ಭಾನುವಾರ, ಜನವರಿ 19, 2020
26 °C
ಬದುಕು ಕಟ್ಟಿಕೊಟ್ಟ ಕುಕ್ಕುಟೋದ್ಯಮ

ಕರಾವಳಿ: 'ಕಾಡಾ' ಕೋಳಿ ಸಾಕಣೆ ಯಶ ಕಂಡ ತೋಮಸ್

ಕಿರಣ್ ಕಡಬ Updated:

ಅಕ್ಷರ ಗಾತ್ರ : | |

Prajavani

ಕೃಷಿಕಾಯಕದಲ್ಲಿ ನಿರತರಾದ ಹಲವಾರು ಕೃಷಿಕರು ಉಪಕಸುಬಾಗಿ ಕೋಳಿ ಸಾಕಾಣೆಯನ್ನು ಲಾಭದಾಯಕ ಉದ್ಯಮವಾಗಿ ಕಂಡುಕೊಂಡಿದ್ದಾರೆ. ನಾಟಿಕೋಳಿ, ಬಾಯ್ಲರ್, ಟೈಸನ್, ಗಿರಿರಾಜ ಕೋಳಿಯಲ್ಲಿರುವ ವಿಧಗಳು. ಪ್ರತಿ ತಳಿಗಳಿಗೂ ಅದರದೆ ಆದ ಸಾಕಾಣಿಕ ಪದ್ಧತಿಗಳಿವೆ. ಇಲ್ಲೊಬ್ಬ ರೈತ ಇತರ ಕೃಷಿ ಚಟುವಟಿಕೆಗಳೊಂದಿಗೆ ‘ಕಾಡಾ’ ಕೋಳಿ ಸಾಕಾಣಿಕೆಯಲ್ಲಿ ಸೈ ಎನಿಸಿಕೊಂಡಿದ್ದಾರೆ.

ಕೃಷಿಯಲ್ಲಿ ಮಿಶ್ರಬೆಳೆ ಬೆಳೆದರೆ ಮಾತ್ರ ಜೀವನ ಹಸನಾಗುತ್ತದೆ ಎಂದು ನಂಬಿರುವ ಬೆತ್ತೋಡಿಯ ಕೆ. ತೋಮಸ್ ಇತರ ವ್ಯವಹಾರದೊಂದಿಗೆ ಕೋಳಿಸಾಕಾಣಿಕೆ ಮಾಡಿಕೊಂಡಿದ್ದಾರೆ.

ಕರಾವಳಿಯಲ್ಲಿ ನಾಟಿಕೋಳಿಗೆ ಪರ್ಯಾಯವಾಗಿ ಬಂದಿರುವ ಕಾಡಾ ಕೋಳಿಯನ್ನು ಕೇರಳಕ್ಕೆ ಹೋದಾಗ ನೋಡಿ ತಾವು ಈ ಕೋಳಿ ಸಾಕಾಣೆ ಮಾಡಬೇಕೆಂದು 100 ಕೋಳಿಗಳನ್ನು ತಂದರು. ಪ್ರಸ್ತುತ ಇವರ ಬಳಿ 600 ಕೋಳಿಗಳಿವೆ.

ಕಾಡಾ ಕೋಳಿ ಹೆಚ್ಚಾಗಿ ಕೇರಳದಲ್ಲಿ ಸಾಕಣೆ ಮಾಡುವ ಕಾಡು ಕೋಳಿ ಜಾತಿಗೆ ಸೇರಿದ ಹಕ್ಕಿಯಾಗಿದೆ. ನಾಟಿಕೋಳಿಗಿಂತ ಗಾತ್ರದಲ್ಲಿ ಗಿಡ್ಡ ಹಾಗೂ ಕಾಡು ಕೋಳಿಗಿಂತ ತುಸು ಎತ್ತರ ಇರುವ ಕಾಡಾ ತೂಕ ಕಡಿಮೆ ಇದ್ದರೂ ಭಾರಿ ರುಚಿಕರ ಎಂದು ಹೇಳಲಾಗುತ್ತದೆ.

ಒಂದು ಕೋಳಿ ಸರಾಸರಿ 250 ಗ್ರಾಂ. ನಿಂದ 400 ಗ್ರಾಂ ವರೆಗೆ ತೂಕ ಬರುತ್ತದೆ. ಕಾಡಾ ಮಾಂಸದಲ್ಲಿ ಹೆಚ್ಚು ಪ್ರೋಟಿನ್ ಇದ್ದು ರುಚಿಕರ ಮತ್ತು ಪೌಷ್ಟಿಕಾಂಶವಿದೆ. ಇದಕ್ಕೆ ಯಾವುದೇ ರೀತಿಯ ರೋಗ ನಿರೋಧಕ ಚುಚ್ಚುಮದ್ದು ಅಥವಾ ಔಷಧಿ ನೀಡುವ ಅಗತ್ಯವಿಲ್ಲದಿರುವುದರಿಂದ ಸಾಕಾಣಿಕ ವೆಚ್ಚ ಕೂಡ ತೀರ ಕಡಿಮೆ.

ಹಲವು ರೋಗಗಳಿಗೆ ದಿವ್ಯ ಔಷಧ ಕಾಡಾ ಮೊಟ್ಟೆ ಕಾಡಾ ಕೋಳಿಯ ಮಾಂಸಕ್ಕಿಂತಲೂ ಇದರ ಮೊಟ್ಟೆಗೆ ಬಹಳ ಬೇಡಿಕೆ. ಕಾರಣ ಇದರಲ್ಲಿರುವ ಔಷಧೀಯ ಗುಣಗಳು. ಕೋಳಿಯು 45 ದಿನಗಳಲ್ಲಿ ಮೊಟ್ಟೆ ಇಡಲು ಪ್ರಾರಂಭ ಮಾಡುತ್ತದೆ. ಪ್ರತಿದಿನ ಮೊಟ್ಟೆ ಇಡುತ್ತದೆ. ಮೊಟ್ಟೆ ಇಟ್ಟ 16 ದಿನಗಳಲ್ಲಿ ಒಡೆದು ಮರಿಯಾಗುತ್ತದೆ. ಇದು ಸಂಜೆಯ ಹೊತ್ತಲ್ಲಿ ಮೊಟ್ಟೆಯನ್ನಿಡುತ್ತದೆ. ಮೊಟ್ಟೆಯೊಂದಕ್ಕೆ ಎರಡು ರೂಪಾಯಿಯಿಂದ ಮೂರು ರೂಪಾಯಿಗಳವರೆಗೂ ಮಾರಾಟವಾಗುತ್ತದೆ. ಮೊಟ್ಟೆಯು ಉಬ್ಬಸ, ಕ್ಷಯ, ಕೆಮ್ಮು, ಹಸಿವಿಲ್ಲದಿರುವ ಕಾಯಿಲೆಗಳಿಗೆ ಅತ್ಯುತ್ತಮ ಎನ್ನುತ್ತಾರೆ. ಕಾಡಾ ಮೊಟ್ಟೆ ಯೌವ್ವನ ಮರುಕಳಿಸುದರೊಂದಿಗೆ ಶರೀರದ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಉತ್ಸಾಹವನ್ನು ತುಂಬುತ್ತದೆ. ಜೊತೆಗೆ ಮಕ್ಕಳ ಬುದ್ಧಿ ವಿಕಾಸಕ್ಕೆ ಮತ್ತು ಮೂಲವ್ಯಾಧಿ ರೋಗಕ್ಕೆ ಕಾಡಾ ಮೊಟ್ಟೆ ಔಷಧಿಯಾಗಿದೆ. ಇದರೊಂದಿಗೆ ಮಕ್ಕಳ ಬೆಳವಣಿಗೆಗೆ ಅತ್ಯುತ್ತಮವಾದ ಲೈಸಿವ್ ಮೆಥಯೋನಿಲ್ ಎಂಬೀ ಅಮಿನೋ ಏಸಿಡ್‍ಗಳು ಕಾಡಾ ಮೊಟ್ಟೆಯಲ್ಲಿ ಅಡಕವಾಗಿದೆ. ಹಾಗಾಗಿ ಮೊಟ್ಟೆಗೆ ಹೆಚ್ಚು ಬೇಡಿಕೆಯಿದೆ.

ಸಾಕಾಣೆ ಹೇಗೆ?: 5 ಅಡಿ ಉದ್ದ ಮತ್ತು 2 ಅಡಿ ಅಗಲದ ಕಬ್ಬಿಣದ ನೆಟ್ ಅಡಿಗೆ ಅರ್ಧ ಇಂಚಿನ ರೋಟಿಂಗ್ ನೆಟ್ ಅಳವಡಿಸಿ ಗೂಡನ್ನು ತಯಾರು ಮಾಡಿ ಒಂದು ಗೂಡಿನಲ್ಲಿ 50 ಕೋಳಿಗಳನ್ನು ಸಾಕಬಹುದಾದ ಸಾಮಾರ್ಥ್ಯವಿದೆ. ಸಾಕಷ್ಟು ಬೆಳಕು ಮತ್ತು ಸಮರ್ಪಕವಾದ ನೀರಿನ ವ್ಯವಸ್ಥೆಯನ್ನು ಪೈಪ್‍ನ ಮುಖಾಂತರ ಅಳವಡಿಸಿದ್ದಾರೆ.

ಆಧುನಿಕ ಯಂತ್ರದ ಬಳಕೆ: ಕಾಡಾ ಕೋಳಿಯ ಮೊಟ್ಟೆಯನ್ನು ಒಡೆಸಲು ಆಧುನಿಕ ಇಂಕ್‌ಪೆಟರ್ ಮಿಷಿನ್‍ ಅನ್ನು ಬಳಸಲಾಗುತ್ತಿದೆ. ಇದು ಒಂದೇ ಬಾರಿ 400 ಮೊಟ್ಟೆಯನ್ನು ಒಡೆಸಿಕೊಡುವ ಸಾಮಾರ್ಥ್ಯವನ್ನು ಹೊಂದಿದೆ.

ಬೆಳ್ಳಾರೆ, ಕಡಬ, ಗುತ್ತಿಗಾರು ಪಂಜ, ನೆಲ್ಯಾಡಿ ಹಾಗೂ ಆಸುಪಾಸಿನಲ್ಲಿ ಬೇಡಿಕೆಗೆ ತಕ್ಕಂತೆ ಮೊಟ್ಟೆ ಹಾಗೂ ಕೋಳಿಗಳನ್ನು ಮಾರಾಟ ಮಾಡುತ್ತಾರೆ. ಕೋಳಿ ಒಂದಕ್ಕೆ ₹ 50 ರಿಂದ ₹60 ಇದೆ. ಪ್ರಸ್ತುತ ಬೇಡಿಕೆ ಇದ್ದರೂ ಕೂಡ ಇನ್ನು ಪ್ರಚಾರ ಕಾಣಬೇಕಾಗಿದೆ. ಭವಿಷ್ಯದಲ್ಲಿ ಉತ್ತಮ ಉದ್ಯಮವಾಗಿಸಬಹುದು ಎನ್ನುತ್ತಾರೆ ತೋಮಸ್.ಕೆ

ತಮ್ಮಲ್ಲಿರುವ 3 ಎಕ್ರೆ ಭೂಮಿಯಲ್ಲಿ ಕಾಳು ಮೆಣಸು, ವೀಳ್ಯದೆಲೆ, ಬಾಳೆಗಿಡ, ಅಡಿಕೆ, ರಬ್ಬರ್, ಮೀನುಗಾರಿಕೆ, ಕೋಳಿ ಸಾಕಾಣೆ ಹೀಗೆ ಮಿಶ್ರ ಬೆಳೆ ಬೆಳೆದಿದ್ದಾರೆ. ತಮ್ಮಲ್ಲಿ ಬೆಳೆಯುವ ಎಲ್ಲಾ ಕೃಷಿಯಲ್ಲೂ ಒಂದೊಂದು ವಿಶಿಷ್ಟತೆಯನ್ನು ಕಂಡುಕೊಂಡಿರುವ ಇವರು ಕಾಳು ಮೆಣಸಿನಲ್ಲಿರುವ ವಿಶಿಷ್ಟ ತಳಿ ಕೇರಳ ಮೂಲದ ಪೇಪ್ಪರ್ ತೆಕ್ಕನ್ ಬೆಳೆಸಿ ಯಶಕಂಡಿದ್ದಾರೆ.

ಇದರೊಂದಿಗೆ ವಿವಿಧ ತಳಿಯ ಬಾಳೆಗಿಡ ಮತ್ತು ಅಡಿಕೆ ಗಿಡವನ್ನು ತಮ್ಮ ಮನೆಯಂಗಳದ ಪುಟ್ಟ ನರ್ಸರಿಯಲ್ಲಿ ಬೆಳೆಸಿ ಮಾರಾಟ ಮಾಡುತ್ತಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು