ಮಂಗಳೂರು: ತಮಗೆ ಅರ್ಹವಾಗಿ ಸಿಗಬೇಕಾದ ಸವಲತ್ತುಗಳನ್ನು ಸರ್ಕಾರ ನೀಡಿಲ್ಲ ಎಂದು ಆರೋಪಿಸಿ 2022ರ ಜುಲೈ 1 ರಿಂದ 2024ರ ಜುಲೈ 31ರ ಅವಧಿಯಲ್ಲಿ ನಿವೃತ್ತರಾಗಿರುವ ಸರ್ಕಾರಿ ನೌಕರರು ಇಲ್ಲಿನ ಮಿನಿ ವಿಧಾನ ಸೌಧದ ಬಳಿ ಮಂಗಳವಾರ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಮರಣ/ನಿವೃತ್ತಿ ಗ್ರಾಚುಯಿಟಿ (ಡಿಸಿಆರ.ಜಿ), ಏಕಗಂಟಿನಲ್ಲಿ ಸಿಗುವ ಭವಿಷ್ಯನಿಧಿ ಮೊತ್ತ (ಕಮ್ಯೂಟೇಶನ್), ಗಳಿಕೆ ರಜೆ ನಗದೀಕರಣದ ಸೌಲಭ್ಯವನ್ನು ಏಳನೇ ವೇತನ ಆಯೋಗದ ಶೀಪಾರಸಿನ ಲೆಕ್ಕಚಾರದಲ್ಲಿ ನೀಡಬೇಕು. ಇದಕ್ಕಾಗಿ ಸರ್ಕಾರ ಪರಿಷ್ಕೃತ ಆದೇಶ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ವೇದಿಕೆಯ ಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಸಂಚಾಲಕ ಸಿರಿಲ್ ರಾಬರ್ಟ್ ಡಿಸೋಜ, ‘ನಿವೃತ್ತರಾಗಿರುವ ಸರ್ಕಾರಿ ನೌಕರರು ಹಿರಿಯ ನಾಗರಿಕರ ದಿನಾಚರಣೆಯಂದೇ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾದ ಸ್ಥಿತಿ ಎದುರಾಗಿದ್ದು ವಿಪರ್ಯಾಸ. ದಯವಿಟ್ಟು ನಮ್ಮಂತಹ ಹಿರಿಯ ನಾಗರಿಕರು ತಮ್ಮ ಹಕ್ಕಿಗಾಗಿ ಬೀದಿಗೆ ಇಳಿಯುವಂತೆ ಮಾಡಬೇಡಿ’ ಎಂದು ಸರ್ಕಾರವನ್ನು ಆಗ್ರಹಿಸಿದರು.
‘ಸರ್ಕಾರವನ್ನು ನಾವು ಸಾಲ ಕೊಡಿ ಎಂದೇನೂ ಕೇಳುತ್ತಿಲ್ಲ. ಸೇವಾವಧಿಯಲ್ಲಿ ನಾವು ಮಾಡಿರುವ ಕೆಲಸಕ್ಕೆ ಅರ್ಹವಾಗಿ ಸಿಗಬೇಕಾದ ಸವಲತ್ತುಗಳನ್ನಷ್ಟೇ ಕೇಳುತ್ತಿದ್ದೇವೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ. ಅದಕ್ಕೂ ಸರ್ಕಾರ ಮಣಿಯದಿದ್ದರೆ ಬೆಳಗಾವಿಯಿಂದ ಬೆಂಗಳೂರಿನ ವಿಧಾನಸೌಧದವರೆಗೆ ಪಾದಯಾತ್ರೆ ನಡೆಸುತ್ತೇವೆ. ಆಗಲೂ ಸರ್ಕಾರ ನ್ಯಾಯ ಸಿಗದಿದ್ದರೆ ಕಾನೂನು ಹೋರಾಟಕ್ಕೂ ಸಿದ್ಧ’ ಎಂದರು.
ಜಿಲ್ಲಾ ಸಂಚಾಲಕ ನಾರಾಯಣ ಪೂಜಾರಿ, ‘ನಾವು ಹೆಚ್ಚುವರಿ ಸವಲತ್ತು ಕೇಳುತ್ತಿಲ್ಲ. ಸರ್ಕಾರದ ಯೋಜನೆಗಳ ಜಾರಿಯಲ್ಲಿ ನಮ್ಮ ಪಾತ್ರವಿದೆ. ಕೋವಿಡ್ ಸಮಯದಲ್ಲೂ ಧೃತಿಗೆಡದೆ ಕೆಲಸ ಮಾಡಿದ್ದೇವೆ. ಬದುಕಿನ ಇಳಿ ಹೊತ್ತಿನಲ್ಲಿ ಪ್ರತಿಭಟನೆಗೆ ಇಳಿಯುವಂತೆ ಮಾಡದಿರಿ’ ಎಂದರು.
ಸಂಚಾಲಕರಾದ ಮಂಜುಳಾ ಪ್ರಸ್ತಾವಿಕವಾಗಿ ಮಾತನಾಡಿದರು. ಸಂಘಟನೆಯ ಪ್ರಮುಖರು ಜಿಲ್ಲಾಧಿಕಾರಿಯವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ನಿವೃತ್ತ ನೌಕರರ ವಿಠಲ ಶೆಟ್ಟಿಗಾರ್, ವಿಜಯ ಪೈ, ಮೋಹನ ಬಂಗೇರ, ಎನ್. ಆನಂದ ನಾಯ್ಕ್, ಹೇಮನಾಥ, ಜೆರಾಲ್ಡ್, ಭಾರತಿ ಪಿ.ವಿ ಮೊದಲಾದವರು ಭಾಗವಹಿಸಿದರು.