ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆ, ರಕ್ತದಲ್ಲಿ ಶುದ್ಧತೆ ಹುಡುಕಲಾಗದು: ಚಿಂತಕ ಪ್ರೊ.ಕೆ.ಸಚ್ಚಿದಾನಂದನ್‌

ಕೇರಳದ ಪ್ರಸಿದ್ಧ ಕವಿ
Last Updated 15 ಸೆಪ್ಟೆಂಬರ್ 2019, 13:22 IST
ಅಕ್ಷರ ಗಾತ್ರ

ಮಂಗಳೂರು: ‘ಜಗತ್ತಿನಲ್ಲಿ ಯಾವ ಭಾಷೆಯೂ ಶುದ್ಧವಾದುದಲ್ಲ. ಹಾಗೆಯೇ ಯಾರ ರಕ್ತವೂ ಶುದ್ಧವಾದುದಲ್ಲ. ಭಾಷೆ ಮತ್ತು ರಕ್ತದಲ್ಲಿ ಶುದ್ಧತೆಯನ್ನು ಹುಡುಕುವುದೇ ತಪ್ಪು’ ಎಂದು ಕೇರಳದ ಪ್ರಸಿದ್ಧ ಕವಿ, ಚಿಂತಕ ಪ್ರೊ.ಕೆ.ಸಚ್ಚಿದಾನಂದನ್‌ ಹೇಳಿದರು.

ಕವಿತಾ ಟ್ರಸ್ಟ್‌ ಸೇಂಟ್‌ ಆಗ್ನೆಸ್‌ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜೇಮ್ಸ್‌ ಮತ್ತು ಶೋಭಾ ಮೆಂಡೋನ್ಸಾ ದತ್ತಿ ಉಪನ್ಯಾಸ– 2019 ಕಾರ್ಯಕ್ರಮದಲ್ಲಿ ‘ಸ್ವಾತಂತ್ರ್ಯಾ ನಂತರದ ಭಾರತೀಯ ಕಾವ್ಯ’ ಕುರಿತು ಅವರು ಮಾತನಾಡಿದರು.

ರಕ್ತದ ಮೂಲ ಹುಡುಕಿದರೆ ಜಗತ್ತಿನ ಯಾವುದೋ ಮೂಲೆಗೆ ಹೋಗಿ ನಿಲ್ಲಬಹುದು. ಭಾರತದ ಎಲ್ಲ ಭಾಷೆಗಳೂ ಇತರ ಭಾಷೆಗಳಿಂದ ಹಲವು ಪದಗಳನ್ನು ಎರವಲು ಪಡೆದುಕೊಂಡಿವೆ. ಭಾರತದ ಭಾಷೆಗಳ ಮೇಲೆ ಪೋರ್ಚ್‌ಗೀಸ್‌, ಡಚ್‌, ಇಂಗ್ಲಿಷ್‌, ಅರೇಬಿಕ್ ಸೇರಿದಂತೆ ವಿದೇಶಿ ಭಾಷೆಗಳ ಪ್ರಭಾವ ಆಗಿದೆ ಎಂದರು.

ಎಲ್ಲ ಭಾಷೆಗಳೂ ಸ್ವತಂತ್ರ:ದೇಶದಲ್ಲಿರುವ ಎಲ್ಲ ಭಾಷೆಗಳೂ ಸ್ವತಂತ್ರವಾದ ಅಸ್ಮಿತೆಯನ್ನು ಹೊಂದಿವೆ. ಅವುಗಳಲ್ಲಿ ಮೇಲು, ಕೀಳು ಹುಡುಕುವುದು ಸಾಧ್ಯವಿಲ್ಲ. ಎಷ್ಟು ಜನ ಬಳಕೆ ಮಾಡುತ್ತಾರೆ ಎಂಬುದನ್ನು ಆಧರಿಸಿ ಒಂದು ಭಾಷೆಯ ಭವಿಷ್ಯವನ್ನು ನಿರ್ಧರಿಸಲಾಗದು. ಒಂದು ಭಾಷೆ ನಶಿಸಿದರೆ ಅದರೊಂದಿಗೆ ಜಗತ್ತನ್ನು ಗ್ರಹಿಸುವ ಒಂದು ವಿಧಾನವೂ ನಾಶವಾಗುತ್ತದೆ ಎಂದು ಪ್ರತಿಪಾದಿಸಿದರು.

ಬಹುತ್ವವೇ ಭಾರತದ ಪ್ರಜಾಪ್ರಭುತ್ವದ ಜೀವಾಳ. ಅದು ಉಳಿಯಬೇಕಾದರೆ ಇಲ್ಲಿರುವ ಹಲವು ಭಾಷೆ, ಹಲವು ಧರ್ಮ, ಹಲವು ಸಂಸ್ಕೃತಿಗಳೂ ಉಳಿಯಬೇಕು. ಆ ಮೂಲಕವೇ ಸಹಿಷ್ಣುತೆ ಪಸರಿಸಬೇಕು. ಸಾಂಸ್ಕೃತಿಕ ರಾಷ್ಟ್ರೀಯವಾದದ ಹೆಸರಿನಲ್ಲಿ ಕೆಲವು ಮಾತ್ರ ಭಾರತೀಯ, ಉಳಿದವು ಅಲ್ಲ ಎಂಬ ಪ್ರತಿಪಾದನೆ ಮಾಡುವುದು ಸಲ್ಲ ಎಂದರು.

‘ಮಹಾಕಾವ್ಯಗಳು ರಚನೆಯಾದ ಭಾಷೆಗಳು ಮಾತ್ರ ಶ್ರೇಷ್ಠ ಎಂದು ಭಾವಿಸಲಾಗದು. ಹಿಂದಿ ಮತ್ತು ಸಂಸ್ಕೃತದಲ್ಲಿ ರಚನೆಯಾದ ಮಹಾಕಾವ್ಯಗಳು ಮಾತ್ರ ಶ್ರೇಷ್ಠ ಎಂಬ ಕಲ್ಪನೆಯೂ ತಪ್ಪು. ಭಾರತದಲ್ಲಿ ವಿವಿಧ ಭಾಷೆಗಳಲ್ಲಿ 3,000ಕ್ಕೂ ಹೆಚ್ಚು ರಾಮಾಯಣ ಮಹಾಕಾವ್ಯಗಳಿವೆ. ಮಹಾಭಾರತದ ಬೇರೆ ಬೇರೆ ಆವೃತ್ತಿಗಳೂ ಇವೆ’ ಎಂದು ಹೇಳಿದರು.

ಕಲ್ಪನೆ, ಅನುಭವ:ಕಲ್ಪನೆ ಮತ್ತು ಅನುಭವಗಳು ಕಾವ್ಯವನ್ನು ಸುಂದರಗೊಳಿಸುತ್ತವೆ. ಈ ಎರಡೂ ಕಾವ್ಯದ ಜೀವಾಳ. ಒಂದು ವಿಷಯಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ವ್ಯಕ್ತಿಗಳಲ್ಲಿ ಕಲ್ಪನೆ ಮತ್ತು ಅನುಭವಗಳು ಬೇರೆಯೇ ಆಗಿರುತ್ತವೆ. ಹೀಗಾಗಿಯೇ ವೈವಿಧ್ಯಮಯವಾದ ಕಾವ್ಯಗಳು ಸೃಷ್ಟಿಯಾಗಲು ಸಾಧ್ಯವಾಗಿದೆ ಎಂದು ಹೇಳಿದರು.

ಕಾಲ ಬದಲಾದಂತೆ ಕಾವ್ಯದ ಮಾದರಿಗಳೂ ಬದಲಾಗಿವೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕ ಹಲವು ಹೊಸ ಮಾದರಿಯ ಕಾವ್ಯಗಳು ಬಂದವು. ಕೆಲವರು ಸ್ವಾತಂತ್ರ್ಯವನ್ನು ಕೊಂಡಾಡಿ ಬರೆದರು. ಇನ್ನೂ ಕೆಲವರು, ‘ದೇಶ ನಿಜವಾದ ಸ್ವರಾಜ್ಯ ಗಳಿಸುವುದಕ್ಕೆ ಬಹುದೂರ ಸಾಗಬೇಕು’ ಎಂಬ ವಾದವನ್ನು ಕಾವ್ಯದ ಮೂಲಕ ಮಂಡಿಸಿದರು ಎಂದರು.

ಭಕ್ತಿ ಪಂಥ, ಜೈನ ಮತ್ತು ಬೌದ್ಧ ಕಾವ್ಯ ಪಂಥ, ವಸಾಹತುಶಾಹಿ ವಿರೋಧಿ ಕಾವ್ಯ, ದಲಿತ ಕಾವ್ಯ, ಬುಡಕಟ್ಟು ಕಾವ್ಯ ಹೀಗೆ ಹಲವು ಮಜಲುಗಳನ್ನು ದಾಟಿಕೊಂಡು ಬಂದಿರುವ ಭಾರತೀಯ ಕಾವ್ಯ ಪರಂಪರೆಯಲ್ಲಿ ಈಗ ನೇಪಥ್ಯದ ಹಿಂದೆ ಇರುವವರು ಮಾತನಾಡುವ ಕಾವ್ಯಗಳ ಯುಗ ಆರಂಭವಾಗಿದೆ ಎಂದು ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT