ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಅಂಚೆ ಕಚೇರಿಗಳಲ್ಲಿ ಪ್ಯಾಕಿಂಗ್ ಘಟಕ

‘ಪ್ರಜಾವಾಣಿ’ ಫೋನ್‌ ಇನ್ ಕಾರ್ಯಕ್ರಮದಲ್ಲಿ ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ
Last Updated 9 ಫೆಬ್ರುವರಿ 2023, 5:56 IST
ಅಕ್ಷರ ಗಾತ್ರ

ಮಂಗಳೂರು: ಅಂಚೆ ಇಲಾಖೆ ಇನ್ನಷ್ಟು ಗ್ರಾಹಕ ಸ್ನೇಹಿಯಾಗಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯ ಅಂಚೆ ಕಚೇರಿಗಳಲ್ಲಿ ಸ್ಪೀಡ್‌ ಪೋಸ್ಟ್ ಕಳುಹಿಸುವವರಿಗೆ ಅನುಕೂಲವಾಗುವಂತೆ ಪ್ಯಾಕಿಂಗ್ ಘಟಕ ಪ್ರಾರಂಭಿಸುವ ಯೋಜನೆ ಇದೆ ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಎನ್ ತಿಳಿಸಿದರು.

ಬುಧವಾರ ಹಮ್ಮಿಕೊಂಡಿದ್ದ ‘ಪ್ರಜಾವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ ಅವರು, ‘ಹಂಪನಕಟ್ಟೆ ಮತ್ತು ಮುಖ್ಯ ಅಂಚೆ ಕಚೇರಿಯಲ್ಲಿ ಪ್ಯಾಕಿಂಗ್ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಇದನ್ನು ಉಳಿದ ಅಂಚೆ ಕಚೇರಿಗೂ ವಿಸ್ತರಿಸುವ ಪ್ರಸ್ತಾವ ಇದೆ’ ಎಂದರು.

ಕೇಂದ್ರ ಸರ್ಕಾರದ ಅಂಚೆ ಜೀವ ವಿಮೆ ಯೋಜನೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ವರ್ಷಕ್ಕೆ ₹396 ಅಥವಾ ₹399 ವಿಮಾ ಮೊತ್ತ ಪಾವತಿಸಿದರೆ, ರಸ್ತೆ ಅಪಘಾತ, ವಿದ್ಯುತ್ ಅವಘಡ, ಬೆಂಕಿ ಅನಾಹುತ, ಜಾರಿ ಬೀಳುವುದು ಮುಂತಾದ ಅಪಘಾತಗಳಿಂದ ಉಂಟಾಗಬಹುದಾದಂತಹ ಸಾವು, ನೋವು, ಶಾಶ್ವತ ಅಂಗ ವೈಕಲ್ಯಕ್ಕೆ ಪರಿಹಾರ ಪಡೆಯಬಹುದು. ವ್ಯಕ್ತಿ ಮೃತರಾದರೆ ₹10 ಲಕ್ಷದವರೆಗೆ, ಅಪಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದರೆ, ಒಳರೋಗಿ ಚಿಕಿತ್ಸೆಗಾಗಿ ₹60 ಸಾವಿರ, ಹೊರ ರೋಗಿಯಾಗಿ ಚಿಕಿತ್ಸೆ ಪಡೆದರೆ ₹30 ಸಾವಿರ ಮೊತ್ತ ಲಭ್ಯವಾಗುತ್ತದೆ. ಮಂಗಳೂರು ಅಂಚೆ ವಿಭಾಗ ವ್ಯಾಪ್ತಿಯಲ್ಲಿ ಒಂದು ವರ್ಷದ ಅವಧಿಯಲ್ಲಿ 3,159 ಜನರು ಅಪಘಾತ ವಿಮೆ ಮಾಡಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ 6,912, ಪ್ರಧಾನಮಂತ್ರಿ ಜೀವನ್‌ ಜ್ಯೋತಿ ಬಿಮಾ ಯೋಜನೆಯಡಿ 1,836, ಅಟಲ್ ಪಿಂಚಣಿ ಯೋಜನೆಯಡಿ 155 ಜನರು ನೋಂದಾಯಿಸಿಕೊಂಡಿದ್ದಾರೆ. ಪೋಸ್ಟ್ ಇನ್ಫೋ ಆ್ಯಪ್ ಇದ್ದು, ಇದರಲ್ಲಿ ಅಂಚೆ ಇಲಾಖೆಯಲ್ಲಿ ಲಭ್ಯವಾಗುವ ಎಲ್ಲ ವಿಮೆಗಳ ವಿವರ ದೊರೆಯುತ್ತದೆ. ಆಸಕ್ತರಿಗೆ ವಿಮಾ ಏಜೆಂಟರಾಗಲು ಸಹ ಅವಕಾಶ ಇದೆ ಎಂದು ತಿಳಿಸಿದರು.

ಸಾರ್ವಜನಿಕರು ಕೇಳಿದ ಆಯ್ದ ಪ್ರಶ್ನೆಗಳು ಮತ್ತು ಹಿರಿಯ ಅಂಚೆ ಅಧೀಕ್ಷಕರು ನೀಡಿದ ಉತ್ತರಗಳು ಇಲ್ಲಿವೆ..

l10 ವರ್ಷ ಆಗಿರುವ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಲು ಹೇಳಿದ್ದಾರೆ. ಹಿರಿಯ ನಾಗರಿಕರಿಗೆ ಅಂಚೆ ಕಚೇರಿಗೆ ಬರುವುದು ಕಷ್ಟವಾಗುತ್ತದೆ. – ಪ್ರಕಾಶ್‌ ಪಡಿಯಾರ್‌ ಮರವಂತೆ

– ಸರ್ಕಾರ ಅಪ್‌ಡೇಟ್ ಮಾಡಲು ಹೇಳಿದ್ದು ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ. ಆದರೆ, ಇದು ಕಡ್ಡಾಯವಲ್ಲ ಎಂತಲೂ ಹೇಳಲಾಗಿದೆ.
ಆಸಕ್ತರು ಅಪ್‌ಡೇಟ್ ಮಾಡಿಸಬಹುದು. ಆನ್‌ಲೈನ್‌ನಲ್ಲೂ ಆಧಾರ್ ಅಪ್‌ಡೇಟ್, ತಿದ್ದುಪಡಿಗೆ ಅವಕಾಶ ಇದೆ.

lಅಶೋಕನಗರ, ಬಿಜೈ ಅಂಚೆ ಕಚೇರಿಗಳಲ್ಲಿ ಉತ್ತಮ ಸೇವೆ ದೊರೆಯುತ್ತಿಲ್ಲ. ಸಿಬ್ಬಂದಿ ವರ್ತನೆ ಕೂಡ ಗ್ರಾಹಕರಿಗೆ ಬೇಸರ ತರುವಂತಿದೆ.

ರವಿಕುಮಾರ್, ಮಂಗಳೂರು

– ಈ ವಿಷಯವನ್ನು ಪರಿಶೀಲಿಸುತ್ತೇನೆ. ಕಚೇರಿಯಲ್ಲಿ ಸಿಬ್ಬಂದಿ ಗ್ರಾಹಕರಿಗೆ ಸರಿಯಾಗಿ ಸ್ಪಂದಿಸದ್ದರೆ, ಪ್ರತಿ ಅಂಚೆ ಕಚೇರಿಯ ಗೋಡೆಯ ಮೇಲೆ ಹಿರಿಯ ಅಂಚೆ ಅಧೀಕ್ಷಕರು, ಅಧಿಕಾರಿಗಳ ಮೊಬೈಲ್ ಫೋನ್ ಸಂಖ್ಯೆ ಇರುತ್ತದೆ. ಕರೆ ಮಾಡಿ ಮಾಹಿತಿ ನೀಡಬಹುದು.

lಪಂಪ್‌ವೆಲ್ ಮತ್ತು ಕಂಕನಾಡಿ ನಡುವೆ ಅಂಚೆ ಇಲಾಖೆಯ ಜಾಗ ಇದ್ದು, ಅದು ನಿರುಪಯುಕ್ತವಾಗಿದೆ. ಜನರಿಗೆ ಅನುಕೂಲವಾಗುವಂತೆ ಇಲ್ಲಿ ಅಂಚೆ ಕಚೇರಿ ಪ್ರಾರಂಭಿಸಬಹುದು. ಅಂಚೆ ಇಲಾಖೆಯಲ್ಲಿ ಅನೇಕ ಉತ್ತಮ ಯೋಜನೆಗಳು ಇದ್ದರೂ, ಜನರಿಗೆ ಸರಿಯಾಗಿ ತಲುಪುತ್ತಿಲ್ಲ. ಅಂಚೆಯಣ್ಣಂದಿರ ಮೂಲಕ ಜನರಿಗೆ ಇವುಗಳ ಮಾಹಿತಿ ನೀಡಬಹುದು.

– ಜಿ.ಕೆ.ಭಟ್, ಸಾಮಾಜಿಕ ಕಾರ್ಯಕರ್ತ

– ಅಂಚೆ ಕಚೇರಿ ತೆರೆಯಲು ಇಲಾಖೆಯ ಮಾನದಂಡ ಇರುತ್ತದೆ. ಅದನ್ನು ಪಾಲಿಸಬೇಕಾಗುತ್ತದೆ. ಇಲ್ಲಿನವರಿಗೆ ಜೆಪ್ಪು ಅಂಚೆ ಕಚೇರಿ ವ್ಯಾಪ್ತಿಗೆ ಈ ಪ್ರದೇಶ ಒಳಪಡುತ್ತದೆ. ಜನರ ಮನೆಬಾಗಿಲಿಗೆ ಯೋಜನೆ ತಲುಪಿಸುವ ಸಲಹೆ ಉತ್ತಮವಾಗಿದ್ದು, ಪರಿಶೀಲಿಸುತ್ತೇವೆ.

lಅಂಚೆ ಇಲಾಖೆಯ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಲು ಯಾವುದೇ ಕೈಪಿಡಿ ಇಲ್ಲ. ಅಂತರ್ಜಾಲದ ಮೂಲಕವಾದರೂ ತಲುಪಿಸಬೇಕು. ಕರ್ನಾಟಕದಲ್ಲಿ ಈ ಮಾಹಿತಿ ಕನ್ನಡದಲ್ಲಿ ಲಭ್ಯವಾಗಬೇಕು.

ಅಮೃತ್ ಪ್ರಭು, ಹೋರಾಟಗಾರ

–ಅಂಚೆ ಇಲಾಖೆಯ ಎಲ್ಲ ಮಾಹಿತಿಗಳನ್ನು ಗೂಗಲ್‌ನಲ್ಲಿ ಅಪ್‌ಡೇಟ್ ಮಾಡಲಾಗಿದೆ. ಅಲ್ಲಿ ಎಲ್ಲ ವಿವರ ಲಭ್ಯವಾಗುತ್ತದೆ. ಕನ್ನಡದಲ್ಲಿ ಲಭ್ಯವಾಗುವಂತೆ ಮಾಡಲು ಕ್ರಮವಹಿಸಲಾಗುವುದು.

lಅಂಚೆ ಇಲಾಖೆಯಲ್ಲಿನ ನೇಮಕಾತಿ ಬಗ್ಗೆ ಮಾಹಿತಿ ಬೇಕಿತ್ತು.

ದಿನೇಶ್ ಉಡುಪಿ, ಮೊಹಮ್ಮದ್‌ ಅಶ್ರಫ್ ಹಾಗೂ ಸ್ವಾತಿ ಕೊಣಾಜೆ

– ಈಗಾಗಲೇ ಪತ್ರಿಕೆಗಳಲ್ಲಿ ಈ ಮಾಹಿತಿ ಪ್ರಕಟವಾಗಿದೆ. ಮಂಗಳೂರು ಅಂಚೆ ಇಲಾಖೆ ಫೇಸ್‌ಬುಕ್ ಪುಟದಲ್ಲಿ ನೇಮಕಾತಿಯ ವಿವರ ಮಾಹಿತಿ ಇದೆ. ಎಸ್ಸೆಸ್ಸೆಲ್ಸಿ ಅಂಕದ ಆಧಾರದಲ್ಲಿ ಪಾರದರ್ಶಕವಾಗಿ ನೇಮಕಾತಿ ನಡೆಯುತ್ತದೆ.

lಅಂಚೆ ಇಲಾಖೆಯಲ್ಲಿ ಲಭ್ಯವಿರುವ ಉಳಿತಾಯ ಖಾತೆಗಳ ಬಗ್ಗೆ ತಿಳಿಸಬಹುದೇ?

ರೇಷ್ಮಾ ಬೆಂದೂರ್‌ವೆಲ್

–ಅಂಚೆ ಇಲಾಖೆಯಲ್ಲಿ ಎಲ್ಲ ವಯೋಮಾನದವರಿಗೆ ಬೇಕಾದ ಉಳಿತಾಯ ಯೋಜನೆಗಳು ಇವೆ. ಉಳಿತಾಯ ಖಾತೆ, ಆರ್‌ಡಿ, ತಿಂಗಳ ಆದಾಯ ಯೋಜನೆ, ಠೇವಣಿ ಯೋಜನೆಗಳಿಗೆ ಆಕರ್ಷಕ ಬಡ್ಡಿದರವೂ ಇದೆ. ಐಎಫ್‌ಎಸ್‌ಸಿ ಕೋಡ್ ಸೌಲಭ್ಯ, ಆಧಾರ್ ಸೀಲಿಂಗ್, ನೇರ ನಗದು ವರ್ಗಾವಣೆ ಸೌಲಭ್ಯವನ್ನು ಅಂಚೆ ಉಳಿತಾಯ ಖಾತೆಗಳು ಪಡೆದುಕೊಂಡಿವೆ. ಸಣ್ಣ ಅಂಚೆ ಕಚೇರಿಗೆ ಭೇಟಿ ನೀಡಿ ಕೂಡ ಖಾತೆ ತೆರೆಯಬಹುದು.

lಅಂಚೆ ಇಲಾಖೆಯ ವಿಮಾ ಸೌಲಭ್ಯಗಳಿಂದ ಸಿಗುವ ಲಾಭಗಳೇನು?

ಉಮೇಶ್ ಪೂಜಾರಿ

– ಅಂಚೆ ಇಲಾಖೆಯಲ್ಲಿ ಜೀವ ವಿಮೆ, ಅಪಘಾತ ವಿಮೆ ಸೌಲಭ್ಯಗಳು ಇವೆ. ಕಡಿಮೆ ಕಂತು ಪಾವತಿಸಿ ಹೆಚ್ಚು ವಿಮಾ ಮೊತ್ತ ಪಡೆಯಬಹುದು.

ಅಶಕ್ತರು, ಹಿರಿಯ ನಾಗರಿಕರು ಮನೆಯಲ್ಲೇ ಕುಳಿತು ಅಂಚೆಯಣ್ಣನ ಮೂಲಕ ತಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಪಡೆಯುವ ಸೌಲಭ್ಯ ಅಂಚೆ ಇಲಾಖೆಯಲ್ಲಿದ್ದು, ಹಲವರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಇನ್ನೊಂದು ಹೆಜ್ಜೆ ಮುಂದಿಟ್ಟಿರುವ ಅಂಚೆ ಮಂಗಳೂರು ವಿಭಾಗವು ಸಾಮಾಜಿಕ ಭದ್ರತಾ ಪಿಂಚಣಿ ಹಣವನ್ನು ಫಲಾನುಭವಿಗಳ ಮನೆಗೆ ತಲುಪಿಸಲು ಯೋಜನೆ ರೂಪಿಸಿದೆ. ಈ ಸೌಲಭ್ಯ ಪಡೆಯಲು ಇಚ್ಛಿಸುವವರು ಅಂಚೆ ಇಲಾಖೆಗೆ ಅರ್ಜಿ ಸಲ್ಲಿಸಬಹುದು. ಫಲಾನುಭವಿ ಖಾತೆಗೆ ಜಮಾ ಆಗುವ ಮೊತ್ತವನ್ನು ಮನಿಯಾರ್ಡರ್ ಮೂಲಕ ಪಡೆದು, ಇದಕ್ಕೆ ತಗಲುವ ವೆಚ್ಚವನ್ನು ಕಡಿತಗೊಳಿಸಿ, ಫಲಾನುಭವಿಗೆ ಅಂಚೆಯಣ್ಣನ ಮೂಲಕ ತಲುಪಿಸಲಾಗುತ್ತದೆ ಎಂದು ಶ್ರೀಹರ್ಷ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT