ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾ ಪ್ರಕರಣ: ರಾಜೀನಾಮೆ ನೀಡಲು ಪ್ರತಾಪಸಿಂಹ ಆಗ್ರಹ

ಸಿದ್ದರಾಮಯ್ಯರ ಸ್ವಯಂಕೃತ ಅಪರಾಧ
Published : 24 ಸೆಪ್ಟೆಂಬರ್ 2024, 13:44 IST
Last Updated : 24 ಸೆಪ್ಟೆಂಬರ್ 2024, 13:44 IST
ಫಾಲೋ ಮಾಡಿ
Comments

ಪುತ್ತೂರು: ಮುಡಾ ನಿವೇಶನ ಹಂಚಿಕೆಗೆ ಸಂಬಂಧಿಸಿ ತನಿಖೆಗೆ ರಾಜ್ಯಪಾಲರು ನೀಡಿರುವ ಅನುಮತಿಯನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ. ಪ್ರಕರಣವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಯಂಕೃತ ಅಪರಾಧವಾಗಿದ್ದು, ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಮೇಲ್ಪಂಕ್ತಿ ಹಾಕಬೇಕು ಎಂದು ಮೈಸೂರಿನ ಮಾಜಿ ಸಂಸದ ಪ್ರತಾಪಸಿಂಹ ಆಗ್ರಹಿಸಿದರು.

ಪುತ್ತೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪತ್ನಿ ಹೆಸರಲ್ಲಿ ಮಾಡಿದ 14 ಸೈಟ್‌ಗಳನ್ನು ಸರ್ಕಾರಕ್ಕೆ ಹಸ್ತಾಂತರಿಸಿ ಎಂದು ಹೇಳಿದ್ದೆ. ಆದರೆ, ಅವರು ನನ್ನ ಸಲಹೆಯನ್ನ ಕೇಳಿಲ್ಲ. ಬದಲಾಗಿ ತಿಳಿಗೇಡಿಗಳ ಸಲಹೆಯನ್ನು ನೆಚ್ಚಿಕೊಂಡರು. ಹಾಗಾಗಿ ಅವರಿಗೆ ಈ ಪರಿಸ್ಥಿತಿ ಬಂದಿದೆ. ಅವರು ಅಂದೇ ಆ ಸೈಟ್‌ಗಳನ್ನು ಹಸ್ತಾಂತರಿಸುತ್ತಿದ್ದರೆ ಎಲ್ಲ ಪಕ್ಷಗಳ ಎಲ್ಲ ಕಳ್ಳರೂ ಸಿಕ್ಕಿ ಹಾಕಿಕೊಳ್ಳುತ್ತಿದ್ದರು. ಜತೆಗೆ ಸಿದ್ದರಾಮಯ್ಯ ಅವರ ಸಿಎಂ ಸ್ಥಾನವೂ ಉಳಿಯುತ್ತಿತ್ತು. ಕಳಂಕ ಮುಕ್ತರಾಗುತ್ತಿದ್ದರು. ಈಗ ಮುಖ್ಯಮಂತ್ರಿ ಸ್ಥಾನವನ್ನೇ ಬಿಟ್ಟು ಕೊಡಬೇಕಾದ ಪರಿಸ್ಥಿತಿ ಬಂದಿದೆ. ವಿಳಂಬ ಮಾಡದೆ ರಾಜೀನಾಮೆ ಕೊಡಿ’ ಎಂದರು.

‘ನಿಮ್ಮನ್ನು ನಾವು ಸೈದ್ಧಾಂತಿಕವಾಗಿ ವಿರೋಧಿಸುತ್ತೇವೆ. ನಿಮ್ಮ ಬಡವರ ಪರ ಕಾಳಜಿಯನ್ನ ಮೆಚ್ಚಿಕೊಂಡಿದ್ದೇವೆ. ನೀವು ಕಳಪೆ ರಾಜಕಾರಣಿಗಳನ್ನು ಅನುಸರಿಸಬೇಡಿ. ನೈತಿಕ ಹೊಣೆಹೊತ್ತು ರಾಜೀನಾಮೆ ಕೊಡಿ. ನಿಮ್ಮ ಮೇಲಿರುವ ಹಗರಣದ ತನಿಖೆ ಆಗಲಿ. ತನಿಖೆ ಮುಗಿದ ಬಳಿಕ ಮತ್ತೆ ಮುಖ್ಯಮಂತ್ರಿ ಆಗುವ ಅವಕಾಶವೂ ಇದೆ. ಹಾಗೇ ಮಾಡದೇ ಇದ್ದರೆ ನಿಮ್ಮ 45 ವರ್ಷದ ರಾಜಕಾರಣ ಕಳಂಕಯುತ ಅಂತ್ಯಕ್ಕೆ ನಾಂದಿ ಹಾಡಲಿದೆ’ ಎಂದರು.

‘ರಾಜಕಾರಣದಲ್ಲಿ ಶತ್ರುಗಳು ಅಕ್ಕಪಕ್ಕದಲ್ಲಿರುತ್ತಾರೆ. ಸಂಸದನಾಗಿ ನನಗೂ ಅದರ ಅನುಭವ ಇದೆ. ನಿಮ್ಮ ಶತ್ರುಗಳು ನಿಮ್ಮ ಅಕ್ಕಪಕ್ಕದಲ್ಲೇ ಇದ್ದಾರೆ. ಬಿಜೆಪಿ-ಜೆಡಿಎಸ್‌ನಲ್ಲಿ ಶತ್ರುತ್ವ ಇಲ್ಲ; ಕಾಂಗ್ರೆಸ್‌ನಲ್ಲಿದೆ. ನಿಮ್ಮ ಜೊತೆ ನಾವಿದ್ದೇವೆ ಅನ್ನುವವರನ್ನು ನಂಬಬೇಡಿ. ಅವರೆಲ್ಲರಿಗಿಂತಲೂ ನೀವು ಉತ್ತಮ ರಾಜಕೀಯ ನಡೆಸಿದವರು. ರಾಜೀನಾಮೆ ಕೊಡಿ’ ಎಂದು ಅವರು ಒತ್ತಾಯಿಸಿದರು.

‘ನ್ಯಾಯಾಲಯದ ತೀರ್ಪಿಗೆ ತಲೆಬಾಗಿ ರಾಜೀನಾಮೆ ನೀಡಿ’

ಪುತ್ತೂರು: ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿರುವುದು ಸ್ವಾಗತಾರ್ಹ. ಹಿಂದುಳಿದ ವರ್ಗದ ಹೆಸರು ಹೇಳಿಕೊಂಡು ರಕ್ಷಣೆ ಪಡೆಯುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ಪ್ರಕರಣದಿಂದ ಹಿಂದುಳಿದ ವರ್ಗ ತಲೆತಗ್ಗಿಸುವಂತಾಗಿದೆ ಎಂದು ಬಿಜೆಪಿ ಹಿಂದುಳಿದ ಮೋರ್ಚಾದ ರಾಜ್ಯ ಘಟಕದ ಕಾರ್ಯದರ್ಶಿ ಆರ್.ಸಿ.ನಾರಾಯಣ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ರಾಜ್ಯಪಾಲರ ಮೇಲೆ ಕೀಳು ಮಟ್ಟದ ರಾಜಕೀಯಕ್ಕೆ ಮುಂದಾಗಿದ್ದರು. ಆದರೆ, ನ್ಯಾಯಾಲಯ ರಾಜ್ಯಪಾಲರ ನಡೆಯನ್ನು ಎತ್ತಿ ಹಿಡಿದು, ಭ್ರಷ್ಟರಿಗೆ ಭಾರತದಲ್ಲಿ ಜಾಗವಿಲ್ಲ ಎಂಬುದನ್ನು ಪುನರುಚ್ಚರಿಸಿದೆ ಎಂದು ಪ್ರತಿಕ್ರಿಯಿಸಿದರು.

ನ್ಯಾಯಾಲಯದ ತೀರ್ಪಿಗೆ ತಲೆಬಾಗಿ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT