ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ತೆರಿಗೆ ಪಾವತಿಗೆ ಆನ್‌ಲೈನ್‌ ವ್ಯವಸ್ಥೆ: ಮೇಯರ್‌ ಪ್ರೇಮಾನಂದ ಶೆಟ್ಟಿ

ಕಷ್ಟವಾದರೆ ಸಹಾಯವಾಣಿ ಸಂಪರ್ಕಿಸಿ: ಮೇಯರ್‌ ಪ್ರೇಮಾನಂದ ಶೆಟ್ಟಿ
Last Updated 2 ನವೆಂಬರ್ 2021, 6:22 IST
ಅಕ್ಷರ ಗಾತ್ರ

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿದಾರರು ತಮ್ಮ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಇನ್ನು ಮುಂದೆ ಆನ್‌ಲೈನ್‌ನಲ್ಲಿ ಪಾವತಿಸಬಹುದಾಗಿದ್ದು, ಬ್ಯಾಂಕ್‌ಗಳಲ್ಲಿ ಸರದಿ ನಿಲ್ಲುವ ತೊಂದರೆ ತಪ್ಪಲಿದೆ ಎಂದು ಮೇಯರ್‌ ಪ್ರೇಮಾನಂದ ಶೆಟ್ಟಿ ತಿಳಿಸಿದರು.

ನಗರದ ಪಾಲಿಕೆ ಕಚೇರಿಯಲ್ಲಿ ಸೋಮವಾರ ಆನ್‌ಲೈನ್‌ ತೆರಿಗೆ ಪಾವತಿ ವ್ಯವಸ್ಥೆಗೆ ಚಾಲನೆ ನೀಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ನಗರದಲ್ಲಿ ಆಸ್ತಿಗಳ ಮಾಲೀಕರು ತಮ್ಮ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಕೇವಲ ಲಿಂಕ್‌ ಕ್ಲಿಕ್‌ ಮಾಡುವ ಮೂಲಕ ಪಾವತಿಸಲು ಸಾಧ್ಯವಾಗಲಿದೆ. ಇದರಿಂದ ನಗರ ಬಿಟ್ಟು ಹೊರಗೆ ವಾಸಿಸುತ್ತಿರುವ ಜನರಿಗೂ ಅನುಕೂಲ ಆಗಲಿದೆ ಎಂದರು.

ತೆರಿಗೆ ಪಾವತಿಸಲು www.mccpropertytax.in ಲಿಂಕ್‌ಗೆ ಕ್ಲಿಕ್‌ ಮಾಡಬೇಕು. ನಂತರ ಮೊಬೈಲ್‌ ಸಂಖ್ಯೆಯನ್ನು ನಮೂದಿಸಿದಲ್ಲಿ, ಒಟಿಪಿ ಬರಲಿದೆ. ಅದನ್ನು ದಾಖಲಿಸಿದಲ್ಲಿ, ಆಸ್ತಿ ಸಂಖ್ಯೆ, ಖಾತಾ ಸಂಖ್ಯೆ ಆಸ್ತಿಯ ಗುರುತಿನ ಸಂಖ್ಯೆ, ವಿಳಾಸಗಳು ಕಾಣಿಸಲಿವೆ. ಅದು ಸರಿಯಾಗಿದ್ದಲ್ಲಿ, ತೆರಿಗೆ ಪಾವತಿಯನ್ನು ಮುಂದುವರಿಸಬಹುದಾಗಿದೆ ಎಂದರು.

ಯಾವುದೇ ಕಟ್ಟಡ ಅಥವಾ ಆಸ್ತಿಯನ್ನು ಬಾಡಿಗೆಗೆ ನೀಡಿದ್ದಲ್ಲಿ, ಬಾಡಿಗೆದಾರರ ಹೆಸರು ಹಾಗೂ ವಿವರವನ್ನು ನಮೂದಿಸಬೇಕು. ಯಾವ ಪ್ರದೇಶದಲ್ಲಿ ಆಸ್ತಿ ಇದೆ, ವಾಣಿಜ್ಯ, ವಸತಿ, ವಸತಿಯೇತರ ಆಸ್ತಿಯೇ ಎಂಬಿತ್ಯಾದಿ ಮಾಹಿತಿಗಳನ್ನು ಒದಗಿಸಬೇಕು. ಇದೆಲ್ಲ ಮುಗಿದ ನಂತರ ಆಸ್ತಿ ತೆರಿಗೆಯ ಮೊತ್ತ ಕಾಣಿಸಲಿದೆ. ಅದನ್ನು ನೆಟ್‌ ಬ್ಯಾಕಿಂಗ್ ಅಥವಾ ಕಾರ್ಡ್‌ಗಳನ್ನು ಬಳಸಿ ಆನ್‌ಲೈನ್‌ ಮೂಲಕ ಪಾವತಿಸಬಹುದಾಗಿದೆ ಎಂದು ತಿಳಿಸಿದರು.

ಈ ವೆಬ್ ಅಪ್ಲಿಕೇಶನ್‌ನಲ್ಲಿ ಹಿಂದಿನ ವರ್ಷದ ಆಸ್ತಿ ತೆರಿಗೆ ಪಾವತಿ ಸೇರಿದಂತೆ ತಮ್ಮ ಆಸ್ತಿಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಪಡೆಯಬಹುದು. ಜೊತೆಗೆ ಬಾಕಿ ಇರುವ ಆಸ್ತಿ ತೆರಿಗೆಯ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದರು.

ಈ ವ್ಯವಸ್ಥೆಯಲ್ಲಿ ನಾಗರಿಕರಿಗೆ ತೊಂದರೆ ಎದುರಾದಲ್ಲಿ ಸಹಾಯವಾಣಿ ಸಂಖ್ಯೆ 6364464116 ಅಥವಾ mcc.propertytax@gmail.com ಇ–ಮೇಲ್‌ಗೆ ಸಂದೇಶ ಕಳುಹಿಸುವ ಮೂಲಕ ಪರಿಹರಿಸಿಕೊಳ್ಳಬಹುದು. ವಲಯ ಕಚೇರಿಯ ಆಯುಕ್ತರು ಅಥವಾ ಕಂದಾಯ ಅಧಿಕಾರಿಗಳನ್ನೂ ಸಂಪರ್ಕಿಸಬಹುದು ಎಂದು ಹೇಳಿದರು.

ಶಾಸಕರಾದ ಡಿ.ವೇದವ್ಯಾಸ ಕಾಮತ್‌, ಡಾ.ವೈ. ಭರತ್‌ ಶೆಟ್ಟಿ, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್‌ಕುಮಾರ್‌,ಉಪಮೇಯರ್ ಸುಮಂಗಳಾ ರಾವ್, ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಂದೀಪ್ ಗರೋಡಿ, ಶೋಭಾ ರಾಜೇಶ್, ಲೀಲಾವತಿ ಪ್ರಕಾಶ್, ಪಾಲಿಕೆ ಅಧಿಕಾರಿಗಳು ಇದ್ದರು.

ನಗರದ ಆಸ್ತಿಗಳ ಸಮೀಕ್ಷೆ

ಮಂಗಳೂರು ನಗರದಲ್ಲಿನ ಆಸ್ತಿಗಳ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರದಲ್ಲಿಯೇ ಕಾರ್ಯಾದೇಶ ನೀಡಲಾಗುವುದು ಎಂದು ಮೇಯರ್‌ ಪ್ರೇಮಾನಂದ ಶೆಟ್ಟಿ ತಿಳಿಸಿದರು.

ಆಸ್ತಿಗಳ ಸಮೀಕ್ಷೆ ಪೂರ್ಣಗೊಂಡ ನಂತರ ನೀರಿನ ಸಂಪರ್ಕ ಹಾಗೂ ಒಳಚರಂಡಿ ಸಂಪರ್ಕ ಪಡೆದಿರುವ ಕಟ್ಟಡಗಳ ಸಮಗ್ರ ಮಾಹಿತಿ ದೊರೆಯಲಿದೆ. ಈ ಎಲ್ಲ ಮಾಹಿತಿಯನ್ನು ವೆಬ್ ಅಪ್ಲಿಕೇಶನ್‌ನಲ್ಲಿ ಸಂಲಗ್ನಗೊಳಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT