ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ಯಾರಂಟಿ ಅನುಷ್ಠಾನ ಸಮಿತಿ ಕಾರ್ಯಕರ್ತರ ಸಾಕುವ ವೇದಿಕೆ: ಪ್ರತಾಪಸಿಂಹ ನಾಯಕ್

Published 28 ಆಗಸ್ಟ್ 2024, 9:56 IST
Last Updated 28 ಆಗಸ್ಟ್ 2024, 9:56 IST
ಅಕ್ಷರ ಗಾತ್ರ

ಮಂಗಳೂರು: ‘ದಿವಾಳಿ ಸ್ಥಿತಿಗೆ ತಲುಪಿರುವ ರಾಜ್ಯ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಪ್ರತ್ಯೇಕ ಸಮಿತಿ ರಚಿಸಿ, ಅವರಿಗೆ ಗೌರವಧನ ನೀಡುವ ಮೂಲಕ ಜನರ ಹಣವನ್ನು ಪೋಲು ಮಾಡುತ್ತಿದೆ’ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಆರೋಪಿಸಿದರು.‌

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಜಿಲ್ಲಾ ಮಟ್ಟದ ಸಮಿತಿಗೆ 21 ಸದಸ್ಯರನ್ನು ನೇಮಕ ಮಾಡಲಾಗಿದೆ. ಸಮಿತಿಯ ರಾಜ್ಯ ಅಧ್ಯಕ್ಷರಿಗೆ ಸಂಪುಟ ದರ್ಜೆಯ ಸ್ಥಾನ ಮಾನ ನೀಡಲಾಗಿದೆ. ಜಿಲ್ಲಾಧ್ಯಕ್ಷರಿಗೆ ತಿಂಗಳಿಗೆ ₹40 ಸಾವಿರ ಗೌರವಧನ, ಉಪಾಧ್ಯಕ್ಷರಿಗೆ ₹1,500, ಪ್ರತಿ ಸಭೆಗೆ ಸದಸ್ಯರಿಗೆ ₹1,100 ಗೌರವಧನ ನಿಗದಿಪಡಿಸಿದೆ.‌ ಇದೇ ರೀತಿ ಪ್ರತಿ ತಾಲ್ಲೂಕು ಮಟ್ಟದಲ್ಲಿ ಸಮಿತಿ ರಚಿಸಲಾಗಿದ್ದು, ತಾಲ್ಲೂಕು‌ ಸಮಿತಿ ಅಧ್ಯಕ್ಷರಿಗೆ ತಿಂಗಳಿಗೆ ₹25 ಸಾವಿರ ಗೌರವಧನ, ಸದಸ್ಯರಿಗೆ‌ ಪ್ರತಿ ಸಭೆಯ ಹಾಜರಾತಿಗೆ ಗೌರವಧನ ನಿಗದಿಪಡಿಸಲಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲದಿರುವಾಗ, ಗ್ಯಾರಂಟಿ ಯೋಜನೆಗಳ ಹಣ ಪಾವತಿಯೇ ಬಾಕಿ ಇರುವಾಗ ಈ ರೀತಿ ಜನರ ದುಡ್ಡನ್ನು ಪೋಲು ಮಾಡುತ್ತಿದ್ದು, ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ‌ ಎಂಬಂತಾಗಿದೆ. ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರಿ ವ್ಯವಸ್ಥೆ ಇರುವಾಗ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದಿತ್ತು. ಬದಲಾಗಿ ಗ್ಯಾರಂಟಿ ಅನುಷ್ಠಾನ ಸಮಿತಿ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಸಾಕುವ ವೇದಿಕೆ ಸೃಷ್ಟಿಸಲಾಗಿದೆ’ ಎಂದು ಆರೋಪಿಸಿದರು.

‘ಮೈಸೂರು ಮುಡಾ ಹಗರಣ ನಿರ್ಣಾಯಕ ಹಂತ ತಲುಪಿದ್ದು, ಮುಖ್ಯಮಂತ್ರಿಗೆ ಅಸ್ಥಿರತೆ ಕಾಡುತ್ತಿದೆ. ಜಾತಿ, ಮಠಾಧೀಶರ ಆಶ್ರಯ ಪಡೆಯುತ್ತಿರುವುದನ್ನು ನೋಡಿದರೆ ಅವರ ಹತಾಶೆಯ ಮನಃಸ್ಥಿತಿ ಅರ್ಥವಾಗುತ್ತದೆ. ಕಾಂಗ್ರೆಸ್ ಶಾಸಕರು, ಸಚಿವರು ಮುಖ್ಯಮಂತ್ರಿಗೆ ಬೆಂಬಲ ನೀಡುವ ನಾಟಕ ಮಾಡಿ, ಮುಂದೆ ಸರ್ಕಾರ ಬದಲಾದಲ್ಲಿ, ತಮಗೆ ಬೇಕಾಗಿರುವ ಖಾತೆ ಪಡೆಯುವ‌ ದೂರದೃಷ್ಟಿ ಇಟ್ಟುಕೊಂಡು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ’ ಎಂದರು.

‘ರಾಜ್ಯದಲ್ಲಿ ಜನಪರ ಆಡಳಿತ ಸ್ಥಗಿತಗೊಂಡಿದ್ದು, ಸರ್ಕಾರ ಕೋಮಾ ಸ್ಥಿತಿಯಲ್ಲಿದೆ.‌ ಗ್ಯಾರಂಟಿ ಯೋಜನೆಗಳ ಹೊಡೆತದಲ್ಲಿ ಜನರಿಗೆ ನೆರೆ, ಬರ ಪರಿಹಾರ ದೊರೆಯುತ್ತಿಲ್ಲ. ಶಕ್ತಿ ಯೋಜನೆಯ ಹಣ ಪಾವತಿ ₹4,500 ಕೂಡ ಇದ್ದು, ಕೆಎಸ್‌ಆರ್‌ಟಿಸಿ ಮುಚ್ಚುವ ಸ್ಥಿತಿಯಲ್ಲಿದೆ’ ಎಂದು ಹೇಳಿದರು.

‘ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ₹500 ಕೋಟಿ ಅನುದಾನ‌ ನೀಡುವುದಾಗಿ ಹೇಳಿದ್ದ ರಾಜ್ಯ ಸರ್ಕಾರ, ನಯಾಪೈಸೆ ನೀಡಿಲ್ಲ’ ಎಂದು ಆರೋಪಿಸಿದರು.

ಬಿಜೆಪಿ ಪ್ರಮುಖರಾದ ಸಂಜಯ ಪ್ರಭು, ಪ್ರಸನ್ನಕುಮಾರ್ ಮಾರ್ತಾ, ವಿಕಾಸ್ ಪುತ್ತೂರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT