ಮಂಗಳೂರು: ‘ಪೌರ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಒಂಬತ್ತು ದಿನಗಳಿಂದ ರಾಜ್ಯದಾದ್ಯಂತ ಹೋರಾಟ ನಡೆಸುತ್ತಿದ್ದರೂ, ಡಬ್ಬಲ್ ಎಂಜಿನ್ ಸರ್ಕಾರ ಸ್ಪಂದಿದಸೇ ಕ್ರೌರ್ಯ ಪ್ರದರ್ಶಿಸಿದೆ. ನಗರ, ಪಟ್ಟಣ ಪ್ರದೇಶದ ಸ್ವಚ್ಛತೆಗಾಗಿ ಸರ್ವಸ್ವವನ್ನೂ ಮುಡಿಪಾಗಿಟ್ಟ ಪೌರ ಕಾರ್ಮಿಕರ ಬಗ್ಗೆ ಎಳ್ಳಷ್ಟೂ ಕಾಳಜಿ ವಹಿಸಿಲ್ಲ’ ಎಂದು ಡಿವೈಎಫ್‌ಐ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ.ಇಮ್ತಿಯಾಜ್ ಆಕ್ರೋಶ ವ್ಯಕ್ತಪಡಿಸಿದರು.
ಪೌರ ಕಾರ್ಮಿಕರರ ಹೋರಾಟವನ್ನು ಬೆಂಬಲಿಸಿ ವಿವಿಧ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಗರದ ಪಾಲಿಕೆ ಕಚೇರಿ ಎದುರು ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
‘ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ದುರುಪಯೋಗ ಪಡಿಸುತ್ತಿದೆ. ಆದರೆ, ತೀರಾ ಸಂಕಷ್ಟದಲ್ಲಿರುವ ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾದ ಶಾಸಕ ವೇದವ್ಯಾಸ ಕಾಮತ್ ಅವರು ಕಾರ್ಮಿಕರ ಜೊತೆ ದರ್ಪ ತೋರಿಸಿ ಬೆದರಿಕೆ ಹಾಕಿರುವುದು ತೀರಾ ಖಂಡನೀಯ. ಬೇಡಿಕೆ ಕೂಡಲೇ ಇತ್ಯರ್ಥ ಗೊಳ್ಳದಿದ್ದಲ್ಲಿ ಶಾಸಕರ ಮನೆಯೆದುರು ಕಸ ಸುರಿದು ಪ್ರತಿಭಟನೆ ನಡೆಸಲಿದ್ದೇವೆ’ ಎಂದರು.
ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ‘ಯಾವುದೇ ಸಾಮಾಜಿಕ ಭದ್ರತೆ ಇಲ್ಲದೇ ಗುತ್ತಿಗೆ ಆಧಾರದಲ್ಲಿ ದುಡಿಯುವ ಪೌರ ಕಾರ್ಮಿಕರ ಬದುಕು ತೀರಾ ಶೋಚನೀಯವಾಗಿದೆ. ಅವರ ಬಗ್ಗೆ ಸರ್ಕಾರಗಳು ಕಿಂಚಿತ್ತೂ ಗಮನ ನೀಡಿಲ್ಲ. ಎಲ್ಲಾ ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು’ ಎಂದು ಒತ್ತಾಯಿಸಿದರು.
ರೈತ ಸಂಘದ ಮುಖಂಡ ಯಾದವ ಶೆಟ್ಟಿ ಮಾತನಾಡಿ, ‘ಸಮಾಜದಲ್ಲಿ ಅತ್ಯಂತ ನಿಕೃಷ್ಟವಾಗಿ ಬದುಕು ಸಾಗಿಸುವ ಪೌರ ಕಾರ್ಮಿಕರು ಒಬ್ಬಂಟಿಯಲ್ಲ. ಅವರ ಜೊತೆ ಜಿಲ್ಲೆಯ ಸಮಸ್ತ ಜನಸಮುದಾಯವಿದೆ. ಹೋರಾಟ ಖಂಡಿತಾ ಯಶಸ್ವಿಯಾಗಲಿದೆ’ ಎಂದರು.
ಪ್ರತಿಭಟನೆಯಲ್ಲಿ ಮಾಜಿ ಮೇಯರ್ ಅಶ್ರಫ್ ಕೆ. ಡಿವೈಎಫ್‌ಐ ಪ್ರಮುಖರಾದ ನವೀನ್ ಕೊಂಚಾಡಿ, ಜಗದೀಶ್ ಬಜಾಲ್, ತಯ್ಯುಬ್ ಬೆಂಗ್ರೆ, ಸಿಐಟಿಯು ಪ್ರಮುಖರಾದ ಯೋಗೀಶ್ ಜಪ್ಪಿನಮೋಗರು, ಮಹಮ್ಮದ್ ಮುಸ್ತಫಾ, ವಿಲ್ಲಿ ವಿಲ್ಸನ್, ಮಹಮ್ಮದ್ ಆಸಿಫ್, ಹರೀಶ್ ಪೂಜಾರಿ, ಮಹಿಳಾ ಸಂಘಟನೆಯ ಮುಖಂಡರಾದ ಭಾರತಿ ಬೋಳಾರ, ಪ್ರಮೀಳಾ ದೇವಾಡಿಗ, ಅಸುಂತಾ ಡಿಸೋಜ, ಯೋಗಿತಾ ಉಳ್ಳಾಲ, ವಿದ್ಯಾರ್ಥಿ ನಾಯಕರಾದ ವಿನೀತ್ ದೇವಾಡಿಗ, ಯುವ ವಕೀಲ ನಿತಿನ್ ಕುತ್ತಾರ್, ಸುನಂದಾ ಕೊಂಚಾಡಿ, ಪಾಲಿಕೆಯ ಮಾಜಿ ಸದಸ್ಯ ದಯಾನಂದ ಶೆಟ್ಟಿ, ಸಫಾಯಿ ಕರ್ಮಚಾರಿ ಸಂಘದ ಮುಖಂಡ ರಾಜೇಶ್, ಪದ್ಮನಾಭ, ಸಂತೋಷ್, ಅಶ್ವಿನ್ ಇದ್ದರು .
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.