ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದೃಷ್ಟದ ‘ಆಟ’ಕ್ಕೆ ಕೇರಳ ಗಡಿಯತ್ತ ಚಿತ್ತ

ಕೇರಳದ ಲಾಟರಿ ಟಿಕೆಟ್‌ಗೆ ಬೆಂಗಳೂರು, ಮುಂಬೈಯಲ್ಲಿ ಗ್ರಾಹಕರು; ಆನ್‌ಲೈನ್‌ನಲ್ಲಿ ವ್ಯವಹಾರ
Last Updated 29 ನವೆಂಬರ್ 2022, 6:22 IST
ಅಕ್ಷರ ಗಾತ್ರ

ಮಂಗಳೂರು: ಲಾಟರಿಗೆ ನಿಷೇಧ ಹೇರಿರುವ ಕರ್ನಾಟಕದಲ್ಲಿ ಈಗಲೂ ಲಾಟರಿ ಟಿಕೆಟ್ ಖರೀದಿ, ಅದೃಷ್ಟದ ಪರೀಕ್ಷೆ ನಡೆಯುತ್ತಲೇ ಇದೆ.

ಇಲ್ಲಿ ಮಾರಾಟವಾಗುವ ಟಿಕೆಟ್‌ಗಳು ಕೇರಳ ರಾಜ್ಯ ಲಾಟರಿಯದ್ದು. ಇದಕ್ಕೆ ಬಳಕೆಯಾಗುತ್ತಿರುವ ಮಾಧ್ಯಮ ವಾಟ್ಸ್‌ ಆ್ಯಪ್‌. ಕರ್ನಾಟಕ–ಕೇರಳ ಗಡಿಭಾಗದ ತಲಪಾಡಿಯಲ್ಲಿ ಗೂಡಂಗಡಿಗಳನ್ನು ಇರಿಸಿಕೊಂಡು ಟಿಕೆಟ್ ಮಾರಾಟ ಮಾಡುತ್ತಿರುವವರು ವ್ಯವಹಾರ ಕುದುರಿಸಲು ‍ಕಂಡುಕೊಂಡಿರುವ ಈ ಹೊಸ ‍ದಾರಿ ಅವರ ಕೈ ಹಿಡಿದಿದೆ.

ಹೇಗೆ ನಡೆಯುತ್ತದೆ ವ್ಯಾಪಾರ?

ಕೇರಳದಲ್ಲಿ ಹೊರರಾಜ್ಯದ ಲಾಟರಿ ನಿಷೇಧಿಸಿದ್ದರೂ ಸ್ಥಳೀಯ ಲಾಟರಿ ಜಾರಿಯಲ್ಲಿದೆ. ಪ್ರತಿ ಸೋಮವಾರ ವಿನ್‌ ವಿನ್‌, ಮಂಗಳವಾರ ಸ್ತ್ರೀಶಕ್ತಿ, ಬುಧವಾರ ಅಕ್ಷಯ, ಗುರುವಾರ ಕಾರುಣ್ಯ ಪ್ಲಸ್‌, ಶುಕ್ರವಾರ ನಿರ್ಮಲ, ಶನಿವಾರ ಕಾರುಣ್ಯ, ಭಾನುವಾರ ಪೌರ್ಣಮಿ ಮತ್ತು ಫಿಫ್ಟಿ–ಫಿಫ್ಟಿ, ತಿಂಗಳಿಗೊಂದು ಭಾಗ್ಯಮಿತ್ರ ಲಾಟರಿಗಳು ಇವೆ. ಮೊದಲ ಬಹುಮಾನದ ಮೊತ್ತ ₹ 70 ಲಕ್ಷದಿಂದ ₹ 1 ಕೋಟಿ ವರೆಗೆ ಇದೆ. ತಲಪಾಡಿ ಮೂಲಕ ಕೇರಳಕ್ಕೆ ತೆರಳುವವರು ಟೋಲ್‌ ಗೇಟ್‌ ದಾಟಿದ ಕೂಡಲೇ ಕಾಣುವ ಅಂಗಡಿಗಳತ್ತ ಆಕರ್ಷಿತರಾಗುತ್ತಾರೆ. ಒಂದು ಬಾರಿ ಟಿಕೆಟ್ ಕೊಂಡವರಿಗೆ ಮಾರಾಟಗಾರರು ವಾಟ್ಸ್‌ ಆ್ಯಪ್‌ ಮೂಲಕ ವ್ಯವಹಾರ ನಡೆಸಲು ಪ್ರೇರೇಪಿಸುತ್ತಾರೆ. ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಿ ಆನ್‌ಲೈನ್‌ನಲ್ಲೇ ಹಣ ಪಾವತಿಸಬಹುದಾದ ‘ಸೌಲಭ್ಯ’ದ ಬಗ್ಗೆ ಮಾಹಿತಿ ನೀಡುತ್ತಾರೆ.

ಬಂಪರ್‌ಗಿಂತ ‘ಸೆಟ್‌’ಗಳಿಗೆ ಬೇಡಿಕೆ

ದೈನಂದಿನ ಲಾಟರಿ ಮಾತ್ರವಲ್ಲದೆ ವಿಶೇಷ ಸಂದರ್ಭದಲ್ಲಿ ಕೋಟಿಗಟ್ಟಲೆ ಮೊತ್ತದ ಬಹುಮಾನ ನೀಡುವ ಬಂಪರ್ ಲಾಟರಿಗಳೂ ಕೇರಳದಲ್ಲಿವೆ. ಕ್ರಿಸ್‌ಮಸ್‌, ತಿರುವೋಣಂ ಬಂಪರ್‌ನಲ್ಲಿ ₹ 12 ಕೋಟಿ, ವಿಷು, ಮಾನ್ಸೂನ್‌,ಪೂಜಾ ಬಂಪರ್‌ನಲ್ಲಿ ₹ 10 ಕೋಟಿ,ಸಮ್ಮರ್ ಬಂಪರ್‌ನಲ್ಲಿ ₹ 6 ಕೋಟಿ ಬಹುಮಾನ ಇದೆ.

ಈ ಟಿಕೆಟ್‌ಗಳಿಗಿಂತ ‘ಸೆಟ್‌’ಗಳಿಗೆ ಹೊರರಾಜ್ಯದಲ್ಲಿ ಬೇಡಿಕೆ ಹೆಚ್ಚು ಎಂದು ಮಾರಾಟಗಾರರು ಹೇಳುತ್ತಾರೆ. ಪ್ರತಿ ಲಾಟರಿಯ ಟಿಕೆಟ್‌ಗಳನ್ನು 12 ಸೀರೀಸ್‌ಗಳಲ್ಲಿ ಅಚ್ಚು ಮಾಡಲಾಗುತ್ತದೆ. ಮೊದಲ ಬಹುಮಾನವನ್ನು ಯಾವುದಾದರೂ ಒಂದು ಸೀರೀಸ್‌ಗೆ ಕೊಡಲಾಗುತ್ತದೆ. ಉದಾಹರಣೆಗೆ ಅಕ್ಷಯ ಲಾಟರಿಯ ಮೊದಲ ಬಹುಮಾನಕ್ಕೆ ಎಎಚ್‌ 323494 ಎಂಬ ಸಂಖ್ಯೆ ಆಯ್ಕೆಯಾಗಿದ್ದರೆ ಇದೇ ಸಂಖ್ಯೆಯ ಎಎ, ಎಬಿ, ಎಸಿ, ಎಡಿ.....ಹೀಗೆ (ಎಎಚ್‌ ಹೊರತುಪಿಡಿಸಿ) 11 ಸೀರೀಸ್‌ಗಳಿಗೆ ಸಮಾಧಾನಕರ ಬಹುಮಾನ ಸಿಗುತ್ತದೆ. ಸಮಾಧಾನಕರ ಬಹುಮಾನ ₹ 7 ಅಥವಾ 8 ಸಾವಿರ ಇರುತ್ತದೆ.

‘ಒಂದು ಸಂಖ್ಯೆಯ ಹಲವು ಸೀರೀಸ್‌ಗಳಿಗೆ ಬಹುಮಾನ ಬಂದರೆ ಗ್ರಾಹಕರಿಗೆ ನಿಜವಾಗಿಯೂ ‘ಲಾಟರಿ’ ಹೊಡೆದಂತೆ. ಹೀಗಾಗಿ ಅದಕ್ಕೆ ಬೇಡಿಕೆ ಹೆಚ್ಚು. ಸೀರೀಸ್‌ಗಳ ಆಧಾರದಲ್ಲಿ ಟಿಕೆಟ್‌ಗಳನ್ನು ನಾವೇ ‘ಸೆಟ್‌’ಗಳಾಗಿ ಸಿದ್ಧಪಡಿಸುತ್ತೇವೆ. ಸಾವಿರಾರು ಮೊತ್ತ ಕೊಟ್ಟು ಈ ಸೆಟ್‌ ಕೊಂಡುಕೊಳ್ಳಲು ಬೆಂಗಳೂರು, ಮುಂಬೈ, ಚೆನ್ನೈ ಮುಂತಾದ ಕಡೆಗಳಲ್ಲಿ ಗ್ರಾಹಕರು ಇದ್ದಾರೆ‘ ಎಂದು ಅಂಗಡಿ ಮಾಲೀಕರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT