ಶನಿವಾರ, ಏಪ್ರಿಲ್ 1, 2023
32 °C

ಭ್ರಷ್ಟಾಚಾರ, ಜನವಿರೋಧಿ ನೀತಿ ಆರೋಪ: ಉಪ್ಪಿನಂಗಡಿ ಗ್ರಾ. ಪಂ. ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಪ್ಪಿನಂಗಡಿ: ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರಾದಿಯಾಗಿ ಆಡಳಿತ ಸಮಿತಿ ಸದಸ್ಯರು ಭ್ರಷ್ಟಾಚಾರದಲ್ಲಿ ತೊಡಗಿಕೊಂಡು, ದುರಾಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರ ವತಿಯಿಂದ ಗ್ರಾಮ ಪಂಚಾಯಿತಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.

ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ. ಮಾತನಾಡಿ, ‘ಉಪ್ಪಿನಂಗಡಿ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರ ಆಡಳಿತವಿದ್ದು, ಜನ ವಿರೋಧಿ ನೀತಿಯನ್ನು ಅನುಸರಿಸಲಾಗುತ್ತಿದೆ. ಬಡ ಜನರ, ಸಾರ್ವಜನಿಕರ ಆಶೋತ್ತರಗಳಿಗೆ ಸ್ಪಂದಿಸಬೇಕಾದ ಪಂಚಾಯಿತಿ ಅಧ್ಯಕ್ಷರು ತಾನೇ ಕರೆದ ಸಾಮಾನ್ಯ ಸಭೆಯನ್ನು ತನ್ನ ಸ್ವಾರ್ಥ ಸಾಧನೆಗಾಗಿ ಸಭೆಯನ್ನೇ ಬರ್ಖಾಸ್ತುಗೊಳಿಸುವ ಮೂಲಕ ಜನಸಾಮಾನ್ಯರಿಗೆ ಅನ್ಯಾಯ ವೆಸಗಿದ್ದಾರೆ. ಸಭೆ ರದ್ದುಗೊಂಡಿದ್ದರಿಂದ ಮನೆ ನಿರ್ಮಾಣ ಪರವಾನಗಿ, ಅಂಗಡಿ ಪರವಾನಗಿ ಸೇರಿದಂತೆ ಇನ್ನಿತರ ಅರ್ಜಿಗಳ ವಿಲೇವಾರಿ ಆಗದೆ ಜನರು ಕಷ್ಟಕ್ಕೆ ಸಿಲುಕುವಂತಾಗಿದೆ. ಸರಿಯಾಗಿ ಆಡಳಿತ ನಡೆಸಲು ಆಗದ ಅಧ್ಯಕ್ಷರು ರಾಜೀನಾಮೆಯನ್ನು ಕೊಟ್ಟು ಹೊರನಡೆಯುವುದು ಸೂಕ್ತ’ ಎಂದರು.

ಕಾಂಗ್ರೆಸ್ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಉಮಾನಾಥ ಶೆಟ್ಟಿ ಪೆರ್ನೆ ಮಾತನಾಡಿ, ಪಂಚಾಯತ್ ರಾಜ್ ಕಾಯ್ದೆಯಲ್ಲಿ ಸಭೆ ಕರೆಯುವ ಅಧಿಕಾರ ಅಧ್ಯಕ್ಷರಿಗೆ ಹೇಗೆ ಕೊಡಲಾಗಿದೆಯೋ ಅದೇ ರೀತಿ ಸಭೆಯನ್ನು ನಡೆಸಿಕೊಂಡು ಹೋಗುವ ಜವಾಬ್ದಾರಿಯನ್ನು ಕೊಡಲಾಗಿದೆ. ಆದರೆ, ಗೌರವವನ್ನು ಉಳಿಸಿಕೊಳ್ಳದ ಅಧ್ಯಕ್ಷರು ಸಾಮಾನ್ಯ ಸಭೆಯನ್ನು ರದ್ದು ಮಾಡಿದ್ದಾರೆ. ಇದರಿಂದ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗುವಂತಾಗಿದೆ. ಪಂಚಾ ಯಿತಿ ಕಟ್ಟಡವನ್ನು ತನ್ನ ಸ್ವಂತಕ್ಕೆ ಬಳಸುವಂತಿಲ್ಲ. ಆದರೆ, ಇಲ್ಲಿ ಅಧ್ಯಕ್ಷರು ಕಟ್ಟಡವನ್ನು ಸ್ವಂತಕ್ಕೆ ಬಳಕೆ ಮಾಡಿ ಕೊಂಡಿರುವುದು ಕಾನೂನು ಬಾಹಿರ ವಾಗಿದ್ದು, ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಕೆಪಿಸಿಸಿ ಸದಸ್ಯರಾದ ಎಂ.ಎಸ್. ಮಹಮ್ಮದ್, ಕೃಪಾ ಆಳ್ವ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ರಹಿಮಾನ್ ಮಾತನಾಡಿದರು.

ಪ್ರತಿಭಟನೆಯಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯುನಿಕ್, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮುಹಮ್ಮದ್ ಆಲಿ, ಕಾಂಗ್ರೆಸ್ ಕೋಡಿಂಬಾಡಿ ವಲಯ ಅಧ್ಯಕ್ಷ ಮೋನಪ್ಪ ಪಲ್ಲಮಜಲು, ಪುತ್ತೂರು ತಾಲ್ಲೂಕು ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು, ಎಸ್‌ಡಿಪಿಐ ಮುಖಂಡ ಅಧ್ಯಕ್ಷ ಇಬ್ರಾಹಿಂ ಸಾಗರ್, ರಿಯಾಝ್ ಕಡಂಬೂರು, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಯು.ಟಿ. ತೌಸೀಫ್, ವಿದ್ಯಾಲಕ್ಷ್ಮೀ ಪ್ರಭು, ಯು.ಕೆ. ಇಬ್ರಾಹಿಂ, ಇಬ್ರಾಹಿಂ ಮೈಸಿದಿ, ಅಬ್ದುಲ್ ರಶೀದ್, ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ, ಅಜೀಜ್ ಬಸ್ತಿಕ್ಕಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು