್ಲಿ ಎಸ್‌ಬಿಐ ಹಾಗೂ ಕೆನರಾ ಬ್ಯಾಂಕ್‌ಗಳು ಕೈಜೋಡಿಸಿವೆ. ಆನ್‌ಲೈನ್ ವ್ಯವಸ್ಥೆಯಿಂದ ಜನರ ಸಮಯ ಉಳಿತಾಯದ ಜತೆಗೆ ಕಚೇರಿಗೆ ಅಲೆದಾಟದ ಕಿರಿಕಿರಿಯನ್ನೂ ತಪ್ಪಿಸಲಿದೆ ಎಂದು ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌್ ಹೇಳಿದರು.

ಸಾರ್ವಜನಿಕರು ತಮ್ಮ ನೀರಿನ ಸಂಪರ್ಕ ಅಕ್ರಮವಾಗಿದ್ದಲ್ಲಿ ಅದನ್ನು ಸಕ್ರಮಗೊಳಿಸಬೇಕು. ಒಂದು ವೇಳೆ ಪಾಲಿಕೆಯಿಂದ ಪತ್ತೆಹಚ್ಚಿದಲ್ಲಿ ಭಾರೀ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಉಪ ಮೇಯರ್ ವೇದಾವತಿ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪೂರ್ಣಿಮಾ, ಶರತ್, ಜಗದೀಶ್ ಶೆಟ್ಟಿ, ಕಿರಣ್ ಕುಮಾರ್, ಪರಿಸರ ಎಂಜಿನಿಯರ್ ಮಧು ಇದ್ದರು.\

****

ಕಳೆದ ತಿಂಗಳು ಎರಡು ಬಾರಿ ನೀರಿನ ಅದಾಲತ್ ನಡೆಸಲಾಗಿದ್ದು, ಸಾಕಷ್ಟು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಈ ತಿಂಗಳು ಮತ್ತೆ ನೀರಿನ ಅದಾಲತ್ ನಡೆಸಲಾಗುವುದು.

- ದಿವಾಕರ ಪಾಂಡೇಶ್ವರ,ಮೇಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT