ಶುಕ್ರವಾರ, ಆಗಸ್ಟ್ 12, 2022
25 °C
ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಧರ್ಮೇಂದ್ರ ಪ್ರಧಾನ್‌

'ಕೆಐಒಸಿಎಲ್‌ ಸಾಧನೆ ಇನ್ನಷ್ಟು ಹೆಚ್ಚಲಿ'-ಧರ್ಮೇಂದ್ರ ಪ್ರಧಾನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿ (ಕೆಐಒಸಿಎಲ್‌)ಯ ವಿವಿಧ ಯೋಜನೆಗಳಿಗೆ ಕೇಂದ್ರ ಪೆಟ್ರೋಲಿಯಂ ಹಾಗೂ ಉಕ್ಕು ಖಾತೆ ಸಚಿವ ಧರ್ಮೇಂದ್ರ ಪ್ರಧಾನ್‌, ವರ್ಚುವಲ್‌ ವೇದಿಕೆ ಮೂಲಕ ಚಾಲನೆ ನೀಡಿದರು.

ಕೆಐಒಸಿಎಲ್‌ನಲ್ಲಿ ಆರಂಭಿಸಲಾದ 6 ಮೆಗಾವ್ಯಾಟ್‌ ಸಾಮರ್ಥ್ಯದ ಸೌರ ವಿದ್ಯುತ್ ಘಟಕ, ಆದಿ ಚುಂಚನಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಆರಂಭಿಸಿದ ಆಮ್ಲಜನಕ ಉತ್ಪಾದನಾ ಘಟಕ, ಮಂಗಳೂರಿನ ಪೆಲ್ಲೆಟ್ ಘಟಕದಲ್ಲಿ ಬ್ಯಾರೆಲ್ ಟೈಪ್ ಬ್ಲೆಂಡರ್ ರಿಕ್ಲೇಮರ್, ಮೂಡುಬಿದಿರೆ ಸರ್ಕಾರಿ ಆಸ್ಪತ್ರೆಗೆ 50 ಹಾಸಿಗೆಗಳ ಸೌಲಭ್ಯಗಳನ್ನು ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಧರ್ಮೇಂದ್ರ ಪ್ರಧಾನ್, ಕರ್ನಾಟಕ ಸರ್ಕಾರ ಕೆಐಒಸಿಎಲ್‌ಗೆ ಗಣಿ ನಿರ್ವಹಣೆ ವಹಿಸಿರುವುದು ಸ್ವಾಗತಾರ್ಹ. ಈ ಮೂಲಕ ಕೆಐಒಸಿಎಲ್‌ ಇನ್ನಷ್ಟು ಸಾಧನೆ ಮಾಡಲಿ. ಜೊತೆಗೆ ಸ್ಥಳೀಯ ಅಭಿವೃದ್ಧಿಗೆ ಸಿಎಸ್‌ಆರ್‌ ಅನುದಾನವನ್ನು ವಿನಿಯೋಗಿಸಲಿ ಎಂದು ಸಲಹೆ ನೀಡಿದರು.

ಕೋವಿಡ್‌ 2 ನೇ ಅಲೆಯಿಂದಾಗಿ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಯಿತು. ದೇಶದಲ್ಲಿ ಆಮ್ಲಜನಕದ ಕೊರತೆ ಉದ್ಭವಿಸಿದ ಸಂದರ್ಭದಲ್ಲಿ ಉಕ್ಕು ಕಂಪನಿಗಳು ಹಾಗೂ ಪೆಟ್ರೋಲಿಯಂ ಕಂಪನಿಗಳು ಸಾಕಷ್ಟು ಸಹಕಾರ ನೀಡಿವೆ. ಸದ್ಯಕ್ಕೆ ಆಮ್ಲಜನಕದ ಕೊರತೆ ನೀಗಿದೆ ಎಂದರು.

ಲಸಿಕೆ ಅಭಿಯಾನ ಬಹುದೊಡ್ಡ ಯಶಸ್ಸು ಎಂದು ಬಣ್ಣಿಸಿದ ಸಚಿವ ಧರ್ಮೇಂದ್ರ ಪ್ರಧಾನ್‌, ಲಸಿಕಾ ಮೇಳದ ಮೂಲಕ ಒಂದೇ ದಿನ 82 ಲಕ್ಷ ಜನರಿಗೆ ಲಸಿಕೆ ಹಾಕುವ ಮೂಲಕ ದೇಶವು ಸಾಧನೆ ಮಾಡಿದೆ. 8.72 ಲಕ್ಷ ಜನರಿಗೆ ಲಸಿಕೆ ನೀಡುವ ಮೂಲಕ ದೇಶದಲ್ಲಿ ಕರ್ನಾಟಕ 2 ನೇ ಸ್ಥಾನದಲ್ಲಿದೆ ಎಂದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್‌, ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ, ಕೆಐಒಸಿಎಲ್‌ನ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಸುಬ್ಬರಾವ್, ಸಂಸದರು, ಶಾಸಕರು, ಕೆಐಒಸಿಎಲ್‌ನ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು