ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವೀಣ್‌ ನೆಟ್ಟಾರು ಹತ್ಯೆ: ಸರ್ಕಾರದ ವಿರುದ್ಧ ಕೇಸರಿ ಪಡೆ ಕಿಡಿ

ಮೂರು ತಾಲ್ಲೂಕುಗಳು ಬಂದ್‌ l ಬಿಜೆಪಿ ಮುಖಂಡರಿಗೆ ತಟ್ಟಿದ ಪ್ರತಿಭಟನೆ ಬಿಸಿ
Last Updated 27 ಜುಲೈ 2022, 21:27 IST
ಅಕ್ಷರ ಗಾತ್ರ

ಸುಳ್ಯ/ಮಂಗಳೂರು: ಸಮೀಪದ ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚಾದ ಕಾರ್ಯಕಾರಿ ಸಮಿತಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆಯಿಂದಾಗಿ ಸಂಘ ಪರಿವಾರದ ಸಂಘಟನೆಗಳ ಹಾಗೂ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮದೇ ಪಕ್ಷ ಅಧಿಕಾರದಲ್ಲಿ ಇದ್ದರೂ ನಮಗೆ ರಕ್ಷಣೆ ಸಿಗುತ್ತಿಲ್ಲ. ಅಮಾಯಕ ಹಿಂದೂ ಯುವಕರ ಕೊಲೆ ನಿಲ್ಲುತ್ತಿಲ್ಲ’ ಎಂಬುದು ಅವರ ಸಿಟ್ಟಿಗೆ ಕಾರಣ. ಇದರ ಬೆನ್ನಿಗೇ ಬಿಜೆಪಿಯಲ್ಲಿ ರಾಜೀನಾಮೆ ಪರ್ವವೂ ಆರಂಭಗೊಂಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಯುವಕರು ಪಕ್ಷದ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.

ಪ್ರವೀಣ್ ನೆಟ್ಟಾರು
ಪ್ರವೀಣ್ ನೆಟ್ಟಾರು

‘ಇಂಥ ದುಷ್ಕೃತ್ಯಗಳಿಂದಾಗಿ ಜನಾಕ್ರೋಶ ಹೆಚ್ಚಾಗಿದ್ದು, ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುವ ಸ್ಥಿತಿ ತಲುಪುತ್ತಿರುವಂತೆ ಕಾಣುತ್ತಿದೆ’ ಎಂದು ಉಡುಪಿ ಪೇಜಾವರಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಬೆಳ್ಳಾರೆಯ ತಮ್ಮ ಕೋಳಿಮಾಂಸದ ಅಂಗಡಿಗೆ ಬಾಗಿಲು ಹಾಕುತ್ತಿದ್ದ ವೇಳೆ ಮಂಗಳವಾರ ರಾತ್ರಿ ಪ್ರವೀಣ್‌ (32) ಅವರನ್ನು ಹತ್ಯೆ ಮಾಡಲಾಗಿತ್ತು. ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ನಿಷೇಧಾಜ್ಞೆಯ ನಡುವೆಯೂ ಪ್ರವೀಣ್‌ ಅವರ ಪಾರ್ಥಿವ ಶರೀರವನ್ನು ಪುತ್ತೂರಿನ ಆಸ್ಪತ್ರೆಯಿಂದ ಬೆಳ್ಳಾರೆಯ ನೆಟ್ಟಾರುವಿನವರೆಗೆ ಸುಮಾರು 25 ಕಿ.ಮೀ. ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ದಕ್ಷಿಣ ಕನ್ನಡದ ಸಂಸದರೂ ಆಗಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್‌ ಕುಮಾರ್‌, ಸಚಿವ ಎಸ್‌.ಅಂಗಾರ ಹಾಗೂ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಪ್ರವೀಣ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಕಾರಿನಲ್ಲಿ ಬಂದು, ಇಳಿಯಲು ಮುಂದಾದಾಗ ಪಕ್ಷದ ಕಾರ್ಯಕರ್ತರ ತಾಳ್ಮೆಯ ಕಟ್ಟೆ ಒಡೆಯಿತು.

ತಂದೆಯಿಂದ ಅಗ್ನಿಸ್ಪರ್ಶ

ಪ್ರವೀಣ್‌ ಅವರ ಅಂತ್ಯಕ್ರಿಯೆ ನೆಟ್ಟಾರುವಿನಲ್ಲಿರುವ ಅವರ ಮನೆಯ ಸಮೀಪದ ಖಾಲಿ ಜಾಗದಲ್ಲಿ ನೆರವೇರಿತು. ಬಿಲ್ಲವ ಸಂಪ್ರದಾಯಗಳ ಪ್ರಕಾರ ಅಂತಿಮ ವಿಧಿಗಳನ್ನು ನೆರವೇರಿಸಲಾಯಿತು. ಪ್ರವೀಣ್‌ ಅವರ ತಂದೆ ಶೇಖರ ಪೂಜಾರಿ ಅವರು ಅಗ್ನಿಸ್ಪರ್ಶ ಮಾಡಿದರು. ಪ್ರವೀಣ್‌ ಅವರು ಮನೆ ನಿರ್ಮಿಸಲೆಂದು ಸಮತಟ್ಟು ಮಾಡಿದ್ದ ಜಾಗದಲ್ಲೇ ಅವರ ಅಂತ್ಯಕ್ರಿಯೆ ನಡೆಯಿತು.

‘ಹಂತಕರನ್ನು ಸದೆ ಬಡಿಯುತ್ತೇವೆ’

ಬೆಂಗಳೂರು: ‘ನಮ್ಮ ಪಕ್ಷದ ಕಾರ್ಯಕರ್ತ ಪ್ರವೀಣ್ ಅವರನ್ನು ಕೊಲೆ ಮಾಡಿದ ಹಂತಕರು ಎಲ್ಲೇ ಇದ್ದರೂ ಹಿಡಿದು ತಂದು ಸದೆ ಬಡಿಯುತ್ತೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ‘ಕೊಲೆಗಡುಕರು ಕೇರಳಕ್ಕೆ ಹೋಗಿದ್ದರೂ ಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು. ‘ನಮ್ಮ ಪೊಲೀಸರು ಕೇರಳ ರಾಜ್ಯದ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಮಂಗಳೂರು ಎಸ್ಪಿ ಕಾಸರಗೋಡು ಎಸ್ಪಿ ಜತೆ ಮಾತನಾಡಿದ್ದಾರೆ. ಅಲ್ಲದೆ, ನಮ್ಮ ಡಿಜಿಪಿ ಕೇರಳದ ಡಿಜಿಪಿ ಜತೆಗೆ ಮಾತನಾಡಿದ್ದಾರೆ. ಪೊಲೀಸರ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

‘ರಾತ್ರಿ ವೇಳೆ ಹಿಂಬದಿಯಿಂದ ಬಂದು ಮೋಸದಿಂದ ಕೊಲೆ ಮಾಡಿದ್ದಾರೆ. ಇದರ ಹಿಂದೆ ವ್ಯವಸ್ಥಿತ ಸಂಚು ಇದೆ. ಸಮಾಜದಲ್ಲಿ ಕ್ಷೋಭೆ ಉಂಟು ಮಾಡಬೇಕು ಎಂಬುದೇ ಅವರ ಉದ್ದೇಶ. ಆದರೆ, ಅವರಿಗೆ ಉಗ್ರ ಶಿಕ್ಷೆ ಕಾದಿದೆ. ಅಮಾಯಕ ಕಾರ್ಯಕರ್ತನ ಕೊಲೆ ಆಗಿರುವುದರಿಂದ ಕಾರ್ಯಕರ್ತರು ಸಹಜವಾಗಿ ಆಕ್ರೋಶಗೊಂಡಿದ್ದಾರೆ. ಎಲ್ಲರೂ ಸಂಯಮದಿಂದ ಇರಬೇಕು, ಶಾಂತಿ ಕಾಪಾಡಬೇಕೆಂದು ಮನವಿ ಮಾಡುತ್ತೇನೆ’ ಎಂದು ಬೊಮ್ಮಾಯಿ ಹೇಳಿದರು.

‘ಈ ಹಿಂದೆ ಮಂಗಳೂರು, ಡಿ.ಜಿ.ಹಳ್ಳಿ ಮತ್ತು ಶಿವಮೊಗ್ಗದಲ್ಲಿ ನಡೆದ ಪ್ರಕರಣಗಳಂತೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಘಟನೆಯ ಹಿಂದಿರುವ ವ್ಯಕ್ತಿಗಳು, ಸಂಘಟನೆಗಳು ಯಾರೇ ಇದ್ದರೂ ಅವರನ್ನು ಮಟ್ಟ ಹಾಕುತ್ತೇವೆ. ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿಕೊಡುವ ಸಂದರ್ಭ ಬಂದರೆ ಅದಕ್ಕೆ ಹಿಂಜರಿಯುವುದಿಲ್ಲ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT