ಮಂಗಳವಾರ, ಅಕ್ಟೋಬರ್ 22, 2019
25 °C
ದಕ್ಷಿಣ ಕನ್ನಡ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ

'ಪಬ್‌ಗಳಲ್ಲೇ ಮಾದಕವಸ್ತು ಪೂರೈಕೆಯಾಗುತ್ತಿದೆ'- ನ್ಯಾಯಾಧೀಶ ಸತ್ಯನಾರಾಯಣಾಚಾರ್ಯ

Published:
Updated:

ಮಂಗಳೂರು: ‘ನಗರದ ಪಬ್‌ಗಳಲ್ಲೇ ಅವ್ಯಾಹತವಾಗಿ ಮಾದಕವಸ್ತು ಪೂರೈಕೆ ನಡೆಯುತ್ತಿದೆ. ಎಳೆಯ ಮಕ್ಕಳಿಗೆ ಮದ್ಯದ ಜೊತೆ ಮಾದಕವಸ್ತುವನ್ನೂ ಮಿಶ್ರಣ ಮಾಡಿ ಪೂರೈಸಲಾಗುತ್ತಿದೆ’ ಎಂದು ದಕ್ಷಿಣ ಕನ್ನಡ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಕಾಡ್ಲೂರು ಸತ್ಯನಾರಾಯಣಾಚಾರ್ಯ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆಯ ಸಹಭಾಗಿತ್ವದಲ್ಲಿ ನಗರದ ಕೆನರಾ ಕಾಲೇಜಿನಲ್ಲಿ ಮಂಗಳವಾರ ನಡೆದ ‘ಶಾಲಾ, ಕಾಲೇಜುಗಳಲ್ಲಿ ಕೋಮು ಸೌಹಾರ್ದತೆ ಜಾಗೃತಿ ಹಾಗೂ ಮಾದಕದ್ರವ್ಯ, ಸೈಬರ್‌ ಕ್ರೈಂ ವಿರುದ್ಧದ ಅಭಿಯಾನ’ದ ಉದ್ಘಾಟನಾ ಸಮಾರಂಭದಲ್ಲಿ ಅವರು ಈ ಮಾಹಿತಿ ಬಹಿರಂಗಪಡಿಸಿದರು.


ನ್ಯಾಯಾಧೀಶ ಕಾಡ್ಲೂರು ಸತ್ಯನಾರಾಯಣಾಚಾರ್ಯ

‘ನನ್ನದೇ ಆದ ಮೂಲಗಳಿಂದ ಮಾಹಿತಿ ಕಲೆಹಾಕುತ್ತೇನೆ. ನಗರದಲ್ಲಿ ಪಬ್‌ಗಳಲ್ಲಿ ಎಳೆಯ ಮಕ್ಕಳಿಗೆ ಅರಿವಿಲ್ಲದಂತೆಯೇ ಮಾದಕವಸ್ತು ಪೂರೈಸಲಾಗುತ್ತಿದೆ. ಮಕ್ಕಳು ಮಾದಕವಸ್ತುವಿನ ದಾಸರಾಗಿ ಕಾಯಂ ತಮ್ಮ ಗ್ರಾಹಕರಾಗಿ ಇರಬೇಕು ಎಂಬ ದುರಾಸೆಯಿಂದ ಈ ರೀತಿ ಮಾಡಲಾಗುತ್ತಿದೆ. ಪಬ್‌ಗಳಲ್ಲೇ ಮಾದಕವಸ್ತುಗಳ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ’ ಎಂದರು.

ಜಿಲ್ಲೆಯ ಜನರಲ್ಲಿ ಹೆಚ್ಚಿನವರಿಗೆ ಉತ್ತಮ ಆದಾಯದ ಮೂಲಗಳಿವೆ. ಹಣದ ಲಭ್ಯತೆ, ಜೀವನ ಶೈಲಿ, ಸಂಸ್ಕೃತಿಯ ಹೆಸರಿನಲ್ಲಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೂ ಪಬ್‌ಗಳಿಗೆ ಹೋಗಲು ಪೋಷಕರು ಅವಕಾಶ ನೀಡುತ್ತಿದ್ದಾರೆ. ಅಲ್ಲಿ ಏನು ನಡೆಯುತ್ತಿದೆ ಎಂಬುದರ ಅರಿವು ಅವರಿಗೆ ಇದ್ದಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

‘ಕಳೆದ ವಾರ ಒಂದು ದಿನ ರಾತ್ರಿ 11.30ಕ್ಕೆ ಏಳು ಮಂದಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳನ್ನು ಮಾದಕವಸ್ತು ಸೇವನೆ ಪ್ರಕರಣದಲ್ಲಿ ಪೊಲೀಸರು ನನ್ನ ಎದುರು ಹಾಜರುಪಡಿಸಿದರು. ಅರ್ಧ ಗಂಟೆ ಕಾಲ ಅವರೊಂದಿಗೆ ಮಾತನಾಡಿದೆ. ಈ ಜಾಲದ ಕುರಿತು ಅವರು ನೀಡಿದ ಮಾಹಿತಿಗಳು ದಿಗ್ಭ್ರಮೆ ಹುಟ್ಟಿಸಿದವು’ ಎಂದರು.

ಮೂಲ ಹುಡುಕಿದರೆ ವರ್ಗಾವಣೆ ಶಿಕ್ಷೆ

‘ಜಿಲ್ಲೆಯಲ್ಲಿ ಮಾದಕವಸ್ತು ಪೂರೈಕೆ ಜಾಲ ದೊಡ್ಡದಾಗಿ ಬೆಳೆಯುತ್ತಿದೆ. ಯುವಕರನ್ನು ನಾಶ ಮಾಡಿದರೆ ದೇಶವನ್ನೂ ನಾಶ ಮಾಡಬಹುದು ಎಂಬ ಗುರಿ ಇಟ್ಟುಕೊಂಡು ಈ ಜಾಲ ಕೆಲಸ ಮಾಡುತ್ತಿದೆ. ಮಾದಕವಸ್ತು ಪೂರೈಕೆ ಜಾಲದ ಮೂಲಕ್ಕೆ ಕೈ ಹಾಕುವ ಅಧಿಕಾರಿಗಳನ್ನು ತಕ್ಷಣವೇ ವರ್ಗಾವಣೆ ಮಾಡುತ್ತಿರುವುದು ದುರದೃಷ್ಟಕರ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)