ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ರೋಡ್ ಶೋ: ಬಿಜೆಪಿ ಅಭ್ಯರ್ಥಿಗಳ ಪರ ಮತ ಯಾಚಿಸಿದ ಪ್ರಧಾನಿ ಮೋದಿ

ಕಡಲತಡಿಯಲ್ಲಿ ಉತ್ಸಾಹದಲೆ ಎಬ್ಬಿಸಿದ ಮೋದಿ
Published 14 ಏಪ್ರಿಲ್ 2024, 14:26 IST
Last Updated 14 ಏಪ್ರಿಲ್ 2024, 14:26 IST
ಅಕ್ಷರ ಗಾತ್ರ

ಮಂಗಳೂರು: ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ಸೇರಿದ್ದ ಜನಸ್ತೋಮದತ್ತ ಕೈಬೀಸುತ್ತಾ ಸಾಗಿದ ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಕನ್ನಡ, ಉಡುಪಿ- ಚಿಕ್ಕಮಗಳೂರು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿದರು.

ಸಾಮಾಜಿಕ ಕ್ರಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರೋಡ್ ಶೋ ಆರಂಭಿಸಿದ ಅವರು ಬಿಲ್ಲವ ಸಮುದಾಯದ ಮುನಿಸು ಶಮನಗೊಳಿಸುವ ಪ್ರಯತ್ನ ಮಾಡಿದರು. ಹೂವುಗಳಿಂದ ಅಲಂಕರಿಸಿದ್ದ ತೆರೆದ ವಾಹನದಲ್ಲಿ ನಗು ಬೀರುತ್ತಾ, ಅಭಿಮಾನಿಗಳತ್ತ ಕೈ ಬೀಸುತ್ತಾ ಸಾಗಿದ ಪ್ತಧಾನಿ ಕಡಲ ತಡಿಯ ನಗರದಲ್ಲಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.

ಮೋದಿ ಅವರನ್ನು ಕಾಣಲೆಂದೇ ರಸ್ತೆ ಪಕ್ಕದಲ್ಲಿ ತಾಸುಗಟ್ಟಲೆ ಕಾದು ಕುಳಿತಿದ್ದ ಅಭಿಮಾನಿಗಳು ನೆಚ್ಚಿನ‌ನಾಯಕನ ಕಂಡು ಪುಳಕಿತರಾದರು.

ಪ್ರಧಾನಿ ಆಗಮಿಸುತ್ತಿದ್ದಂತೆಯೇ 'ಜೈ ಜೈ ಮೋದಿ... ಜೈಶ್ರೀರಾಂ, ಆಬ್ ಕೀ ಬಾರ್ ಚಾರ್ ಸೌ ಪಾರ್ ' ಘೋಷಣೆ ಮುಗಿಲು ಮುಟ್ಡಿತ್ತು. ಕೇಸರಿ ಪೇಟಾ, ಕೇಸರಿ ಶಾಲು, ಕೇಸರಿ ಟೋಪಿ ಧರಿಸಿದ್ದ ಅಭಿಮಾನಿಗಳಿಗೆ ನೆಚ್ಚಿನ‌ ನಾಯಕನಿಗೆ ಜೈಕಾರ ಹಾಕಿದಷ್ಟೂ ಮನ ತಣಿಯಲಿಲ್ಲ. ಮತ್ತೆ ಮತ್ತೆ ಜೈಕಾರ ಕೂಗಿದರು.

ಮೋದಿ ಅವರು ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡುವಾಗ ದಕ್ಷಿಣ ಕನ್ನಡ ಕ್ಷೇತ್ರದ ಅಭ್ಯರ್ಥಿ ಬ್ರಿಜೇಶ್ ಚೌಟ ಹಾಗೂ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಶಾಸಕರ ಜೊತೆಯಲ್ಲಿದ್ದರು. ನಾಯಕರ ಜೊತೆಗೆ ಪಕ್ಷದ ಹಿರಿಯ ಕಾರ್ಯಕರ್ತರು, ವಿವಿಧ ಸಮಾಜಗಳ ಮುಖಂಡರು ಸೇರಿದಂತೆ 15 ಮಂದಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.

ರೋಡ್ ಶೋ ನೋಡಲು ಕೆಲವರಂತೂ ರಸ್ತೆ ಪಕ್ಕದ ಕಟ್ಟಡಗಳ ಮೆಟ್ಟಿಲುಗಳಲ್ಲಿ ಮೊದಲೇ ಜಾಗ ಹಿಡಿದು ಕಾದಿದ್ದರು. ಇನ್ನು ಕೆಲವರು ರಸ್ತೆ ಪಕ್ಕದ ಆವರಣಗೋಡೆಗಳನ್ನು ಹಾಗೂ ಮರಗಳನ್ನು ಏರಿ ಕಾದು ಕುಳಿತಿದ್ದರು.

ಪೋಟೊ ಕ್ಲಿಕ್ಕಿಸಲು ಹರಸಾಹಸ: ನೆಚ್ಚಿನ ನೇತಾರನ ಫೋಟೊ ಕ್ಲಿಕ್ಕಿಸಲು ಕೆಲವರು ಹರಸಾಹಸ ಪಟ್ಟರು. ಇನ್ನು ಕೆಲವರು ಕಿರು ವಿಡಿಯೊ ರೂಪಿಸಿ ಅದರ ರೀಲ್ಸ್ ರೂಒಇಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು.

ಮಂತ್ರ ಘೋಷ, ಶ್ರೀರಾಮ ಭಜನೆ, ಚೆಂಡೆವಾದನ ರೋಡ್ ಶೋಗೆ ವಿಶೇಷ ಕಳೆತಂದಿತ್ತು.

ಸ್ವಯಂಸೇವಕರು ರಸ್ತೆಯ ಇಕ್ಕೆಲಗಳಲ್ಲೂ ಅಲ್ಲಲ್ಲಿ ಕುಡಿಯುವ ನೀರು, ಮಸಾಲ ಮಜ್ಜಿಗೆ, ತಂಪುಪಾನೀಯಗಳನ್ನು ಉಚಿತವಾಗಿ ವಿತರಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT