ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೆಸ್‌ಕ್ಲಬ್‌ ದಿನಾಚರಣೆ: ಮೈಮುನಾ-ಮರ್ಝಿನಾಗೆ ಪ್ರಶಸ್ತಿ ಪ್ರದಾನ

Published 11 ಮಾರ್ಚ್ 2024, 5:51 IST
Last Updated 11 ಮಾರ್ಚ್ 2024, 5:51 IST
ಅಕ್ಷರ ಗಾತ್ರ

ಮಂಗಳೂರು: ಹೈನುಗಾರಿಕೆಯಲ್ಲಿ ಸಾಧನೆ ಮಾಡಿರುವ ಉಳ್ಳಾಲ ತಾಲ್ಲೂಕಿನ ಹರೇಕಳ ಗ್ರಾಮದ ಬಾವಲಿಗುರಿಯ ತಾಯಿ- ಮಗಳು ಮೈಮೂನಾ- ಮರ್ಝಿನಾ ಇಲ್ಲಿನ ಪ್ರೆಸ್ ಕ್ಲಬ್‌ನ 2023-24ರ ‘ವರ್ಷದ ಪ್ರಶಸ್ತಿ’ಯನ್ನು ಮರವೂರಿನಲ್ಲಿ ಏರ್ಪಡಿಸಿದ್ದ ಪ್ರೆಸ್‌ ಕ್ಲಬ್‌ ದಿನಾಚರಣೆಯಲ್ಲಿ ಭಾನುವಾರ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮರ್ಝಿನಾ, ‘ನನ್ನ ತಂದೆಯೂ ಇತರರಿಗೆ ಸಾಧ್ಯವಾದಷ್ಟು ನೆರವಾಗುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದರು.ಈ ಕಾರ್ಯವನ್ನು ನಾನು ಮತ್ತು ತಾಯಿ ಮುಂದುವರಿಸಿದ್ದೇವೆ. ಈ ಪ್ರಶಸ್ತಿ ನಿಡುವ ಮೂಲಕ ನಾವು ಮಾಡುತ್ತಿರುವ ಕೆಲಸವನ್ನು ಗುರುತಿಸಿರುವುದು ಖುಷಿ ತಂದಿದೆ’ ಎಂದರು.

ಪ್ರಶಸ್ತಿ ಪ್ರಧಾನ ಮಾಡಿದ ಶಾಸಕ ಡಾ.ವೈ.ಭರತ್‌ ಶೆಟ್ಟಿ, ‘ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆಯಲ್ಲಿ ಈ ತಾಯಿ ಮಗಳು ಮಾಡಿರುವ ಸಾಧನೆ  ಮಹಿಳಾ ಸಬಲೀಕರಣಕ್ಕೆ ಮಾದರಿ. ಇವರ ಗುರುತಿಸುವಿಕೆಯಿಂದ ಇತರರಿಗೂ ಪ್ರೇರಣೆ ಸಿಗಲಿ’ ಎಂದು ಹಾರೈಸಿದರು.

‘ರಾಜಕಾರಣಿಗಳು ಸರಿ ಇಲ್ಲ ಎಂಬ ಟೀಕೆ ಎಲ್ಲೆಡೆ ಕೇಳಿ ಬರುತ್ತಿದೆ. ಕೆಲವೊಮ್ಮೆ ನಮಗೇ, ‘ನಾವು ಒಳ್ಳೆಯವರಾ, ಕೆಟ್ಟವರಾ’ ಎಂಬ ಸಂದೇಹ ಮೂಡುತ್ತದೆ. ಜನ ಸಮಸ್ಯೆ ಹೇಳಿಕೊಂಡು ನಮ್ಮ ಬಳಿ ಬರುತ್ತಾರೆ. ಅವರಲ್ಲಿ ಒಂದಿಬ್ಬರ ಸಮಸ್ಯೆ ನಿವಾರಣೆ ಸಾಧ್ಯವಾಗದಿದ್ದರೂ ಅವರು, ‘ಈ ರಾಜಕಾರಣಿಗಳು ಹೀಗೆಯೇ’ ಎಂದು ಪ್ರಚಾರ ಮಾಡುತ್ತಾರೆ’ ಎಂದು ನೋವು ತೋಡಿಕೊಂಡರು.

‘ನೀರಿನ ಮಿತ ಬಳಕೆ ಬಗ್ಗೆ ಜನಜಾಗೃತಿ ಮೂಡಿಸುವ ಅಗತ್ಯವಿದೆ’ ಎಂದರು.

ಹಿರಿಯ ಪತ್ರಕರ್ತರಾದ ಪ್ರಕಾಶ್ ಮಂಜೇಶ್ವರ, ಕೃಷ್ಣ ಕೋಲ್ಚಾರ್, ರಾಜೇಶ್ ಕಿಣಿ, ಅನ್ನು ಮಂಗಳೂರು, ರವಿ ಪೊಸವಣಿಕೆ, ರಾಘವೇಂದ್ರ ಭಟ್,  ರವೀಂದ್ರ ಶೆಟ್ಟಿ ಕುತ್ತೆತ್ತೂರು, ಶರತ್ ಸಾಲ್ಯಾನ್ ಅಶೋಕ್ ಶೆಟ್ಟಿ ಬಿ.ಎನ್ ಅವರನ್ನು ಗೌರವಿಸಲಾಯಿತು. ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಪ್ರೆಸ್ ಕ್ಲಬ್ ಸಿಬ್ಬಂದಿ ಚಂಚಲಾಕ್ಷಿ ಅವರನ್ನು ಸನ್ಮಾನಿಸಲಾಯಿತು.

ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು.

ಸಿನಿಮಾ ನಟ -ನಿರ್ದೇಶಕ ದೇವದಾಸ್ ಕಾಪಿಕಾಡ್, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ.ಖಾದರ್ ಶಾ, ಪಾಳಿಕೆ ಸದಸ್ಯರಾದ ಶಶಿಧರ್ ಹೆಗ್ಡೆ, ಭಾಸ್ಕರ ಕೆ. ಮೊಯಿಲಿ, ನವೀನ್ ಡಿಸೋಜ, ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT